ವಾಲ್ಮೀಕಿ ಜಾತ್ರೆಯ ಸಂದರ್ಭದಲ್ಲಿ ಐದು ಬೇಡಿಕೆಗಳನ್ನು ಸರ್ಕಾರಕ್ಕೆ ಹಕ್ಕೋತ್ತಾಯ ಮಂಡಿಸಲಾಗುವುದು ಎಂದ ವಾಲ್ಮೀಕಿ ಗುರುಪೀಠದ ಪ್ರಸನ್ನನಾಂದಪುರಿ ಸ್ವಾಮೀಜಿ| ಪೂರ್ವಭಾವಿ ಸಭೆಯಲ್ಲಿ ಪ್ರಸನ್ನಾನಂದಪುರಿ ಸ್ವಾಮೀಜಿ ವಿವರಣೆ| ಮಹರ್ಷಿ ವಾಲ್ಮೀಕಿ ಜಾತ್ರೆಗೆ ಈಗಾಗಲೇ 51 ದಿನಗಳಿಂದ ರಾಜ್ಯದ 121 ತಾಲೂಕುಗಳಿಗೆ ಭೇಟಿ ನೀಡಿದ್ದೇವೆ|
ಹರಪನಹಳ್ಳಿ(ಜ.01): ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ವಾಲ್ಮೀಕಿ ನಾಯಕ ಸಮಾಜ ಬೆಳೆಯಲು ಮುಂಬರುವ ಫೆ. 8, 9ರಂದು ನಡೆಯುವ 2ನೇ ವರ್ಷದ ವಾಲ್ಮೀಕಿ ಜಾತ್ರೆಯ ಸಂದರ್ಭದಲ್ಲಿ ಪ್ರಮುಖ ಐದು ಬೇಡಿಕೆಗಳನ್ನು ಸರ್ಕಾರಕ್ಕೆ ಹಕ್ಕೋತ್ತಾಯ ಮಂಡಿಸುವುದಾಗಿ ವಾಲ್ಮೀಕಿ ಗುರುಪೀಠದ ಪ್ರಸನ್ನನಾಂದಪುರಿ ಸ್ವಾಮೀಜಿ ಹೇಳಿದ್ದಾರೆ.
ಪಟ್ಟಣದ ನಟರಾಜ ಕಲಾಭವನದಲ್ಲಿ ಜಾತ್ರೆಯ ನಿಮಿತ್ತ ತಾಲೂಕು ವಾಲ್ಮೀಕಿ ಸಮಾಜ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಮ್ಮ ಸಮುದಾಯಕ್ಕೆ ಸಂವಿಧಾನಿಕವಾಗಿ ಶೇ. 7.5 ರಷ್ಟು ಮೀಸಲಾತಿಯನ್ನು ಹೆಚ್ಚಿಸಬೇಕು. ರಾಜ್ಯದಲ್ಲಿ ಪ. ಜಾತಿ, ಪ. ಪಂಗಡದ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರ ಪಡೆಯುವುದು, ಕೊಡುವುದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ ಮಾಡಬೇಕು, ಹಂಪಿಗೆ ಮಹರ್ಷಿ ವಾಲ್ಮೀಕಿ ಹೆಸರನ್ನು ನಾಮಕಾರಣ ಮಾಡಬೇಕು. ಅಯೋಧ್ಯೆದಲ್ಲಿ ಶ್ರೀರಾಮಚಂದ್ರನ ಚರಿತ್ರೆಯನ್ನು ಬರೆದಿರುವ ಮಹರ್ಷಿ ವಾಲ್ಮೀಕಿಯವರ ಮಂದಿರವನ್ನು ಸಹ ಕಟ್ಟಬೇಕು ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
