ಪೊಲೀಸ್ ಗೋಲಿಬಾರ್ ಪ್ರಕರಣಗಳಲ್ಲಿ ಮೃತಪಟ್ಟವರಿಗೆ ಪರಿಹಾರ ಮೊತ್ತ ಪಾವತಿಸುವ ಬಗ್ಗೆ ಸ್ಪಷ್ಟನೀತಿ ರೂಪಿಸಲು ಚಿಂತನೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಂಗಳೂರು(ಜ.01): ಪೊಲೀಸ್ ಗೋಲಿಬಾರ್ ಪ್ರಕರಣಗಳಲ್ಲಿ ಮೃತಪಟ್ಟವರಿಗೆ ಪರಿಹಾರ ಮೊತ್ತ ಪಾವತಿಸುವ ಬಗ್ಗೆ ಸ್ಪಷ್ಟನೀತಿ ರೂಪಿಸಲು ಚಿಂತನೆ ನಡೆಸಲಾಗುವುದು. ಈ ಬಗ್ಗೆ ಶೀಘ್ರ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಶಾಂತಿ, ಸುವ್ಯವಸ್ಥೆ ಸಂಬಂಧಿಸಿ ಸಮಾಲೋಚನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಂಗಳೂರಿನಲ್ಲಿ ಡಿ.19ರಂದು ನಡೆದ ಗೋಲಿಬಾರ್‌ನಲ್ಲಿ ಮೃತ ಪಟ್ಟವರ ಕುಟುಂಬದವರಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಸೂಚನೆ ನೀಡಿದ್ದರು. ಆದರೆ ಅವರು ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪದ ಬಗ್ಗೆ ತನಿಖೆ ನಡೆಯುತ್ತಿರುವ ಕಾರಣ ಪರಿಹಾರ ತಡೆಹಿಡಿಯಲಾಗಿದೆ ಎಂದಿದ್ದಾರೆ.
undefined
ಮಂಜಿನ ನಗರಿಯಲ್ಲಿ ಹೊಸ ವರ್ಷ: ರೆಸಾರ್ಟ್‌ಗಳು ಹೌಸ್‌ಫುಲ್
2006ರಲ್ಲಿ ಮೂಲ್ಕಿ ಗೋಲಿಬಾರ್ ಪ್ರಕರಣದಲ್ಲಿ ಮೃತ ಪಟ್ಟವರ ಕುಟುಂಬದವರಿಗೂ ಪರಿಹಾರ ನೀಡಿರಲಿಲ್ಲ. ಈ ವಿಚಾರವನ್ನು ಕೆಲವರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಹಾಗಾಗಿ ಗೋಲಿಬಾರ್ ಪ್ರಕರಣಗಳಲ್ಲಿ ಮೃತ ಪಟ್ಟವರಿಗೆ ಪರಿಹಾರ ಮೊತ್ತ ಪಾವತಿ ಬಗ್ಗೆ ಸರ್ಕಾರ ಸ್ಪಷ್ಟ ನೀತಿ ರೂಪಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಸಮಾವೇಶ ಮುಂದೂಡಿಕೆಗೆ ವಿನಂತಿ:
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜ.4ರಂದು ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ಅಸಹಕಾರ ಚಳವಳಿ ಹಾಗೂ ಜ.12ರಂದು ಬಿಜೆಪಿ ನೇತೃತ್ವದಲ್ಲಿ ಜನಜಾಗೃತಿ ಸಭೆ ನಡೆಸಲು ಅನುಮತಿ ಕೋರಿ ಸಂಘಟಕರು ಮನವಿ ಸಲ್ಲಿಸಿದ್ದಾರೆ. ಡಿ.19ರ ಬಳಿಕ ಮಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪರಿಸ್ಥಿತಿ ಇನ್ನಷ್ಟುಸುಧಾರಣೆಯಾಗುವ ನಿಟ್ಟಿನಲ್ಲಿ ಸಮಾವೇಶಗಳನ್ನು ಕನಿಷ್ಠ 10 ದಿನಗಳ ಕಾಲ ಮುಂದೂಡುವಂತೆ ಸಂಘಟಕರಲ್ಲಿ ವಿನಂತಿಸಲಾಗಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಂಘಟಕರು ಭರವಸೆ ನೀಡಿದ್ದಾರೆ. ಸಮಾವೇಶಗಳಿಂದ ಜನರಿಗೆ ತೊಂದರೆಯಾಗಬಾರದು ಎಂದು ತಿಳಿಸಲಾಗಿದೆ. ಸಮಾವೇಶದ ದಿನಾಂಕ ಮತ್ತು ಸ್ಥಳದ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಾಗೂ ಪೊಲೀಸ್ ಕಮಿಷನರ್‌ಗೆ ಸೂಚಿಸಲಾಗಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.
