ಬಾಳೆಹೊನ್ನೂರು (ಅ.20) : ಇಂಧನ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಸಹ ಪ್ರತಿ ಭಾಗದಲ್ಲಿಯೂ ಟ್ರಾನ್ಸ್‌ಫಾರ್ಮರ್ ಪರಿಶೀಲನೆ ಮಾಡಬೇಕು ಎಂಬ ಉದ್ದೇಶದಿಂದ ರಾಜ್ಯಾದ್ಯಂತ ನ.1ರಿಂದ 15ರವರೆಗೆ ವಿದ್ಯುತ್ ನಿರ್ವಹಣಾ ಅಭಿಯಾನ ಆಯೋಜಿಸಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ಕುಮಾರ್ ಹೇಳಿದರು. ಖಾಂಡ್ಯ ಹೋಬಳಿಯ ದೇವದಾನ ಗ್ರಾಪಂ ವ್ಯಾಪ್ತಿಯ ಜೇನುಗದ್ದೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಿರುವ 66/11 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
SC-ST ಮೀಸಲಾತಿ ಏರಿಕೆಗೆ ಸುಗ್ರೀವಾಜ್ಞೆ ತರಲು ನಿರ್ಧರಿಸಿದ ಸಂಪುಟ
undefined
ಇಂಧನ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ನಿರಂತರವಾಗಿ ಮಾಡುತ್ತಿದ್ದು, ರೈತ, ಗ್ರಾಹಕ, ಉದ್ಯಮ ಸ್ನೇಹಿ ಸೇವೆ ನೀಡಬೇಕು ಎಂಬುದು ನಮ್ಮ ಇಲಾಖೆಯ ಆದ್ಯತೆಯಾಗಿದೆ. ಇಂಧನ ಇಲಾಖೆಯು ಪ್ರತಿಯೊಬ್ಬರಿಗೂ ಸಂಬಂಧಿಸಿದ ಇಲಾಖೆಯಾಗಿದ್ದು, ಈ ಇಲಾಖೆಯ ಸೇವೆಯ ಹೊರತಾಗಿ ಯಾರೂ ಇಲ್ಲ. ಗುಣಮಟ್ಟದ ವಿದ್ಯುತ್ ನೀಡಬೇಕು ಎಂಬುದು ಇಲಾಖೆಯ ಆದ್ಯತೆಯಾಗಿದೆ. ಈ ಹಿನ್ನೆಲೆ ಕಳೆದ ಒಂದು ವರ್ಷದಲ್ಲಿ 130 ವಿದ್ಯುತ್ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಗುಣಮಟ್ಟದ ವಿದ್ಯುತ್ ದೊರೆಯುತ್ತಿಲ್ಲ ಎನ್ನುತ್ತಿದ್ದವರ ಸಮಸ್ಯೆ ಬಗೆಹರಿಸಲಾಗಿದೆ ಎಂದರು.
