ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆ ಎಲ್ಲ ರಾಜಕೀಯ ಪಕ್ಷಗಳು ಖಂಡಿಸಬೇಕು. ಪ್ರವೀಣ್ ನೆಟ್ಟಾರು ಹಂತಕರ ಬಂಧಿಸುವುದಾಗಿ ಈಗಾಗಲೇ ಸಿಎಂ ಹೇಳಿದ್ದಾರೆ: ಕೊಲೆಗೆ ಧೈರ್ಯವೇ ಬಾರದಂಥ ಕಾನೂನು ಜಾರಿಯಾಗಬೇಕು.ನಮ್ಮ ಕಾರ್ಯಕರ್ತರ ರಕ್ಷಣೆ ನಮ್ಮ ಕೈಯಲ್ಲಿ ಆಗುತ್ತಿಲ್ಲ ಅಂತಾ ನಾನೇ ಒಪ್ಪಿಕೊಳ್ಳುತ್ತಿದ್ದೇನೆ
ಶಿವಮೊಗ್ಗ (ಜು.28) : ಕೊಲೆಗೆ ಪ್ರತಿಕಾರ ಕೊಲೆ ಎಂದು ಹಿಂದುತ್ವ ನಂಬಲ್ಲ. ಆದರೆ ಇನ್ನು ಮುಂದೆ ಯಾರೂ ಕೊಲೆ ಮಾಡುವ ಧೈರ್ಯವೇ ಮಾಡಬಾರದು, ಆ ರೀತಿಯ ಕ್ರಮವನ್ನು ರಾಜ್ಯ ಸರ್ಕಾರ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ(Former Minister K.S.Eshwarappa) ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದವರನ್ನು ಬಂಧಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಮ್ಮ ಸರ್ಕಾರ ಬಲಹೀನವಾಗಿಲ್ಲ ಶಾಂತಿ ಕಾಪಾಡಲು ಹಿಂದುಗಳು ಸಂಯಮದಿಂದ ಇದ್ದಾರೆ. ಎಷ್ಟುದಿನ ಹೀಗೆ ಎಲ್ಲವನ್ನೂ ಸಹಿಸಿಕೊಳ್ಳುವುದು ಎಂದು ಗುಡುಗಿದರು.
ವಿನಾಕಾರಣ ಹಿಂದುತ್ವವಾದಿಗಳನ್ನು ಕೆಲವು ಮುಸಲ್ಮಾನ್ ಗೂಂಡಾಗಳು ಕಗ್ಗೊಲೆ ಮಾಡುವುದು, ಹಲ್ಲೆ ನಡೆಸುವುದು ನಡೆಯುತ್ತಿದೆ. ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆಯನ್ನು ಎಲ್ಲ ರಾಜಕೀಯ ಪಕ್ಷಗಳು ಖಂಡನೆ ಮಾಡಬೇಕು. ಯಾರೂ ಇವರಿಗೆ ಬೆಂಬಲ ಕೊಡಬಾರದು. ಹಿಂದುಗಳು ಶಾಂತಿಪ್ರಿಯರು ಅದನ್ನು ಪರೀಕ್ಷೆ ಮಾಡಲು ಹೋಗಬೇಡಿ. ಕೊಲೆಗೆ, ಕೊಲೆ ಎಂಬುದು ನಮ್ಮ ಉದ್ದೇಶ ಅಲ್ಲ. ಆ ರೀತಿಯಾದರೆ ರಾಜ್ಯದಲ್ಲಿ ರಕ್ತಪಾತವೇ ಆಗುತ್ತದೆ. ಅವರ ಮನಸ್ಥಿತಿ ಬದಲಾವಣೆ ಮಾಡಿಕೊಳ್ಳದಿದ್ದರೆ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾವಿನ ವೇಳೆ ಸರ್ಕಾರಕ್ಕೆ ಸಂಭ್ರಮ ಬೇಕಾ: ಎಚ್.ಡಿ.ಕುಮಾರಸ್ವಾಮಿ
