ಮನುಷ್ಯನ ಆಸೆ, ಆಕಾಂಕ್ಷೆಗೆ ತೃಪ್ತಿಯೇ ಇಲ್ಲ : ಬಸವಪ್ರಭು ಸ್ವಾಮೀಜಿ ವಿಷಾದ

By Web Desk  |  First Published Jul 29, 2019, 3:48 PM IST

ಯಾರು ಸಮಾಜಮುಖಿಯಾಗಿ, ನೊಂದವರು, ಶೋಷಿತರು, ಬಡವರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೋ ಅಂತಹವರು ಬದುಕು ಸಾರ್ಥಕತೆ ಪಡೆಯುತ್ತದೆ. ಜೀವನವೆಂದರೆ ತನಗೋಸ್ಕರ ಬದುಕದೇ ನೊಂದವರ ಕಣ್ಣೀರು ಒರೆಸುವರೋ ಅಂತಹವರಿಗೆ ಬದುಕಿನಲ್ಲಿ ತೃಪ್ತಿ ಸಿಗುತ್ತದೆ ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಹೇಳಿದರು. ದಾವಣಗೆರೆಯಲ್ಲಿ ನಡೆದ ಸೋಷಿಯಲ್‌ ಇಂಪ್ಯಾಕ್ಟ್ ಅವಾರ್ಡ್‌-2019 ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.


ದಾವಣಗೆರೆ [ಜು.29]: ಹಸಿದವರು, ಬಡವರು, ಶೋಷಿತರು, ನಿರ್ಗತಿಕರಿಗೆ ದಾನ, ಕೈಲಾದ ನೆರವು ನೀಡುವ ಸದುದ್ದೇಶ ಯಾರು ಹೊಂದಿರುತ್ತಾರೋ ಅಂತಹವರಿಗೆ ಮಾತ್ರವೇ ತೃಪ್ತಿ, ನೆಮ್ಮದಿ ಸಿಗುತ್ತದೆ, ಇಂತಹ ಕಾರ್ಯಗಳಿಂದ ಪುಣ್ಯವೂ ಲಭಿಸುತ್ತದೆ ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ರೀಚ್‌ 4 ಕಾಜ್‌ ಟೆಕ್ನಾಲಜಿ ಲಿಮಿಟೆಡ್‌, ನಗರದ ಗೋ ಗ್ರೀನ್‌ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಸೋಷಿಯಲ್‌ ಇಂಪ್ಯಾಕ್ಟ್ ಅವಾರ್ಡ್‌-2019 ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

Latest Videos

undefined

ದಾವಣಗೆರೆ ಜನತೆ ಬೆಣ್ಣೆದೋಸೆಯಂತಹ ಮನಸ್ಸಿನ ಜೊತೆಗೆ ದಾನ, ಧರ್ಮ ಮಾಡುವಲ್ಲೂ ಹೃದಯವಂತರು ಎಂದ ಸ್ವಾಮೀಜಿ, ಮನುಷ್ಯನ ಆಸೆ, ಆಕಾಂಕ್ಷೆಗೆ ತೃಪ್ತಿಯೆಂಬುದೇ ಇಲ್ಲ. ಎಷ್ಟುಇದ್ದರೂ ಸಾಲದು. ಕೆಲವರಿಗೆ ಆಸ್ತಿ ಮಾಡುವ, ಮತ್ತೆ ಕೆಲವರು ಹಣ ಗಳಿಸುವ, ಮತ್ತೆ ಕೆಲವರು ದೊಡ್ಡ ಮನೆ, ಕಾರು ಮುಂತಾದವನ್ನು ಹೊಂದಬೇಕೆಂಬ ನಾನಾ ಯೋಚನೆಗಳಲ್ಲೇ ಕಾಲ ಕಳೆಯುತ್ತಾರೆ. ಅತೃಪ್ತರೆಂದರೆ ಯಾರು ಎಂಬುದಾಗಿ ಪ್ರತಿದಿನ ನಾವು ಟೀವಿಯಲ್ಲಿ ಈಗ ನೋಡುತ್ತಿದ್ದೇವೆ. ರಾಜಕಾರಣದಲ್ಲಿ ತೃಪ್ತಿಯೆಂಬುದೇ ಇಲ್ಲ ಎಂದು ಶ್ರೀಗಳು ವಿಷಾದಿಸಿದರು.