2030ಕ್ಕೆ ರಾಜ್ಯದಲ್ಲಿ ಎಷ್ಟುವಿದ್ಯುತ್ ಉತ್ಪಾದನೆ ಆಗಬೇಕು ಎಂಬ ದೂರದೃಷ್ಟಿತ್ವವನ್ನು ಇಟ್ಟುಕೊಂಡು ಇಲಾಖೆ ಕೆಲಸ ಮಾಡುತ್ತಿದ್ದು, ಮುಂದಿನ 10 ವರ್ಷಗಳ ಕಾರ್ಯ ಯೋಜನೆಯನ್ನು ಈಗಾಗಲೇ ಇಲಾಖೆ ರೂಪಿಸುತ್ತಿದೆ. ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೂ ವಿದ್ಯುತ್ ದೊರೆಯಬೇಕು ಎಂಬ ಉದ್ದೇಶದಿಂದ ಬೆಳಕು ಯೋಜನೆ ಜಾರಿಗೆ ತಂದಿದ್ದು, ಕಳೆದ 1 ವರ್ಷದಲ್ಲಿ 2.5 ಲಕ್ಷ ಜನರಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಅಮೃತ ಜ್ಯೋತಿ ಯೋಜನೆಯಡಿ ಎಸ್.ಸಿ-ಎಸ್.ಟಿ ಸಮುದಾಯದವರಿಗೆ 75 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಜೇನುಗದ್ದೆ ಗ್ರಾಮಕ್ಕೆ ವಿದ್ಯುತ್ ಉಪಕೇಂದ್ರ ಬೇಕು ಎಂಬುದು ಬಹಳ ವರ್ಷಗಳ ಬೇಡಿಕೆಯಾಗಿದ್ದು, ಈಡೇರಿಸುವ ಪ್ರಯತ್ನ ಮಾಡಲಾಗಿದೆ. ಈ ಗ್ರಾಮದಲ್ಲಿ ವಿದ್ಯುತ್ ಕೇಂದ್ರ ಇಲ್ಲದೇ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದು ಅಸಾಧ್ಯವಾಗಿತ್ತು. ಇಲ್ಲಿರುವ ಎಲ್ಲ ತೊಡಕುಗಳನ್ನು ನಿವಾರಿಸಿ ಅತೀ ಶೀಘ್ರದಲ್ಲಿ ಕಾಮಗಾರಿ ಮುಗಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂದರು.
ರಾಜ್ಯ ಸರ್ಕಾರವು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಭೂಕಬಳಿಕೆ 192 ಕಾಯ್ದೆಯಿಂದ ಸಾಕಷ್ಟುಸಮಸ್ಯೆಯುಂಟಾಗಿತ್ತು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕ್ಯಾಬಿನೆಟ್‌ನಲ್ಲಿ ಕಾಯ್ದೆ ವಾಪಾಸ್ ಪಡೆಯಲಾಗಿದೆ. ಡೀಮ್‌್ಡ ಫಾರೆಸ್ಟ್ ಸಮಸ್ಯೆಯಿಂದ ಸಾಕಷ್ಟುತೊಂದರೆಗಳಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ 9 ಲಕ್ಷ ಹೆಕ್ಟೇರ್ ಡೀಮ್‌್ಡ ಫಾರೆಸ್ಟ್‌ನಲ್ಲಿ 6.5 ಲಕ್ಷ ಅರಣ್ಯ ಪ್ರದೇಶವನ್ನು ವಾಪಾಸ್ ಪಡೆದು ಕಂದಾಯ ಇಲಾಖೆಗೆ ನೀಡುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಆಯುಷ್ಮಾನ್ ಕಾರ್ಡ್‌ನಲ್ಲಿನ ನಿಯಮಾವಳಿಗಳು ಎಲ್ಲರಿಗೂ ತಲುಪುತ್ತಿರಲಿಲ್ಲ ಎಂದು ಯಶಸ್ವಿನಿ ಯೋಜನೆಯನ್ನು ಮರು ಆರಂಭಿಸಿ ಎಲ್ಲರಿಗೂ ಆರೋಗ್ಯ ಭಾಗ್ಯ ನೀಡುವ ಜನಪರ ಕೆಲಸ ಮಾಡಲಾಗುತ್ತಿದೆ ಎಂದರು.