ಕಾಂಗ್ರೆಸ್ ಸರ್ಕಾರ(Congress Govt)ದ ಅವಧಿಯಲ್ಲಿ ಹಿಂದುಗಳ ಕೊಲೆಯಾದಾಗ ಹಿಂದುಗಳನ್ನೇ ಜೈಲಿಗೆ ಕಳುಹಿಸುತ್ತಿದ್ದರು. ಹಿಂದುಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಚಿಕ್ಕಮಗಳೂರಿ(Chikkamagaluru)ನಲ್ಲಿ ಯುವ ಮೋರ್ಚಾ ಕಾರ್ಯಕರ್ತರ ರಾಜಿನಾಮೆ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕಾರ್ಯಕರ್ತರ ರಕ್ಷಣೆ ನಮ್ಮ ಕೈಯಲ್ಲಿ ಆಗುತ್ತಿಲ್ಲ ಅಂತಾ ನಾನೇ ಒಪ್ಪಿಕೊಳ್ಳುತ್ತಿದ್ದೇನೆ. ನಮ್ಮ ಕಾರ್ಯಕರ್ತರನ್ನು ಹುಡುಕಿ ಹುಡುಕಿ ಕೊಲೆ ಮಾಡುತ್ತಿದ್ದಾರೆ. ಆದರೆ, ರಾಜಿನಾಮೆ ಅದಕ್ಕೆ ಪರಿಹಾರವಲ್ಲ. ಕೊಲೆಗಡುಕರಿಗೆ ಕೊಡುತ್ತಿರುವ ಶಿಕ್ಷೆ ಸಾಕಾಗುತ್ತಿಲ್ಲ. ಕಠಿಣ ಶಿಕ್ಷೆ ಕೊಡುವ ಬಗ್ಗೆ ಕ್ರಮ ವಹಿಸಬೇಕಿದೆ ಎಂದರು.
ಪ್ರವೀಣ್ ಹತ್ಯೆ, ಹಿಂದೂ ಕಾರ್ಯಕರ್ತರ ಅಕ್ರೋಶ, ಬಿಜೆಪಿ ನಾಯಕರು ಸೈಲೆಂಟ್
ಇಡೀ ದೇಶದಲ್ಲಿ ನ್ಯಾಷನಲ್ ಹೆರಾಲ್ಡ…ನಲ್ಲಿ ಆಗಿರುವ ಭ್ರಷ್ಟಾಚಾರ ಮತ್ತೊಂದಿಲ್ಲ. .2 ಸಾವಿರ ಕೋಟಿಗೂ ಅಧಿಕ ಲೂಟಿ ಆಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ವಿವರಣೆ ಕೊಡಿ ಅಂದ್ರೆನೇ ಗಲಾಟೆ ಮಾಡ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮನೆಯಲ್ಲಿ ಇ.ಡಿ ದಾಳಿಯಾದಾಗ ಕೋಟಿಗಟ್ಟಲೆ ಹಣ ಪತ್ತೆಯಾಗಿ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಮತ್ತೆ ಮೂರು ದಿನದಲ್ಲಿ ವಿಚಾರಣೆಗೆ ಹೋಗ್ತಿದ್ದಾರೆ. ಆದರೆ, ಬಿಜೆಪಿಯನ್ನು ಭ್ರಷ್ಟಾಚಾರ ಅಂತಾ ಕರೆಯುತ್ತಿದ್ದಾರೆ. ನೀವು ಭ್ರಷ್ಟರು ಎಂಬುದು ಗೊತ್ತಾಗಿದೆ. ನಮ್ಮನ್ನು ಭ್ರಷ್ಟರು ಅಂತಾ ಕರೆಯಲು ನಿಮಗೆ ನೈತಿಕತೆ ಇಲ್ಲ
- ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ
- - -