ಬೇಡ ಜಂಗಮ ಎಂಬುದಕ್ಕೂ ಕಾಡಿನಲ್ಲಿ ವಾಸವಿರುವ ಆದಿವಾಸಿ ಬೇಡರ ಲಕ್ಷಣಗಳಿಗೂ ಬಹಳಷ್ಟು ನೈಜ ವ್ಯತ್ಯಾಸಗಳಿವೆ: ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ
ಮೈಸೂರು(ಜು.28): ಬೇಡ ಜಂಗಮದ ಹೆಸರಿನಲ್ಲಿ ಪರಿಶಿಷ್ಟಜಾತಿಯ ಸ್ಥಾನಮಾನಕ್ಕೆ ಕೆಲವರು ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.
ಸಂವಿಧಾನದಲ್ಲಿ ಮೀಸಲಾತಿಯ ಸೌಲಭ್ಯವನ್ನು ಕೆಲವು ಸಮುದಾಯಗಳಿಗೆ ಪ್ರಮುಖ ಕಾರಣಕ್ಕೆ ನೀಡಲಾಗಿದೆ. ಮೂಲದಲ್ಲಿ ಐತಿಹಾಸಿಕವಾಗಿ ದೌರ್ಜನ್ಯಕ್ಕೆ ಒಳಗಾಗಿ ಏಳಿಗೆ ಕಾಣದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳಿಗೆ ಮಾತ್ರ ಮೀಸಲಾತಿಯನ್ನು ಕಲ್ಪಿಸಲಾಗಿತ್ತು. ಬಳಿಕ ಮಂಡಲ್ ಆಯೋಗದ ವರದಿ ಅನ್ವಯ ಹಿಂದುಳಿದ ವರ್ಗಗಳಿಗೂ ಮೀಸಲಾತಿ ಸೌಲಭ್ಯ ಕಲ್ಪಿಸಲಾಯಿತು. ಆದರೆ ಈಗ ಸಂವಿಧಾನ ನಿಗದಿಪಡಿಸಿದ ನಿಯಮಾವಳಿ ಪರಿಗಣಿಸದೆ ನೇರಾ ನೇರ ನಮಗೆ ಪರಿಶಿಷ್ಟಜಾತಿಯ ಸ್ಥಾನ ಮಾನ ಕೊಡಿ ಎಂದು ಮಾಡುತ್ತಿರುವ ಅರ್ಥವಿಲ್ಲದ ಹೋರಾಟವನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.
ಮರಾಠರಿಗೆ 2ಎ ಮೀಸಲು ನೀಡಲು ಬದ್ಧ: ಸಿಎಂ ಬೊಮ್ಮಾಯಿ
ಬೇಡ ಜಂಗಮ ಎಂಬುದಕ್ಕೂ ಕಾಡಿನಲ್ಲಿ ವಾಸವಿರುವ ಆದಿವಾಸಿ ಬೇಡರ ಲಕ್ಷಣಗಳಿಗೂ ಬಹಳಷ್ಟು ನೈಜ ವ್ಯತ್ಯಾಸಗಳಿವೆ. ಹೀಗಾಗಿ ಅಸಂವಿಧಾನಿಕ ಬೇಡಿಕೆಗಳಿಗೆ ಬೆಂಬಲ ನೀಡುವ ಯಾರೇ ಆದರೂ ಸಹ ಮೊದಲು ಸಂವಿಧಾನದ ಆಶಯಗಳು ಮತ್ತು ಮೀಸಲಾತಿಗೆ ಸಂಬಂಧಿಸಿದ ಅದರ ನೀತಿ ನಿಯಮಾವಳಿಗಳನ್ನು ತಿಳಿದುಕೊಳ್ಳದೇ ಹೋದರೆ ನಾವು ಸಾಮಾಜಿಕ ನ್ಯಾಯಕ್ಕೆ ಅಪಚಾರ ಎಸಗಿದಂತೆ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮೀಸಲಾತಿ ಎಂಬುದು ಸಾಮಾಜಿಕ ಅವಮಾನದ ಕಾರಣಕ್ಕಾಗಿ ಇರುವ ಸಂಗತಿಯೇ ಹೊರತು ಆರ್ಥಿಕವಾಗಿ ಹಿಂದುಳಿದ ಕಾರಣಕ್ಕಾಗಿ ಅಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಸಹಕರಿಸಲು ಸರ್ಕಾರಗಳು ಪೂರಕ ಯೋಜನೆ ರೂಪಿಸುವುದು ಸೂಕ್ತ ನಡೆಯಾಗಿದ್ದು ಆರ್ಥಿಕತೆ ಆಧಾರಿತವಾದ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಇದನ್ನು ಸಾಧ್ಯವಾದಷ್ಟುಬೇಗ ತಿಳಿದುಕೊಂಡರೆ ಎಲ್ಲರಿಗೂ ಉತ್ತಮ ಎಂದು ಅವರು ಹೇಳಿದ್ದಾರೆ.