ವಿಜಯಪುರ: ನಿರ್ಮೋಹಿ ಇಲ್ಲದೆ ನೀರವ ಮೌನ ತಾಳಿದ ಆಶ್ರಮ..!

By Kannadaprabha News  |  First Published Jan 5, 2023, 8:30 PM IST

ಶ್ರೀಗಳಿಲ್ಲದೆ ಭಣಗುಡುತ್ತಿರುವ ಜ್ಞಾನಯೋಗಾಶ್ರಮ, ಚಿತಾಭಸ್ಮ ದರ್ಶನ ಪಡೆದು ಕಣ್ಣೀರಾಗುತ್ತಿರುವ ಭಕ್ತವೃಂದ, ಸಿದ್ದೇಶ್ವರ ಸ್ವಾಮೀಜಿಗಳು ಇಲ್ಲದೇ ಆಶ್ರಮದ ಆವರಣವೇ ಸ್ತಬ್ಧ. 


ಖಾಜಾಮೈನುದ್ದೀನ್‌ ಪಟೇಲ್‌

ವಿಜಯಪುರ(ಜ.05):  ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನಿಸರ್ಗದ ಮಡಿಲಿಗೆ ಸೇರಿದ ಹಿನ್ನೆಲೆಯಲ್ಲಿ ಜ್ಞಾನಯೋಗಾಶ್ರಮ ಆವರಣ ಕೂಡ ಮೌನ ತಾಳಿತ್ತು. ಪ್ರತಿನಿತ್ಯ ನಡೆಯುವ ಚಟುವಟಿಕೆಗಳು ಜ್ಞಾನಯೋಗಿ ಇಲ್ಲದೇ ಆವರಣವೇ ಸ್ತಬ್ಧವಾಗಿತ್ತು. ನಗರದ ಜ್ಞಾನಯೋಗಾಶ್ರಮ ಆವರಣದಲ್ಲಿ ಪ್ರತಿದಿನ ಪೂಜೆ, ಪ್ರವಚನ, ಆಧ್ಯಾತ್ಮಿಕ ಚಟುವಟಿಕೆ ನಡೆಯುತ್ತಿತ್ತು. ಆದರೆ, ನಿರ್ಮೋಹಿ ನಿರ್ಗಮನವಾದ ಬಳಿಕ ಈ ಎಲ್ಲ ಚಟುವಟಿಕೆಗಳು ಕೂಡ ಇಲ್ಲವಾಗಿವೆ. ಸಿದ್ದೇಶ್ವರ ಮಹಾಸ್ವಾಮೀಜಿಗಳು ಪ್ರತಿದಿನ ಬೆಳಗ್ಗೆ 3 ಗಂಟೆಗೆ ಎದ್ದರೇ ಅಲ್ಲಿಂದ ಆಶ್ರಮದ ಚಟುವಟಿಕೆ ಆರಂಭವಾಗುತ್ತಿತ್ತು. ನಾಲ್ಕು ಗಂಟೆಗೆ ಶ್ರೀಗಳು ನಡಿಗೆ (ವಾಕಿಂಗ್‌) ಮಾಡುತ್ತಿದ್ದರು. ನಂತರ ಅಲ್ಲಿನ ಭಕ್ತರು ಶ್ರೀಗಳ ಪ್ರವಚನಕ್ಕೆ ಆಗಮಿಸುತ್ತಿದ್ದರು. ಆದರಿಂದ ಶ್ರೀಗಳ ಕಾಯ ಅಳಿದು ಅವರ ಪವಿತ್ರ ಚಿತಾಭಸ್ಮವೊಂದೇ ಅಲ್ಲಿ ಉಳಿದುಕೊಂಡಿದೆ.

Latest Videos

undefined

ಶ್ರೀಗಳನ್ನು ಕಳೆದುಕೊಂಡ ಆಶ್ರಮದ ಸ್ವಾಮಿಗಳು, ಭಕ್ತರಲ್ಲಿ ದುಗುಡ ಇನ್ನೂ ಮನೆ ಮಾಡಿತ್ತು. ನಡೆದಾಡುವ ದೇವರು ಭೌತಿಕವಾಗಿ ಇಲ್ಲದೇ, ಆಶ್ರಮದ ಸುತ್ತಲಿನ ವಾತಾವರಣ ಭಣಗುಡುತ್ತಿತ್ತು. ಆಶ್ರಮದ ಆವರಣದಲ್ಲಿ ನಸುಕಿನ ಜಾವವೇ ಭಕ್ತಾದಿಗಳ ಬಂದಿದ್ದರು. ಶ್ರೀಗಳ ಪವಿತ್ರ ಚಿತಾಭಸ್ಮದ ದರ್ಶನ ಪಡೆದು ಅಲ್ಲಲ್ಲಿ ಕುಳಿತುಕೊಂಡು ಕಣ್ಣೀರು ಹಾಕುತ್ತಾ, ದೇವರೆ ಮತ್ತೆ ಹುಟ್ಟಿಬನ್ನಿ. ನಮ್ಮ ಆಯುಷ್ಯ ನಿಮಗೆ ನೀಡುತ್ತೇವೆ ಎಂದು ಕಂಬನಿ ಮಿಡಿಯುವ ದೃಶ್ಯ ಮನಕಲುಕುತ್ತಿತ್ತು.

