ಉಡುಪಿಯ ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಲಾಗುತ್ತಿದೆ. ಆದರೆ ಇದಕ್ಕೆ ಭಕ್ತ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.
ಉಡುಪಿ (ಏ.21): ಶಿರೂರು ಮಠಕ್ಕೆ ನೂತನ ಉತ್ತರಾಧಿಕಾರಿಯನ್ನು ಇಂದು ಸೋದೆ ಮಠಾಧೀಶರು ಘೋಷಿಸಲಿದ್ದು, ಇದಕ್ಕೆ ಶಿರೂರು ಮಠ ಭಕ್ತ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇದರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಎಚ್ಚರಿಸಿದೆ. ಸೋದೆ ಶ್ರೀಗಳು ಘೋಷಿಸಲಿರುವ 16 ವರ್ಷದ ವಟುವಿಗೆ ಇನ್ನೂ ಪ್ರಾಪ್ತ ವಯಸ್ಸಾಗಿಲ್ಲ, ಜೊತೆಗೆ ವೇದಾಂತ ಅಧ್ಯಯನ ಕೂಡ ಆಗಿಲ್ಲ, ಆದ್ದರಿಂದ ಇದು ಉಡುಪಿಯ ಅಷ್ಟಮಠಗಳ ಸಂವಿಧಾನಕ್ಕೆ ವಿರುದ್ಧವಾಗಿದೆ. ಆದ್ದರಿಂದ ಈ ನೇಮಕ ಸರಿಯಲ್ಲ ಎಂದು ಭಕ್ತ ಸಮಿತಿ ಪರ, ಶಿರೂರು ಮಠದ ಹಿಂದಿನ ಶ್ರೀ ಲಕ್ಷ್ಮೇವರ ತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಮತ್ತು ವಾದಿರಾಜ ಆಚಾರ್ಯರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ವಟುವಿನ ಆಯ್ಕೆ
ಮೂರು ವರ್ಷಗಳ ಹಿಂದೆ ಪೇಜಾವರ ಮಠದ ಹಿಂದಿನ ಯತಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅಷ್ಟಮಠಗಳಿಗೆ ಲಿಖಿತ ಸಂವಿಧಾನ ರಚಿಸಲಾಗಿದೆ. ಅದರಲ್ಲಿ ಬಾಲಯತಿ ನೇಮಿಸುವ ಪದ್ಧತಿ ಬಿಡಲಾಗಿದೆ. ಮಠಾಧೀಶರಾಗಿ ಸನ್ಯಾಸ ಪಡೆಯುವ ವಟುವಿಗೆ ಕನಿಷ್ಠ 20 ವರ್ಷ ವಯಸ್ಸು ಮತ್ತು 10 ವರ್ಷಗಳ ವೇದಾಂತ ಅಧ್ಯಯನ ಆಗಿರಬೇಕು ಎಂದು ಅದರಲ್ಲಿ ಹೇಳಲಾಗಿದೆ.
ಈಗ ವಿರೋಧದ ನಡುವೆಯೂ ಬಾಲಕನಿಗೆ ಸನ್ಯಾಸ ನೀಡಿದರೆ ಮುಂದೆ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಲಾಗಿದೆ ಎಂದು ಎಚ್ಚರಿಕೆ ನೀಡಿದರು. ಸೋದೆ ಮಠದ ಆಡಳಿತದಲ್ಲಿ ಶಿರೂರು ಮಠದ ಆಸ್ತಿಪಾಸ್ತಿ, ವ್ಯವಹಾರ ಪಾರದರ್ಶಕವಾಗಿಲ್ಲ. ಈ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ವಾರದಲ್ಲಿ ತೀರ್ಪು ಬರುವ ಸಾಧ್ಯತೆ ಇದೆ. ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಪೀಠಾಧಿಕಾರಿ ನೇಮಿಸುವುದಕ್ಕೆ ಅವಕಾಶ ಇಲ್ಲ ಎಂದವರು ಹೇಳಿದರು.