ಏಳು ಜನ ಶಾಸಕರು, ಇಬ್ಬರು ಸಚಿವರಿದ್ದರು ಸಹ ಈಡಿಗ ಸಮಾಜಕ್ಕೆ ಮೋಸ: ಡಾ.ಪ್ರಣವಾನಂದ ಸ್ವಾಮಿ
ಬೀದರ್(ಸೆ.18): ರಾಜ್ಯದ ಬಿಜೆಪಿ ಸರ್ಕಾರ ಇದುವರೆಗೆ ತಮ್ಮ ಸಮುದಾಯಕ್ಕೆ ಯಾವುದೇ ರೀತಿಯ ಕೊಡುಗೆ ನೀಡದೆ ತಮ್ಮ ಕುಲ ಕಸಬನ್ನು ಕಸಿದುಕೊಂಡು ಸಮುದಾಯದ ನಾಶ ಮಾಡುವತ್ತ ಸಾಗಿದ್ದು ಸರಿಯಲ್ಲ ಎಂದು ಕಲಬುರಗಿ ಜಿಲ್ಲೆಯ ಚಿತ್ತಾಪೂರಿನ ಕರದಾಡದ ನಾರಾಯಣ ಗುರುಗಳ ಶಕ್ತಿಪೀಠದ ಡಾ.ಪ್ರಣವಾನಂದ ಸ್ವಾಮಿ ತಿಳಿಸಿದರು. ಬೀದರ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಏಳು ಜನ ಶಾಸಕರು, ಇಬ್ಬರು ಸಚಿವರಿದ್ದರು ಸಹ ಈಡಿಗ ಸಮಾಜಕ್ಕೆ ಮೋಸ ಮಾಡಲಾಗುತ್ತಿದೆ. ಇದಕ್ಕೆ ಮುಂಬರುವ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡುತ್ತೇವೆ ಎಂದು ಪೂಜ್ಯರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಮ್ಮ ಕುಲಕಸಬುಗಳನ್ನು ಮಾಡುತ್ತಿರುವ ಮಡಿವಾಳ, ಹರಳಯ್ಯ, ಅಂಬಿಗರ ಚೌಡಯ್ಯ ಸಮಾಜದವರಿಗೆ ನಿಗಮ ಮಂಡಳಿಗಳನ್ನು ಸ್ಥಾಪಿಸಿಕೊಡಲಾಗಿದೆ. ಇತ್ತೀಚೆಗೆ ಮರಾಠಾ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರು. ನೀಡಲಾಗಿದೆ. 6 ಜನ ಸ್ವಾಮಿಜಿಗಳಿರುವ ಈಡಿಗ ಬಿಲ್ಲವ ಸಮಾಜವನ್ನು ಪರಿಗಣಿಸಿ ಸರ್ಕಾರ ಕೂಡಲೇ ಬ್ರಹ್ಮರ್ಷಿ ನಾರಾಯಣ ಗುರುಗಳ ಹೆಸರಿನ ನಿಗಮ ಮಂಡಳಿ ಸ್ಥಾಪಿಸಿ, 500 ಕೋಟಿ ರು.ಗಳನ್ನು ಒದಗಿಸಬೇಕು. ಶಿವಶರಣ ಹೆಂಡದ ಮಾರಯ್ಯ ಜಯಂತಿಯನ್ನು ಸರ್ಕಾರವೇ ಆಚರಿಸುವಂತೆ ಮಾಡಬೇಕು. ಕುಲಕಸಬು ಸೇಂದಿಗೂ ತಮ್ಮ ಸಮುದಾಯಕ್ಕೂ ಭಾವನಾತ್ಮಕ ಸಂಬಂಧವಿದ್ದು, ಸೇಂದಿ ಇಳಿಸಿ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯ: ಸಿದ್ದು ಮತ್ತೆ ಸಿಎಂ ಅಗ್ತಾರೆ, ರೇವಣ್ಣ
ಬ್ರಹ್ಮರ್ಷಿ ನಾರಾಯಣಗುರೂಜಿ ಜಯಂತಿಯನ್ನು ಸರ್ಕಾರದಿಂದಲೇ ಅಚರಿಸುವಂತೆ ಮಾಡಿರುವ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದ ಅವರು ಕಳೆದ ಸೆ.10 ರಂದು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದ ವಚನ ಭ್ರಷ್ಟಮುಖ್ಯಮಂತ್ರಿ ಬೊಮ್ಮಾಯಿ ಅವರು ಮೋಸ ಮಾಡಿದ್ದಾರೆ. ಸಮಾಜದ ಸಚಿವ ಸುನೀಲಕುಮಾರ ಕಾರ್ಕಳ ಕ್ಷೇತ್ರದÜ ಬಿಲ್ಲವ ಸಮಾಜದ 46500 ಮತಗಳನ್ನು ಪಡೆದು ಗೆದ್ದಿರುವುದನ್ನು ಮರೆತಿದ್ದಾರೆ. ಸಿಎಂ ಜೊತೆಗೂಡಿ ಸಮಾಜಕ್ಕೆ ವಂಚಿಸುತಿದ್ದಾರೆ ಎಂದರು.
ಇಂದು ಮಧ್ಯಾಹ್ನ 12.30ಕ್ಕೆ. ಹಮ್ಮಿಕೊಂಡಿರುವ ನಾರಾಯಣ ಗುರು ಅವರ ಜಯಂತಿಯನ್ನು ಕೇಂದ್ರ ಸಚಿವ ಭಗವಂತ ಖೂಬಾ ಉದ್ಘಾಟಿಸುವರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಬಿ.ಸುನೀಲಕುಮಾರ, ತೆಲುಗು ಚಿತ್ರನಟ ಸುಮಂತ ತಲವಾರ, ಅಬಕಾರಿ ಮತ್ತು ಕ್ರಿಡಾ ಸಚಿವ ಶ್ರೀನಿವಾಸಗೌಡ, ಜಿಲ್ಲೆಯ ಶಾಸಕರು, ಮತ್ತು ಕಲಬುರಗಿ ಜಿಲ್ಲೆಯ ಶಾಸಕರು, ಗಣ್ಯರು ಆಗಮಿಸಲಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್ಯ ಈಡಿಗ ಸಮಾಜ ಸಂಘದ ಅಧ್ಯಕ್ಷ ಡಾ.ರಾಜಶೇಖರ ಸೇಡಂಕರ್, ಪ್ರಧಾನ ಕಾರ್ಯದರ್ಶಿ ಸಂಗಯ್ಯ ಇಡಗಾರ ಸುಲ್ತಾನಪೂರ, ಉತ್ಸವ ಸಮಿತಿ ಅಧ್ಯಕ್ಷ ಸುಭಾಷÜ ಚೌಧರಿ ಜಂಬಗಿ, ಉಪಾಧ್ಯಕ್ಷ ಬಾಲಾಜಿ ತೆಲಂಗ, ಕಾರ್ಯದರ್ಶಿ ಶಿವಕುಮಾರ ತೆಲಂಗ, ಸಮಾಜದ ಮುಖಂಡ ಚಂದ್ರಶೇಖರಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.