ಸಣ್ಣ ಮತ್ತು ಮದ್ಯಮ ಬೆಳೆಗಾರರಿಗೆ 10ಎಚ್‌ಪಿವರೆಗೆ ವಿದ್ಯುತ್ ನೀಡುವ ಯೋಜನೆಯಲ್ಲಿ ಸಣ್ಣ ಮಾರ್ಪಾಡು ಆಗಬೇಕಿದೆ ಎಂದು ಜೀವರಾಜ್ ಅವರು ಮನವಿ ಮಾಡಿದ್ದು, ಬೆಂಗಳೂರಿಗೆ ತೆರಳಿದ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಅದಕ್ಕೆ ತಕ್ಷಣ ಸ್ಪಂದಿಸಲಾಗುವುದು ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಈ ಭಾಗದಲ್ಲಿ ವಿದ್ಯುತ್ ಉಪಕೇಂದ್ರವಿಲ್ಲದೆ ಗುಣಮಟ್ಟದ ವಿದ್ಯುತ್ ಜನರಿಗೆ ದೊರೆಯುತ್ತಿರಲಿಲ್ಲ. ಇದೀಗ ನೂತನ ಕೇಂದ್ರ ಆರಂಭಗೊಳ್ಳುವುದರಿಂದ ಗುಣಮಟ್ಟದ ವಿದ್ಯುತ್ ದೊರೆಯುವುದರೊಂದಿಗೆ ವಿದ್ಯುತ್ ಸಹ ಉಳಿತಾಯವಾಗಲಿದೆ. ಇಷ್ಟುಸಮಯ ವಿದ್ಯುತ್ ಇಲ್ಲದೇ ಡಿಸೇಲ್‌ಗೆ ಮೊರೆ ಹೋಗಿ ನಷ್ಟಅನುಭವಿಸುತ್ತಿತ್ತು. ಕೇಂದ್ರ ಆರಂಭದಿಂದ ಬೆಳೆಗಾರರಿಗೆ ವರದಾನವಾಗಲಿದೆ. ಕಳೆದ ಎರಡು ವರ್ಷಗಳಲ್ಲಿ ಅತಿವೃಷ್ಟಿಯಿಂದ ಹಲವು ಇಲಾಖೆಗಳು ಸಾಕಷ್ಟುನಷ್ಟಹೊಂದಿದ್ದರೂ ಸಹ ಇಂಧನ ಇಲಾಖೆ ಅವುಗಳನ್ನೆಲ್ಲಾ ಸರಿದೂಗಿಸಿಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ಇಂಧನ ಇಲಾಖೆಯಲ್ಲಿ ಸಚಿವ ಸುನೀಲ್‌ಕುಮಾರ್ ಅವರು ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಟ್ರಾನ್ಸ್‌ಫಾರ್ಮರ್ ಬ್ಯಾಂಕ್ ಆರಂಭಿಸಿ 24 ಗಂಟೆಯೊಳಗೆ ಟಿಸಿ ಬದಲಾವಣೆ ಐತಿಹಾಸಿಕ ನಿರ್ಧಾರವಾಗಿದೆ. ಸಣ್ಣ, ಮದ್ಯಮ ವರ್ಗದವರಿಗೆ ನೀಡುತ್ತಿರುವ 10 ಎಚ್‌ಪಿವರೆಗಿನ ಉಚಿತ ವಿದ್ಯುತ್‌ನ್ನು ಎಲ್ಲ ಬೆಳೆಗಾರರಿಗೂ ನೀಡಬೇಕು ಎಂದು ಕೋರಿದರು.
ದೇವದಾನ ಗ್ರಾಪಂ ಅಧ್ಯಕ್ಷೆ ಶೀಲಾವತಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ವಿ.ಮಂಜುನಾಥ್, ತಹಸೀಲ್ದಾರ್ ವಿನಾಯಕ್ ಸಾಗರ್, ಮೆಸ್ಕಾಂ ಎಂಡಿ ಪ್ರಶಾಂತ್‌ಕುಮಾರ್ ಮಿಶ್ರಾ, ಕೆಪಿಟಿಸಿಎಲ್ ಹಾಸನ ವಿಭಾಗದ ಮುಖ್ಯ ಎಂಜಿನಿಯರ್ ಎಂ.ಆರ್. ಶಾನುಭಾಗ್, ಬಸಪ್ಪ, ಅಧೀಕ್ಷಕ ಎಂಜಿನಿಯರ್ ಕೆ. ಸುರೇಶ್, ಪ್ರಮುಖರಾದ ಬಿ.ಎನ್. ಸೋಮೇಶ್, ಭಾಸ್ಕರ್ ವೆನಿಲ್ಲಾ, ಟಿ.ಎಂ. ಉಮೇಶ್, ಗುರುಮೂರ್ತಿ ಬೆಳಸೆ, ಜಯಶೀಲ್, ಎಚ್.ಎಸ್. ರವಿ, ದೀಪಕ್ ದೊಡ್ಡಯ್ಯ ಮತ್ತಿತರರು ಇದ್ದರು.
