
ಹೈದರಾಬಾದ್‌ನ ಕಲಾವಿದನೊಬ್ಬ ಬೆಂಗಳೂರಿನ ಟ್ರಾಫಿಕ್‌ಗೆ ಕ್ಯಾಕರಿಸಿ ಉಗಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಪ್ರತಿಯೊಬ್ಬರಿಗೂ ಬೇಸರ ತರಿಸತ್ತೆ. ಕೆಲಸಕ್ಕೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗಲ್ಲ. ಕೆಲಸದಿಂದ ವಾಪಸ್ ಮನೆ ತಲುಪಲು ಹರಸಾಹಸ ಪಡಬೇಕು. ಅದೆಲ್ಲದರ ನಡುವೆ ರಸ್ತೆಗುಂಡಿಗಳು, ಡೈವರ್ಷನ್ ಅದೂ ಇದೂ ಅಂತಾ ನೂರೆಂಟು ವಿಘ್ನಗಳು. ಇದರ ಬಗ್ಗೆಯೇ ಹೈದರಾಬಾದ್ ಕಲಾವಿದ ಅನುಜ್ ಗುವಾರ ಎಂಬಾತ ವ್ಯಂಗ್ಯ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ. ಆದರೆ ಈ ವಿಡಿಯೋ ನೋಡಿದ ಬೆಂಗಳೂರಿಗರಿಗೆ ಸ್ವಲ್ಪ ಸಿಟ್ಟು ಬರುವುದು ಪಕ್ಕಾ. ಯಾಕೆಂದರೆ ಹಾಸ್ಯಕ್ಕಿಂತ ಹೆಚ್ಚು ಅವಹೇಳನಾಕಾರಿಯಾಗಿ ಅನಿಸಬಹುದು. ನಮ್ಮ ಬೆಂಗಳೂರಿನ ಬಗ್ಗೆ ಹೈದರಾಬಾದಿನವ ಯಾಕೆ ಮಾತಾಡಬೇಕು ಅನಿಸೋದು ಸಹಜ. ಜತೆಗೆ ಬೆಂಗಳೂರು ಅಷ್ಟು ಇರಿಟೇಟಿಂಗ್ ಆದರೆ, ಹೈದರಾಬಾದಲ್ಲೇ ಇರಪ್ಪಾ ಅಂತ ಹೇಳಿಬಿಡಬೇಕು ಅನಿಸಲೂಬಹುದು. ಆದರೆ ಆತನ ಮಾತಿನ ತಾತ್ಪರ್ಯದಲ್ಲಿ ಸತ್ಯವಿದೆ.
"ಬೆಂಗಳೂರು ಸುಂದರವಾದ ನಗರ. ನನಗೂ ಬೆಂಗಳೂರು ಇಷ್ಟ. ನನ್ನ ಹಲವಾರು ಸ್ನೇಹಿತರು ಅಲ್ಲಿದ್ದಾರೆ. ನಾನು ಆಗಾಗ ಬೆಂಗಳೂರಿಗೆ ಹೋಗುತ್ತಿರುತ್ತೇನೆ," ಎಂದು ಮಾತು ಆರಂಭಿಸುವ ಅನುಜ್ ನಂತರ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಮಾತನಾಡಲು ಆರಂಭಿಸುತ್ತಾನೆ.
"ಬೆಂಗಳೂರಿಗರಿಗೆ ಶುಭೋದಯ ಹೇಳಿದರೆ, ಬೆಂಗಳೂರಿನ ಹವಾಮಾನದ ಬಗ್ಗೆ ಮಾತನಾಡುತ್ತಾರೆ. ನಿಮ್ಮ ಪಾರ್ಸೆಲ್ ಬಂದಿದೆ ಎಂದರೆ ಅವರು ಮತ್ತು ಹವಾಮಾನದ ಬಗ್ಗೆ ಮಾತನಾಡುತ್ತಾರೆ. ಹೌದು ನಮ್ಮೆಲ್ಲರಿಗೂ ಗೊತ್ತಿದೆ, ಬೆಂಗಳೂರಿನ ಹವಾಮಾನ ಚೆನ್ನಾಗಿದೆ. ಮತ್ತು ಯುನೆಸ್ಕೋ ಕೂಡ ಇದನ್ನು ಪರಿಗಣಿಸಿ, ಅವಾರ್ಡ್ ನೀಡಿದೆ. ಅದಕ್ಕೇನು ಮಾಡಬೇಕು? ಉಪ್ಪಿನಕಾಯಿ ಹಾಕಿ ನೆಕ್ಕಬೇಕಾ? ಒಂದೇ ಜಾಗದಲ್ಲಿ ಟ್ರಾಫಿಕ್ ಜಾಮ್ ಆಗಿ ಮೂರು ಗಂಟೆ ನಿಲ್ಲಬೇಕಾಗುತ್ತದೆ ಬೆಂಗಳೂರಲ್ಲಿ. ಆಗ ಹವಾಮಾನದ ಬಗ್ಗೆ ಮಾತನಾಡುವುದು ಬಿಟ್ಟು ಇನ್ನೇನು ಮಾಡಲು ಸಾಧ್ಯ," ಎಂದು ಅನುಜ್ ಹೇಳಿದ್ದಾರೆ.
ಇದನ್ನೂ ಓದಿ: ಪಬ್ ಮುಂದೆ ಕುಡಿದ ಮತ್ತಿನಲ್ಲಿ ಯುವಕನಿಗೆ ಥಳಿಸಿದ ಯುವತಿಯರ ಅರೆಸ್ಟ್: ವಿಡಿಯೋ ವೈರಲ್
"ನಾವು ಹೈದರಾಬಾದಿಗಳು ಅಷ್ಟೆಲ್ಲಾ ಪುರುಸೊತ್ತಲ್ಲಿ ಇರುವುದಿಲ್ಲ. ಒಂದು ಜಾಗವನ್ನು ತಲುಪಲು ಕನಿಷ್ಟ ಮೂರು ದಾರಿಗಳು ಇವೆ. ಆದರೆ ಬೆಂಗಳೂರಿಗರು ಗಂಟೆಗಟ್ಟಲೇ ಒಂದೇ ಕಡೆ ನಿಂತಿರುತ್ತಾರೆ. ನೀವು ತಲುಪಬೇಕಾದ ಸ್ಥಳ ನಿಮಗೆ ಕಾಣುತ್ತಿರುತ್ತದೆ ಆದರೆ ತಲುಪಲು ಸಾಧ್ಯವಾಗುವುದಿಲ್ಲ. ಆದರೂ ಏನಾದರು ಮಾತನಾಡಿಸಿದರೆ ಬೆಂಗಳೂರು ವೆದರ್ ಬಗ್ಗೆ ಮಾತನಾಡುತ್ತಾರೆ," ಎಂದು ಬೆಂಗಳೂರು ಟ್ರಾಫಿಕ್ ಮತ್ತು ಬೆಂಗಳೂರಿಗರ ಮೇಲೆ ವ್ಯಂಗ್ಯವಾಡಿದ್ದಾರೆ.
ಉದ್ಯಮಿ ಕಿರಣ್ ಮಜುಮ್ದಾರ್ ಶಾ ಕೂಡ ಅನುಜ್‌ರ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.