ಅನಂತವಾದರು ಶತಮಾನದ ಸಂತ: ಪಟ್ಟ ಬೇಡ.. ಪದ್ಮಶ್ರಿಯೂ ಬೇಡ ಅಂದಿದ್ದ ಸಿದ್ದೇಶ್ವರ ಶ್ರೀ!

ಗುರುವಿಗೆ ಭಕ್ತಿಪೂರ್ಣ ನಮನ:

ಆಶ್ರಮದಲ್ಲಿ ಬೆಳಗ್ಗೆ ಭಕ್ತರು ಭಕ್ತಿಭಾವದಿಂದ ಭಜನೆ, ಭಕ್ತಿಗೀತೆ, ವಚನ ಪಠಣ, ಮಂತ್ರ ಪಠಣದ ಮೂಲಕ ಗುರುವಿಗೆ ಭಕ್ತಿಪೂರ್ಣ ನಮನ ಸಲ್ಲಿಸುವ ಕಾರ್ಯದಲ್ಲಿ ನಿರತವಾಗಿದ್ದರು. ದಯಾಮಯ ಗುರು ಕರುಣಾಮಯ.....ದಯಾಮಯ ಗುರು ಕರುಣಾಮಯ..., ಸದ್ಗುರು ದೊರೆತರೆ ಜೀವನ ಪಾವನವೂ....ಹೀಗೆ ಅನೇಕ ಭಕ್ತಿಗೀತೆಗಳನ್ನು ಮಹಿಳಾ ಭಕ್ತರು ಸುಶ್ರಾವ್ಯವಾಗಿ, ರಾಗಬದ್ಧವಾಗಿ ಹಾಡಿ ಶ್ರೀಗಳಿಗೆ ಭಕ್ತಿ ಅರ್ಪಿಸಿದರು. ಆವರಣದ ಪ್ರಣವ ಮಂಟಪದಲ್ಲಿಯೂ ಧ್ಯಾನ, ಭಜನೆ, ಜಪ-ತಪಗಳಲ್ಲಿ ಭಕ್ತರು ನಿರತರಾಗಿದ್ದರು.

ಶ್ರೀಗಳ ಭಾವಚಿತ್ರಕ್ಕೆ ಭಾರಿ ಬೇಡಿಕೆ:

ನಗರದ ಜ್ಞಾನಯೋಗಾಶ್ರಮ ಆವರಣದ ಮುಂಭಾಗದಲ್ಲಿ ಹಲವಾರು ವ್ಯಾಪಾರಸ್ಥರು ಅಂಗಡಿಗಳು ಹಾಕಿದ್ದರು. ಅಲ್ಲಿ ಶ್ರೀಗಳ ಭಾವಚಿತ್ರವನ್ನು ಮಾರಾಟಕ್ಕೆ ಇಟ್ಟಿದ್ದರು. ಭಕ್ತರು ಫೋಟೊ ಖರೀದಿಸಲು ಮುಗಿಬಿದ್ದರು. .100ರಿಂದ .1000 ಬೆಲೆಯ ಭಾವಚಿತ್ರಗಳು ಮಾರಾಟಕ್ಕೆ ಇಡಲಾಗಿತ್ತು. ಇದೆ ವೇಳೆ ರುದ್ರಾಕ್ಷಿ, ವಿಭೂತಿ, ಮಾಲೆ ಸೇರಿದಂತೆ ಹಲವಾರು ಆಧ್ಯಾತ್ಮಿಕ ವಸ್ತುಗಳು ಭಕ್ತರು ಖರೀದಿಸಿದ್ದರು. ಬೆಳಗ್ಗೆಯಿಂದ ಶ್ರೀಗಳ ಭಾವಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ವ್ಯಾಪಾರಸ್ಥ ಸದಾಶಿವ ಹಿರೇಮಠ ತಿಳಿಸಿದರು.

