ಹೊರಗಿನವರು ಕಡಿವಾಣ ಹಾಕುವ ಮುನ್ನ ನಾವೇ ಹಾಕಿಕೊಳ್ಳೋಣ : ಜೋಗಿ

By Web Desk  |  First Published Jul 29, 2019, 4:16 PM IST

ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ಹೆಚ್ಚು ಕಳಂಕ ಎದುರಾಗುತ್ತಿದೆ. ಆದ್ದರಿಂದ ನಮಗೆ ನಾವೇ ಕಡಿವಾಣ ಹಾಕಿಕೊಳ್ಳುವ ಮೂಲಕ ವೃತ್ತಿ ಘನತೆ ಕಾಯ್ದುಕೊಳ್ಳೋಣ ಎಂದು ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ ಕರೆ ನೀಡಿದರು. ದಾವಣಗೆರೆಯಲ್ಲಿ ನಡೆದ ಮಾಧ್ಯಮ ದಿನಾಚರಣೆ ಹಾಗೂ ಮಾಧ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 


ದಾವಣಗೆರೆ [ಜು.29]: ರಾಜಕಾರಣಿಗಳು, ಪೊಲೀಸರು, ವಕೀಲರು, ಪತ್ರಕರ್ತರ ಮೇಲೆ ಪ್ರಸ್ತುತ ಹೆಚ್ಚು ಕಳಂಕ ಬರುತ್ತಿದ್ದು, ಹೊರಗಿನವರು ಬಂದು ಕಡಿವಾಣ ಹಾಕುವ ಮುನ್ನ ನಮಗೇ ನಾವೇ ಕಡಿವಾಣ ಹಾಕಿಕೊಂಡು, ವೃತ್ತಿ ಘನತೆ ಉಳಿಸಿಕೊಳ್ಳಬೇಕು ಎಂದು ಕನ್ನಡಪ್ರಭ ಪುರವಣಿ ಸಂಪಾದಕ, ಹಿರಿಯ ಲೇಖಕ ಗಿರೀಶ ರಾವ್ ಹತ್ವಾರ್(ಜೋಗಿ) ಕರೆ ನೀಡಿದರು. 

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ವರದಿಗಾರರ ಕೂಟ ಹಮ್ಮಿಕೊಂಡಿದ್ದ ಮಾಧ್ಯಮ ದಿನಾಚರಣೆ ಹಾಗೂ ಮಾಧ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ರಾಜಕಾರಣವನ್ನು ಶುದ್ಧಗೊಳಿಸುವ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ಧಾರಿ ಪತ್ರಕರ್ತರ ಮೇಲೆ ಹೆಚ್ಚಾಗಿದೆ ಎಂದರು. 

Tap to resize

Latest Videos

ಪತ್ರಕರ್ತರು ಸಂಬಳದ ಋಣ ಬಿಟ್ಟು, ಬೇರಾವುದೇ ಋಣಕ್ಕೂ ಬಲಿಯಾಗಬಾರದು. ಒಂದು ವೇಳೆ ಬೇರೆ ಬೇರೆ ಋಣಕ್ಕೆ ಬಲಿಯಾದರೆ ತಪ್ಪು ಮಾಡುವವರ ವಿರುದ್ಧ ಗಟ್ಟಿಯಾಗಿ ಮಾತನಾಡುವ ನೈತಿಕತೆಯೇ ಪತ್ರಕರ್ತನಿಗೆ ಇರುವುದಿಲ್ಲ. ಪ್ರಸ್ತುತ ದಿನಮಾನಗಳಲ್ಲಿ ಮಾಧ್ಯಮ ಕ್ಷೇತ್ರವು ರಾಷ್ಟ್ರ ನಿರ್ಮಾಣ ಮರೆತು, ಪಕ್ಷ ನಿರ್ಮಾಣದ ಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವಿಷಾದಿಸಿದರು. 

ಸಾಮಾಜಿಕ, ದೇಶದ ಅಭಿವೃದ್ಧಿ ವಿಷಯಗಳ ಕಡೆ ಪತ್ರಕರ್ತರು ಗಮನ ಹರಿಸದೇ, ಪಕ್ಷಗಳನ್ನು ಕಟ್ಟುವ ಕೆಲಸದಲ್ಲಿ ತಲ್ಲೀನರಾಗಿರುವುದು ಬೇಸರದ ಸಂಗತಿ. ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯ ತಳಹದಿಯನ್ನೇ ತಿರುಚಿ, ಪತ್ರಕರ್ತರನ್ನೇ ಸುಳ್ಳರನ್ನಾಗಿಸುವ ಕೆಲಸ ಸಾಗಿವೆ. ಸೋಷಿಯಲ್ ಮೀಡಿಯಾಗಳು ದೊಡ್ಡ ಮಾಫಿಯಾವಾಗಿ ಪರಿಣಮಿಸುತ್ತಿದ್ದು, ಪತ್ರಕರ್ತರನ್ನು ದೂಷಿಸುವ ಕೆಲಸಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇರುವ ತಂತ್ರಜ್ಞಾನ ಬಳಸಿ, ಅಪಪ್ರಚಾರಕ್ಕೆ ತಪ್ಪ ಉತ್ತರ ನೀಡಬೇಕು ಎಂದು ಅವರು ತಿಳಿಸಿದರು. 