2019 ಫೆ. 8 ರಂದು ವಾಲ್ಮೀಕಿ ಜಾತ್ರೆ ಅದ್ಧೂರಿಯಾಗಿ ನಡೆದಿದ್ದು, ಅಂದು 5 ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗಿತ್ತು. ಇವುಗಳಿಗೆ ರಾಜ್ಯ ಸರ್ಕಾರ ಸ್ಪಂದಿಸದ ಕಾರಣ, ಮತ್ತೆ ರಾಜ್ಯದ ನಾಯಕ ಸಮುದಾಯ ಪ್ರತಿಭಟನೆ ಮೂಲಕ ರಾಜಧಾನಿಗೆ ಪಾದಯಾತ್ರೆಯ ಮೂಲಕ ಸರ್ಕಾರದ ಗಮನ ಸೆಳೆಯಲಾಯಿತು. ಆದರೂ ಇದನ್ನು ಸರಿಪಡಿಸುವುದಾಗಿ ಹೇಳಿ, ಆಯೋಗ ರಚಿಸುವುದಾಗಿ ಅಂದಿನ ಸಮ್ಮಿಶ್ರ ಸರ್ಕಾರ ಹೇಳಿತ್ತು. ಇಲ್ಲಿಯವರೆಗೂ ಗಮನಹರಿಸದ ರಾಜ್ಯ ಸರ್ಕಾರಕ್ಕೆ ಪುನಃ ಫೆ. 2020ರಲ್ಲಿ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಹಕ್ಕೋತ್ತಾಯ ಮಂಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಕಾರ್ಯದರ್ಶಿ ನಾಗರಾಜ ಗಿರಜ್ಜಿ, ಉಪಾಧ್ಯಕ್ಷ ಶಿವಾನಂದ, ಪಣಿಯಾಪುರ ಲಿಂಗರಾಜ, ತಿಮ್ಮೇಶ್ ನೀಲಗುಂದ, ತಾಪಂ ಸದಸ್ಯರಾದ ವೈ. ಬಸವಪ್ಪ, ನಾಗರಾಜಪ್ಪ, ಮಾಜಿ ಅಧ್ಯಕ್ಷ ಕಿತ್ತೂರು ಓಬಣ್ಣ, ಸದಸ್ಯೆ ಜಯಲಕ್ಷ್ಮಿ, ನೇತ್ರಾವತಿ, ದಾಕ್ಷಯಣಮ್ಮ, ಸುಜಾತ ಉಚ್ಚೆಂಗೆಪ್ಪ, ಪದ್ಮಾವತಿ, ತಲುವಾಗಲು ನಂದೀಶ್, ಟಿ. ವೆಂಕಟೇಶ್, ಎಂ.ವಿ. ಅಂಜಿನಪ್ಪ, ಶಿವಪ್ಪ, ಬಸಣ್ಣ, ಮಂಡಕ್ಕಿ ಸುರೇಶ್, ಎಚ್. ವೆಂಕಟೇಶ್ ಇತರರು ಇದ್ದರು.
121 ತಾಲೂಕಿಗೆ ಭೇಟಿ ಕಳೆದ ವರ್ಷದ ಜಾತ್ರೆಯ ವೇಳೆ ಉಳಿದ ದೇಣಿಗೆ ಹಣದಲ್ಲಿ ರಾಜ್ಯದ ತಿಂತಿಣಿ ಗ್ರಾಮದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 17 ಎಕರೆ ಜಮೀನು ಖರೀದಿಸಿ ಮೀಸಲಿಡಲಾಗಿದೆ. ಮಹರ್ಷಿ ವಾಲ್ಮೀಕಿ ಜಾತ್ರೆಗೆ ಈಗಾಗಲೇ 51 ದಿನಗಳಿಂದ ರಾಜ್ಯದ 121 ತಾಲೂಕುಗಳಿಗೆ ಭೇಟಿ ನೀಡಿದ್ದೇವೆ. ಜಾತ್ರೆಯಲ್ಲಿ 5 ಲಕ್ಷ ಜನರು ಸೇರುವ ನೀರಿಕ್ಷೆ ಇದೆ, 2ನೇ ಐತಿಹಾಸಿಕ ಜಾತ್ರೆ ಇದಾಗಲಿದೆ ಎಂದು ಪ್ರಸನ್ನನಾಂದಪುರಿ ಸ್ವಾಮೀಜಿ ಹೇಳಿದ್ದಾರೆ.