ಚಿಕ್ಕಮಗಳೂರು (ಅ.20) : ನಗರದ ಕಲ್ಲುದೊಡ್ಡಿ ಆಶ್ರಯ ಬಡಾವಣೆಯಲ್ಲಿ ಅನಧಿಕೃತವಾಗಿ ಮನೆ ಕಟ್ಟಿಲಕ್ಷಾಂತರ ರು. ಹಣ ಪಡೆದು, ಬಡವರಿಗೆ ಮಾರಾಟ ಮಾಡಿರುವ ಬಗ್ಗೆ ಬಂದಿರುವ ದೂರು ಅರ್ಜಿಗಳ ಆಧಾರದಲ್ಲಿ ನಾಲ್ವರ ಮೇಲೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಿಸುವಂತೆ ನಗರ ಆಶ್ರಯ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು. ನಗರಸಭೆಯಲ್ಲಿ ಬುಧವಾರ ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಗ್ರಾಮೀಣ ವಸತಿ ಯೋಜನೆಗಳಿಗೆ ಗ್ರಹಣ!
ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ನಾಗರಿಕರ ದೂರಿನ ಅನ್ವಯ ಕಲ್ಲುದೊಡ್ಡಿ ಆಶ್ರಯ ಬಡಾವಣೆಯಲ್ಲಿ ನಗರಸಭೆ ಅಧಿಕಾರಿ ಸಿಬ್ಬಂದಿ ಈ ಹಿಂದೆ ಭೇಟಿ ನೀಡಿ ಪರಿಶೀಲಿಸಿ ಅನಧಿಕೃತವಾಗಿ ಕಟ್ಟಿರುವ 17 ಮನೆಗಳನ್ನು ತೆರವುಗೊಳಿಸಲಾಗಿತ್ತು. ಆದರೂ ಕೆಲವು ಪ್ರಭಾವಿ ವ್ಯಕ್ತಿಗಳು ಯಾರದೋ ಹೆಸರಿನಲ್ಲಿದ್ದ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಿ ಎಂದು ಹೇಳಿ 4 ಮಂದಿ ಬಡವರಿಂದ .5.15 ಲಕ್ಷ ಹಣ ಪಡೆದಿದ್ದರು. ಈ ಬಗ್ಗೆ 4 ಮಂದಿ ದೂರು ಅರ್ಜಿ ನೀಡಿದ್ದರು. ಅದನ್ನು ಆಧರಿಸಿ ಮುಂದಿನ ದಿನಗಳಲ್ಲಿ ಯಾವುದೇ ಪ್ರಭಾವ ಬಳಸಿ ಬಡವರಿಗೆ ವಂಚನೆ ಮಾಡಬಾರದೆಂಬ ದೃಷ್ಟಿಯಿಂದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಿಸಲು ಸಭೆ ಸಮ್ಮತಿಸಿದೆ ಎಂದರು.
ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ವಸತಿ ಬಡಾವಣೆಯಲ್ಲಿ ವಾಸವಿರುವ ಫಲಾನುಭವಿಗಳು ಹಕ್ಕುಪತ್ರ ಹೊಂದಿದ್ದರೆ ಯಾವುದೇ ತಕರಾರಿಲ್ಲ. ಕೆಲವರು ಯಾವುದೇ ದಾಖಲಾತಿಗಳಿಲ್ಲದೇ 15ರಿಂದ 20 ವರ್ಷದಿಂದ ವಾಸವಿರುವ ಮನೆಗಳಿಗೆ ಭೇಟಿ ನೀಡಿ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಪರಿಶೀಲಿಸಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ನಗರ ವ್ಯಾಪ್ತಿಯ ನಗರಸಭೆ ಜಾಗಗಳಲ್ಲಿ ಹತ್ತಾರು ವರ್ಷಗಳಿಂದ ಅಕ್ರಮವಾಗಿ ಮನೆ ಕಟ್ಟಿಕೊಂಡು ನಗರಸಭೆಯ ಎಲ್ಲ ಮೂಲಭೂತ ಸೌಕರ್ಯಗಳನ್ನು ಪಡೆಯುತ್ತ ವಾಸಿಸುತ್ತಿದ್ದಾರೆ. ಆದರೆ ಅವರಿಗೆ ಯಾವುದೇ ದಾಖಲಾತಿಗಳು ಇಲ್ಲ. ಸಂಬಂಧಪಟ್ಟವಾರ್ಡ್ ಪರಿವೀಕ್ಷಕರು ಸಮೀಕ್ಷೆ ಮಾಡಿ ಅಂತಹ ಫಲಾನುಭವಿಗಳನ್ನು ಗುರುತಿಸಿ ಒಂದು ವಾರದೊಳಗೆ ಖಾತೆ ಇಲ್ಲದವರ ವಾರ್ಡ್‌ವಾರು ಪಟ್ಟಿನೀಡಲು ಕಂದಾಯ ಪರಿವೀಕ್ಷಕರುಗಳಿಗೆ ಸೂಚಿಸಲಾಗಿದೆ. ಅರ್ಹ ಫಲಾನುಭವಿಗಳಾಗಿದ್ದರೆ ಸರ್ವೆ ಮಾಡಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮೂಲಕ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿ ಹಕ್ಕುಪತ್ರ ನೀಡಲಾಗುತ್ತದೆ ಎಂದರು.