ಪ್ರಸ್ತುತ ದಿನಮಾನಗಳಲ್ಲಿ ಪತ್ರಕರ್ತರ ಘನತೆ, ಪ್ರಾಮಾಣಿಕತೆ ಕಾಪಾಡಿಕೊಳ್ಳಬೇಕಾದ ಅವಶ್ಯಕತೆ ಇದ್ದು, ಗ್ರಾಮೀಣ ಪತ್ರಕರ್ತರಿಗೆ ಉತ್ತಮ ಗೌರವವಿದೆ. ಆದರೆ, ಮಹಾ ನಗರಗಳಲ್ಲಿ ಒಂದು ವರ್ಗ ನಿರ್ಲಕ್ಷ್ಯ ಮಾಡುತ್ತಿದೆ. ಇಂದಿನ ದಿನಮಾನಗಳಲ್ಲಿ ಪತ್ರಕರ್ತರದ್ದು ತ್ರಿಶಂಕು ಸ್ಥಿತಿಯಾಗಿದ್ದು, ಪತ್ರಕರ್ತರಿಗೆ ವರದಿ ಬರೆಯುವ ಸ್ವಾತಂತ್ರ್ಯವಿದೆ. ಸಮಾಜದಲ್ಲಿ ಮಾಧ್ಯಮದವರ ಘನೆ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಇಲ್ಲದಿದ್ದರೆ ತಳಪಾಯವೇ ಕುಸಿಯುವ ಅಪಾಯವೂ ಇಲ್ಲದಿಲ್ಲ ಎಂದು ಅವರು ಸೂಚ್ಯವಾಗಿ ಎಚ್ಚರಿಸಿದರು.

ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಿದ ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್.ನಾಗಣ್ಣ ಮಾತನಾಡಿ, ಪ್ರಸ್ತುತ ಪ್ರಶಸ್ತಿ, ಡಾಕ್ಟರೇಟ್‌ಗಳು ಮಾರಾಟಕ್ಕಿದ್ದು, ಅವುಗಳನ್ನು ಕೊಡುವವರು, ಪಡೆಯುವವರು ಎಚ್ಚರಿಕೆಯಿಂದ ಇರಬೇಕಿದೆ. ಪ್ರಶಸ್ತಿ, ಡಾಕ್ಟರೇಟ್‌ಗಳನ್ನೇ ಗುಮಾನಿಯಿಂದ ನೋಡಬೇಕಾದ ಕಾಲ ಇದು. ಪ್ರಶಸ್ತಿ ಪಡೆದವರೂ ಸಹ ಈ ಪ್ರಶಸ್ತಿಗೆ ತಾನು ಅರ್ಹನಿದ್ದೇನೆಯೇ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. 

ಮಾಧ್ಯಮಗಳನ್ನು ಇಂದು ಸ್ವೀಕರಿಸಬೇಕೋ, ಬೇಡವೋ ಎಂಬ ಸ್ಥಿತಿ ನಿರ್ಮಾಣವಾಗಿದೆ. ಮುದ್ರಣ, ದೃಶ್ಯ, ಶ್ರವಣ ಮಾಧ್ಯಮಗಳ ಜೊತೆಗೆ ಸಾಮಾಜಿಕ ಜಾಲತಾಣಗಳೂ ಸಹ ಮಾಧ್ಯಮದ ಸ್ಥಾನ ಪಡೆದಿವೆ. ಈ ಹಿನ್ನೆಲೆಯಲ್ಲಿ ಓದುಗರು, ನೋಡುಗರು ಯಾವುದನ್ನು ಆಯಕೆ ಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿದ್ದು, ಸ್ಥಿತ್ಯಂತರ ಹೆಚ್ಚಾದಾಗ ಆಯ್ಕೆ ಸವಾಲುಗಳು ಸಹ ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ. ಆದರೆ, ಮುಂದೊಂದು ದಿನದ ಮುದ್ರಣ ಮಾಧ್ಯಮವೊಂದೇ ಉಳಿಯಲಿದೆ ಎಂದು ಅವರು ಅಭಿಪ್ರಾಯಪಟ್ಟರು. 