ಮಕ್ಕಳಿಂದ ಸ್ವಚ್ಛತಾ ಕಾರ್ಯ:

ವಿಜಯಪುರ ತಾಲೂಕಿನ ಐನಾಪೂರದ ಕರ್ನಾಟಕ ಪಬ್ಲಿಕ್‌ ಶಾಲೆಯ ಮಕ್ಕಳು, ಶಿಕ್ಷಕರು ಸ್ವಯಂ ಪ್ರೇರಿತವಾಗಿ ಆಶ್ರಮ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಬೆಳಗ್ಗೆ 120 ವಿದ್ಯಾರ್ಥಿಗಳು ಹಾಗೂ ಆರು ಜನ ಶಿಕ್ಷಕರನ್ನೊಳಗೊಂಡ ತಂಡ ಇಡೀ ಆವರಣವನ್ನು ಸ್ವಚ್ಛಗೊಳಿಸಿತು. ನಂತರ ವಿದ್ಯಾರ್ಥಿಗಳು ಪವಿತ್ರ ಚಿತಾಭಸ್ಮದ ದರ್ಶನ ಪಡೆದುಕೊಂಡರು. ಸರತಿ ಸಾಲಿನಲ್ಲಿ ನಿಂತು ಶ್ರೀಗಳ ಚಿತಾಭಸ್ಮವನ್ನು ಭಕ್ತಿಯಿಂದ ನಮಿಸಿ, ಮುಂಭಾಗದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಹಣೆ ಇಟ್ಟು ನಮಿಸಿ ಮುಂದೆ ಸಾಗುತ್ತಿದ್ದರು.

ಈ ಸಮಯದಲ್ಲಿಯೂ ಜನಸಂದಣಿಯಾಗದಂತೆ ನೋಡಿಕೊಳ್ಳಲು ಪೊಲೀಸ್‌ ಇಲಾಖೆವೂ ಬುಧವಾರ ಕೂಡ ನೂರಾರು ಸಿಬ್ಬಂದಿಯನ್ನು ನಿಯೋಜಿಸಿತ್ತು. ಮಂಗಳವಾರದ ಅಂತಿಮ ದರ್ಶನ ಸಂದರ್ಭದಲ್ಲಿ ಮಾಡಲಾದ ವ್ಯವಸ್ಥೆ ರೀತಿಯಲ್ಲಿ ಸಿಂಗಲ್‌ ಬ್ಯಾರಿಕೇಡ್‌ ಮಾರ್ಗ ರೂಪಿಸಿ ಪವಿತ್ರ ಚಿತಾಭಸ್ಮದ ದರ್ಶನ ವ್ಯವಸ್ಥೆ ಮಾಡಿದ್ದರು.

ಜ್ಞಾನಯೋಗಿ ಸಿದ್ದೇಶ್ವರ ಶ್ರೀಗೆ 20 ಲಕ್ಷ ಭಕ್ತರಿಂದ ಅಂತಿಮ ನಮನc

ಸೈನಿಕ ಶಾಲೆಯಲ್ಲಿ ಭಣಭಣ:

ಸಿದ್ದೇಶ್ವರ ಮಹಾಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಸೈನಿಕ ಶಾಲೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಲಕ್ಷಾಂತರ ಭಕ್ತರ ಮಹಾಪೂರವೇ ಹರಿದು ಬಂದಿತ್ತು. ಆದರೆ ಬುಧವಾರ ಶ್ರೇಷ್ಠ ಸಂತ ಇಲ್ಲದೇ ವೇದಿಕೆ ಭಣಭಣ ಎನ್ನುತ್ತಿತ್ತು. ಬೆಳಗ್ಗೆಯಿಂದಲೇ ಆಶ್ರಯದಲ್ಲಿ ಪ್ರಸಾದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಸಾವಿರಾರು ಭಕ್ತರು ಪ್ರಸಾದ ಸೇವಿಸಿದರು. ಭಕ್ತಿ ಭಾವದಿಂದ ಶ್ರೀಗಳನ್ನು ನೆನೆಪಿಸುತ್ತಾ, ಕಂಬನಿ ಮಿಡಿಯುತ್ತಾ ಪ್ರಸಾದ ಸೇವೆ ಮಾಡಿದರು.

ಶ್ರೀ ಸಿದ್ದೇಶ್ವರ ಶ್ರೀಗಳು ಅಧ್ಯಾತ್ಮ ಲೋಕದ ನಕ್ಷತ್ರ. ಶ್ರೀಗಳು ಸರ್ವವ್ಯಾಪಿ, ಅವರು ಭಕ್ತರ ಹೃನ್ಮಂದಿರದಲ್ಲಿ ಶಾಶ್ವತವಗಿ ನೆಲೆಸಿದ್ದಾರೆ. ನಮ್ಮ ಹೃದಯ ಮಂದಿರದಲ್ಲಿ ನಾವು ಪುಣ್ಯವಂತರು. ವಿಜಯಪುರದ ನಕ್ಷತ್ರ ಶ್ರೀಗಳು ಅಂತ ಅಮೋಘಸಿದ್ದಪ್ಪ ಪೂಜಾರಿ ತಿಳಿಸಿದ್ದಾರೆ. 

click me!