ಯಾರು ಸಮಾಜಮುಖಿಯಾಗಿ, ನೊಂದವರು, ಶೋಷಿತರು, ಬಡವರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೋ ಅಂತಹವರು ಬದುಕು ಸಾರ್ಥಕತೆ ಪಡೆಯುತ್ತದೆ. ಜೀವನವೆಂದರೆ ತನಗೋಸ್ಕರ ಬದುಕದೇ ನೊಂದವರ ಕಣ್ಣೀರು ಒರೆಸುವರೋ ಅಂತಹವರಿಗೆ ಬದುಕಿನಲ್ಲಿ ತೃಪ್ತಿ ಸಿಗುತ್ತದೆ. ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್‌, ಮದರ್‌ ಥೆರೇಸಾರಂತಹ ದಾರ್ಶನಿಕರು ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸಿ, ಮಾನವೀಯತೆ ಮೆರೆದವರು. ಇಂತಹವರ ಆದರ್ಶ ಪ್ರತಿಯೊಬ್ಬರಿಗೂ ದಾರಿ ದೀಪವಾಗಲಿ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್‌.ಎಸ್‌.ಮಂಜುನಾಥ ಕುರ್ಕಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ನಾವು ದುಡ್ಡಿನ ಹಿಂದೆ ಹೋಗುತ್ತಿದ್ದು, ಮಾನವೀಯ ಮೌಲ್ಯಗಳನ್ನೇ ಕಳೆದು ಕೊಳ್ಳುತ್ತಿದ್ದೇವೆ. ನೊಂದವರಿಗೆ ಸ್ಪಂದಿಸಬೇಕಾದ ರಾಜಕಾರಣಿಗಳು ರೆಸಾರ್ಟ್‌, ತಾರಾ ಹೊಟೆಲ್‌ಗಳಲ್ಲಿ ವಾಸ್ತವ್ಯ ಮಾಡುತ್ತಾ, ಜೀವನ ಕಳೆಯುತ್ತಿದ್ದಾರೆ. ಇಂತಹವುರಿಂದ ನಾವು ಬದುಕನ್ನು ಕಟ್ಟಿಕೊಳ್ಳುವುದಾದರೂ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ರೀಟ್‌ 4 ಕಾಜ್‌ ಟೆಕ್ನಾಲಜಿ ಲಿಮಿಟೆಡ್‌ನಂತಹ ಸರ್ಕಾರೇತರ ಸಂಸ್ಥೆಗಳು ಇಂತಹ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಸಂಗತಿ. ಇಂತಹ ಸಂಸ್ಥೆಗಳು ಸರ್ಕಾರದ ಯೋಜನೆಗಳನ್ನು ಅಶಕ್ತರು, ನೊಂದವರಿಗೆ ತಲುಪಿಸುವ ಕಾರ್ಯ ನಿರ್ವಹಿಸುತ್ತಿವೆ. ಎಲೆ ಮರೆಯ ಕಾಯಿಯಂತೆ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ವ್ಯಕ್ತಿ, ಸಂಸ್ಥೆಗಳನ್ನು ಗುರುತಿಸಿ, ಸನ್ಮಾನಿಸುವ ಮೂಲಕ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಸುವರ್ಣ ನ್ಯೂಸ್.ಕಾಂ ಮುಖ್ಯ ಸಂಪಾದಕರಾದ ಎಸ್.ಕೆ.ಶಾಮಸುಂದರ್, ಕನ್ನಡ ಪುರವಣಿ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್, ಚನ್ನಗಿರಿಯ ಕೇದಾರಲಿಂಗ ಶಾಂತವೀರ ಸ್ವಾಮೀಜಿ, ಸಂಸ್ಥೆಯ ಸಿಇಓ ರಾಘವ್‌ ಶೆಟ್ಟಿ, ಡಾ.ಕಲೀಂ ಷರೀಫ್‌, ಎಂಡಿ ಜೆ.ಆರ್‌.ಮಂಜುನಾಥ, ನಿರ್ದೇಶಕ ಆರ್‌.ಶಿವಕುಮಾರ, ರಾಯಭಾರಿ ವಾಣಿ ಕೇಶವ, ಡಾ.ಸುರೇಶ ಹನಗವಾಡಿ, ಜಿಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ ಮಹೇಶ, ಪಾಲಿಕೆ ಮಾಜಿ ಸದಸ್ಯ ದಿನೇಶ ಕೆ.ಶೆಟ್ಟಿ, ಪೋಪಟ್‌ ಲಾಲ್‌ ಚೈನ್‌, ಮಂಜುಳಾ ಬಸವಲಿಂಗಪ್ಪ, ಶ್ರೀಕಾಂತ ಬಗರೆ, ರೋಟರಾರ‍ಯಕ್ಟ್ನ ಮಾನಸ, ಶೃತಿ ಕಬ್ಬೂರು, ಕೆ.ಎನ್‌.ಸುರೇಶ, ಚೇತನಕುಮಾರ, ಪ್ರವೀಣಕುಮಾರ, ಶ್ರೀಧರ, ಗಿರೀಶ, ಜ್ಯೋತಿ ಹಿರೇಮಠ ಇತರರು ಇದ್ದರು.

ಇದೇ ವೇಳೆ ಕರುಣಾ ಜೀವ ಕಲ್ಯಾಣ ಟ್ರಸ್ಟ್‌, ಸಂವೇದ ಟ್ರಸ್ಟ್‌, ಸ್ಪಂದನ, ಸಂಕಲ್ಪ ವಿಕಲಚೇತನ ಶಾಲೆ, ಅಂಗವಿಕಲ ಆಶಾಕಿರಣ ಟ್ರಸ್ಟ್‌, ಹಿಮೋಫಿಲಿಯಾ ಸೊಸೈಟಿ, ಯೋಗ ಕೇಂದ್ರ, ವೈಯಕ್ತಿಕ ಪ್ರಶಸ್ತಿಯಲ್ಲಿ ಗಿರೀಶ ದೇವರಮನಿ, ಚನ್ನಬಸವ ಶೀಲವಂತ, ಮಾಧವಿ ಗೋಪಾಲ ಕೃಷ್ಣ ಇತರರನ್ನು ಸನ್ಮಾನಿಸಲಾಯಿತು.

click me!