ಸದಸ್ಯ ಆರ್.ರಾಜೇಶ್ ಮಾತನಾಡಿ, ಬಡವರೇ ವಾಸವಾಗಿರುವ ಕಲ್ಲುದೊಡ್ಡಿ ಆಶ್ರಯ ಬಡಾವಣೆಯಲ್ಲಿ ಬಹಳಷ್ಟುಮನೆಗಳಿಗೆ ಹಕ್ಕುಪತ್ರವಿಲ್ಲ. ಆದ್ದರಿಂದ ಗುಡಿಸಲು, ಮನೆಗಳು ಕಟ್ಟಿಕೊಳ್ಳಲು ಮುಂದಾದರೆ ಅಥವಾ ವಿದ್ಯುತ್ ಸಂಪರ್ಕ, ರಸ್ತೆ, ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಮೂಲಸೌಲಭ್ಯಕ್ಕೆ ಪಡೆಯಲು ತೊಡಕಾಗಿದೆ ಎಂದಾಗ ಪೌರಾಯುಕ್ತ ಬಸವರಾಜ್ ಪ್ರತಿಕ್ರಿಯಿಸಿ, ಆಶ್ರಯ ಮನೆ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಮನೆಗಳಿಗೆ ಯಾವುದೇ ದಾಖಲಾತಿಗಳು ಇಲ್ಲದಿದ್ದರೆ ವಿದ್ಯುತ್ ಅಥವಾ ಯುಜಿಡಿ, ನೀರಿನ ಸಂಪರ್ಕ ಸಿಗುವುದಿಲ್ಲ. ಹಾಗಾಗಿ ಅಂಥವರಿಗೆ ಅನುಕೂಲ ಆಗಲೆಂದು ಸಧ್ಯದಲ್ಲೆ ಮನೆಗಳನ್ನು ಸರ್ವೆ ಮಾಡಿ, ಹಕ್ಕುಪತ್ರ ನೀಡಲಾಗುವುದು ಎಂದು ಹೇಳಿದರು.
ಆಶ್ರಯ ಸಮಿತಿ ಸದಸ್ಯ ಆರ್.ಎನ್. ನವೀನ್‌ಕುಮಾರ್ ಮಾತನಾಡಿ, ‘ಜಿ’ಪ್ಲಸ್-2 ಮಾದರಿಯಲ್ಲಿ ನಿರ್ಮಿಸುತ್ತಿರುವ ಮನೆಗಳಿಗೆ ಈಗಾಗಲೆ ಕೆಲವು ಫಲಾನುಭವಿಗಳು 50 ರಿಂದ 75 ಸಾವಿರ ರು. ಹಣ ಕಟ್ಟಿದ್ದು, ಇವರಲ್ಲಿ ಕೆಲವರು ಬ್ಯಾಂಕ್ ಸಾಲ ಕಟ್ಟದೇ ಡಿಫಾಲ್ಟರ್ ಆಗಿದ್ದವರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬ್ಯಾಂಕ್‌ನಲ್ಲಿ ಸಾಲ ಮಂಜೂರು ಮಾಡುತ್ತಿಲ್ಲ ಪರಿಶೀಲಿಸಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಕೂಲ ಮಾಡಿಕೊಡಿ ಎಂದರು. ಆಗ ಅಧ್ಯಕ್ಷ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ ಈ ಬಗ್ಗೆ ಫಲಾನುಭವಿಗಳಿಗೆ ಸಂಬಂಧಪಟ್ಟಬ್ಯಾಂಕ್ ಮ್ಯಾನೇಜರ್ ಜೊತೆ ಚರ್ಚಿಸಿದ್ದು, 60 ವರ್ಷ ಮೇಲ್ಲಟ್ಟವರಿಗೆ ಸಾಲ ನೀಡದ ಬಗ್ಗೆಯೂ ಶಾಸಕರು, ಜಿಲ್ಲಾಧಿಕಾರಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಅವರ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ವರ್ಷಾಂತ್ಯದೊಳಗೆ ಎಲ್ಲರಿಗೂ ವಸತಿ ಅಸಾಧ್ಯ: CAG
ಸಭೆಯಲ್ಲಿ ನಗರಸಭೆ ಕಂದಾಯ ಅಧಿಕಾರಿ ಬಸವರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರ್, ಕಿರಿಯ ಅಭಿಯಂತರ ಚಂದನ್, ರಶ್ಮಿ, ಉಪ ತಹಸೀಲ್ದಾರ್ ಶಾರದಮ್ಮ, ರಾಜಸ್ವ ನಿರೀಕ್ಷಕ ಜಿ.ಪಿ.ಜಗದೀಶ್, ವ್ಯವಸ್ಥಾಪಕ ಮಂಜುನಾಥ್, ನಾಗರಾಜ್ ಇದ್ದರು.