ವಾರ್ಡ್ ಮಟ್ಟದಲ್ಲಿ ಶಾಂತಿ ಸಮಿತಿ:
ಪೊಲೀಸ್ ಮತ್ತು ಸಮುದಾಯದ ಮಧ್ಯೆ ಸೌಹಾರ್ದದ ವಾತಾವರಣ ಕೂಡಾ ನಿರ್ಮಾಣವಾಗಬೇಕಿದೆ. ಕೇವಲ ಗಲಭೆ ಸಂದರ್ಭ ಶಾಂತಿ ಸಭೆ ನಡೆದರೆ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ವಾರ್ಡ್ ಮಟ್ಟದಲ್ಲಿ ಶಾಂತಿ ಸಮಿತಿ ರಚಿಸಲು ಕೆಲವರು ಸಲಹೆ ನೀಡಿದ್ದಾರೆ. ಅಧಿಕಾರಿಗಳು ಮತ್ತು ಎಲ್ಲ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ಸಮಿತಿಯ ಸ್ವರೂಪ ನಿರ್ಧರಿಸಲಾಗುವುದು. ಅಧಿಕೃತವಾದ ಶಾಂತಿ ಸಮಿತಿ ರಚಿಸಲಾಗುವುದು. ಇಂತಹ ಶಾಂತಿ ಸಮಿತಿ ಸಭೆಗಳಿಗೆ ಆಹ್ವಾನಿಸಿದರೆ ನಾವೂ ಬರುತ್ತೇವೆ ಎಂದಿದ್ದಾರೆ.
ನ್ಯಾಯ ಸಮ್ಮತ ತನಿಖೆ:
ಗೋಲಿಬಾರ್ ಪ್ರಕರಣ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನಿಯಮ ಪ್ರಕಾರ ಮ್ಯಾಜಿಸ್ಟೀರಿಯಲ್ ತನಿಖೆ ಹಾಗೂ ಪ್ರತ್ಯೇಕ ಪೊಲೀಸ್ ತನಿಖೆ ನಡೆಸುವುದು ಅಗತ್ಯ. ಈಗ ಮ್ಯಾಜಿಸ್ಟೀರಿಯಲ್ ತನಿಖೆ ನಡೆಯುತ್ತಿದೆ. ಸಿಐಡಿ ತನಿಖೆಗೂ ಸಂಬಂಧಪಟ್ಟಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ. ಸಿಐಡಿ ತಂಡ ಪ್ರಾಥಮಿಕ ಹಂತದ ತನಿಖೆ ನಡೆಸಿದೆ. ಹಿಂಸಾಚಾರ ನಡೆಸಿದ ಬಗ್ಗೆ ನ್ಯಾಯ ಸಮ್ಮತ ತನಿಖೆ ನಡೆಯಲಿದೆ. ಅಮಾಯಕರನ್ನು ಬಂಧಿಸದಂತೆ ಸೂಚಿಸಲಾಗಿದೆ. ಹಿಂಸಾಚಾರದಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಹಿಂಸಾಚಾರದಲ್ಲಿ ಯಾವ ವ್ಯಕ್ತಿ ಹಾಗೂ ಯಾವ ಸಂಘಟನೆಗಳ ಕೈವಾಡ ಇದೆ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖಾ ವರದಿ ಪರಿಶೀಲಿಸಿ ಘರ್ಷಣೆಗೆ ಕಾರಣವಾದ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಅಪರೂಪದ ಬಿಳಿಗೂಬೆ ರಕ್ಷಣೆ
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಅಂಗಾರ, ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾೖಕ್, ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಹರೀಶ್‌ಕುಮಾರ್, ಐವನ್ ಡಿಸೋಜಾ ಇದ್ದರು.