ಹಿರಿಯ ಲೆಕ್ಕ ಪರಿಶೋಧಕ ಅಥಣಿ ಎಸ್.ವೀರಣ್ಣ ಮಾತನಾಡಿ, ಟಿಆರ್‌ಪಿಗಾಗಿ ಸುಳ್ಳು ಸುದ್ದಿಗಳನ್ನೇ ಅನೇಕ ವಾಹಿನಿಗಳು ಬಿತ್ತರಿಸುತ್ತಿದ್ದು, ಜನರೂ ಇದರಿಂದ ರೋಸಿ ಹೋಗಿದ್ದಾರೆ. ಮಾಧ್ಯಮಗಳು ಸಮಾಜವನ್ನು ತಿದ್ದುವ ಕೆಲಸ ಮಾಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ, ವರದಿಗಾರರ ಕೂಟಕ್ಕೆ ಸ್ವಂತ ನಿವೇಶನದ ಅವಶ್ಯಕತೆ ಇದ್ದು, ಆದಷ್ಟು ಬೇಗನೆ ಕೂಟದಿಂದ ಸ್ವಂತದ್ದೊಂದು ಪತ್ರಿಕಾ ಭವನ ನಿರ್ಮಿಸಿ. ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಹ ಪತ್ರಿಕಾ ಭವನ ನಿರ್ಮಾಣಕ್ಕೆ ಅನುದಾನದ ಕೊರತೆ ಇಲ್ಲವೆಂಬ ಮಾತನ್ನಾಡಿದ್ದಾರೆ ಎಂದು ತಿಳಿಸಿದರು. 

ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ ಅಧ್ಯಕ್ಷತೆ ವಹಿಸಿದ್ದರು. ಸುವರ್ಣ ಡಿಜಿಟಲ್ ಸಂಪಾದಕ ಎಸ್.ಕೆ.ಶ್ಯಾಮಸುಂದರ್, ಕೂಟದ ಸಂಸ್ಥಾಪಕ ಅಧ್ಯಕ್ಷ ಕೆ.ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ನಾಗರಾಜ ಎಸ್.ಬಡದಾಳ್, ಖಜಾಂಚಿ ಎ.ಎಲ್.ತಾರಾನಾಥ, ಪಾಲಿಕೆ ಕಂದಾಯ ಅಧಿಕಾರಿ ನಾಗರಾಜ ಇತರರು ಇದ್ದರು. ಪತ್ರಕರ್ತರಾದ ಮಂಜುನಾಥ ಗೌರಕ್ಕಳವರ, ಬಸವರಾಜ ದೊಡ್ಮನಿ, ಕೆ.ಎಸ್.ಚನ್ನಬಸಪ್ಪ(ಶಂಭು), ಪತ್ರಿಕಾ ಛಾಯಾಗ್ರಾಹಕ ವಿವೇಕ್ ಎಲ್.ಬದ್ಧಿ, ದೃಶ್ಯ ಮಾಧ್ಯಮದ ಕ್ಯಾಮೆರಾಮನ್ ಸಿ.ಎಸ್.ಶ್ಯಾಮ್‌ಗೆ ಮಾಧ್ಯಮ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಮಯೂರ್ ಗ್ಲೋಬಲ್ ಶಾಲೆಯ ಮಯೂರ್, ಖುಷಿ ಸಂಗೀತ ಕಾರ್ಯಕ್ರಮ ನೀಡಿದರೆ, ಶೇಖರ್ ತಬಲಾ ಸಾಥ್ ನೀಡಿದರು. ಸೌಮ್ಯ ಸತೀಶ ಧಾರವಾಡ, ಮಮತಾ ಶ್ರೀಧರ್ ಪ್ರಾರ್ಥಿಸಿದರು. ದೇವಿಕಾ ಸುನಿಲ್, ತೇಜಸ್ವಿನಿ ಪ್ರಕಾಶ, ಉಪಾಧ್ಯಕ್ಷ ಎನ್.ಆರ್.ನಟರಾಜ, ವಿನಾಯಕ ಪೂಜಾರ್, ಜೆ.ಎಸ್.ವೀರೇಶ, ಗಣೇಶ ಕಮ್ಲಾಪುರ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ವೇಳೆ ಈಚೆಗೆ ನಿಧನರಾದ ಯುವ ಪತ್ರಕರ್ತ ವಿಜಯ್ ಕೆಂಗಲಹಳ್ಳಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು.

click me!