ಮುಂದಿನ ಸರ್ಕಾರ ನಮ್ಮದೇ: ಸುನೀಲ್- ರಾಜೇಗೌಡ ಹಾಸ್ಯ ಚಟಾಕಿ
ಶಾಸಕ ಟಿ.ಡಿ.ರಾಜೇಗೌಡರು ಮಾತನಾಡುತ್ತಿದ್ದಾಗ, ಸಚಿವ ಸುನೀಲ್‌ಕುಮಾರ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಜನಪರ ಕಾಳಜಿ, ಶ್ರಮದಿಂದಾಗಿ ಜೇನುಗದ್ದೆ ಗ್ರಾಮಕ್ಕೆ ವಿದ್ಯುತ್ ಉಪಕೇಂದ್ರ ಮಂಜೂರಾಗಿ ಶಂಕುಸ್ಥಾಪನೆ ನಡೆಯುತ್ತಿದೆ. ಸಚಿವ ಸುನೀಲ್‌ಕುಮಾರ್ ಅವರು ಮುಂದಿನ ದಿನಗಳಲ್ಲಿಯೂ ಇದೇ ರೀತಿ ಉತ್ತಮ ಕಾರ್ಯನಿರ್ವಹಿಸಲಿ ಎಂದರು.ಈ ವೇಳೆ ಮದ್ಯ ಪ್ರವೇಶಿಸಿದ ಸಚಿವ ಸುನೀಲ್‌ಕುಮಾರ್, ಹಾಗಾದರೇ ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಎನ್ನುತ್ತಿದ್ದೀರಾ ಎಂದು ನಸುನಗುತ್ತ ಪ್ರಶ್ನಿಸಿದರು.
ತಕ್ಷಣ ನಗುತ್ತಲೇ ಉತ್ತರಿಸಿದ ಶಾಸಕ ರಾಜೇಗೌಡರು, ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುವುದು. ಇನ್ನೊಮ್ಮೆ ಯಾವಾಗಲಾದರೂ ಅಧಿಕಾರಕ್ಕೆ ಬಂದಾಗ ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದರು. ಮುಂದಿನ ಬಾರಿ ಸರ್ಕಾರ ಯಾರದ್ದು ಎಂದು ಜನ ತೀರ್ಮಾನ ಮಾಡುತ್ತಾರೆ. ಜನರು ಯಾರಿಗೆ ಆಶೀರ್ವಾದ ಮಾಡುತ್ತಾರೋ ಅವರು ಅಧಿಕಾರ ನಡೆಸಲಿ. ನಿಮ್ಮ ಸರ್ಕಾರ ಬಂದರೆ ನಾನೇನು ಹೊಟ್ಟೆಕಿಚ್ಚು ಪಡುವುದಿಲ್ಲ. ಸಹಕಾರ ನೀಡುತ್ತೇನೆ ಎಂದು ನಗುತ್ತಾ ಹೇಳಿದರು.
ಸರಕಾರದಿಂದ 176 ಕ್ರೀಡಾ ಕೋಚ್‌ಗಳ ಹುದ್ದೆ ಮಂಜೂರು: ಕೆ.ಸಿ.ನಾರಾಯಣಗೌಡ
ಸಚಿವ ಸುನೀಲ್‌ಕುಮಾರ್ ಕಡೆಯಲ್ಲಿ ಮಾತನಾಡುವಾಗ ಜೇನುಗದ್ದೆ ಉಪಕೇಂದ್ರ ಕಾಮಗಾರಿ ಮುಗಿದ ಬಳಿಕ ಸಚಿವನಾಗಿ ನಾನೇ ಉದ್ಘಾಟನೆ ನೆರವೇರಿಸುತ್ತೇನೆ ಎನ್ನುವ ಮೂಲಕ ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಎಂದು ಪರೋಕ್ಷವಾಗಿ ಮುಗುಳ್ನಗುತ್ತಾ ಹೇಳಿದರು.