ವೃತ್ತಿಯನ್ನೇ ದೇವರಂತೆ ಪೂಜಿಸಿ; ಪೇಜಾವರಶ್ರೀ

By Kannadaprabha NewsFirst Published Sep 18, 2022, 9:12 AM IST
Highlights

ಜೀವನದಲ್ಲಿ ಬಯಸಿದ್ದನ್ನು ಪಡೆಯಲು ಪ್ರಯತ್ನ ಬೇಕು. ಆದರೆ ಅದು ಮತ್ತೊಬ್ಬರ ದುಃಖಕ್ಕೆ ಕಾರಣವಾಗಬಾರದು. ಬದುಕಿಗಾಗಿರುವ ವೃತ್ತಿಯನ್ನು ದೇವರ ಪೂಜೆಯೆಂದು ಭಾವಿಸಿ ಕೆಲಸ ಮಾಡಬೇಕು. - ಪೇಜಾವರಶ್ರೀ

ಹುಬ್ಬಳ್ಳಿ (ಸೆ,18) : ಜೀವನದಲ್ಲಿ ಬಯಸಿದ್ದನ್ನು ಪಡೆಯಲು ಪ್ರಯತ್ನ ಬೇಕು. ಆದರೆ ಅದು ಮತ್ತೊಬ್ಬರ ದುಃಖಕ್ಕೆ ಕಾರಣವಾಗಬಾರದು. ಬದುಕಿಗಾಗಿರುವ ವೃತ್ತಿಯನ್ನು ದೇವರ ಪೂಜೆಯೆಂದು ಭಾವಿಸಿ ಕೆಲಸ ಮಾಡಬೇಕು. ಇದರಿಂದ ಲೋಕ ಸುಭೀಕ್ಷೆಯಾಗಲಿದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು. ಇಲ್ಲಿನ ಕುಸುಗಲ್ಲ ರಸ್ತೆಯ ಶ್ರೀನಿವಾಸ ಗಾರ್ಡನ್‌ನ ವಿಶ್ವೇಶ ತೀರ್ಥ ವೇದಿಕೆಯಲ್ಲಿ ಶನಿವಾರ ಅಖಿಲ ಭಾರತ ಮಾಧ್ವ ಮಹಾಮಂಡಳದ ವತಿಯಿಂದ ನಡೆದ 29ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ ಹಾಗೂ ಶ್ರೀಮನ್‌ ನ್ಯಾಯಸುಧಾ ಮಂಗಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Viral video: ಪೇಜಾವರ ಶ್ರೀಗಳ ಎದೆಗೆ ಕಾಲಿಟ್ಟು ಮೇವು ತಿನ್ನುವ ಆಡು!

ನಮ್ಮ ಸುಖಕ್ಕಾಗಿ ಬೇಕಾಗಿರುವುದನ್ನು ಪಡೆಯಲು ಮಾಡುವ ಪ್ರಯತ್ನ ಇನ್ನೊಬ್ಬರ ದುಃಖಕ್ಕೆ ಕಾರಣವಾಗಬಾರದು. ನಮ್ಮ ಸುಖದ ಪ್ರಯತ್ನದಿಂದ ಅಕ್ಕಪಕ್ಕದ ಇಬ್ಬರಿಗೆ ಸುಖ ಸಿಗಬೇಕು. ಅಂದಾಗಲೇ ಎಲ್ಲರೂ ಸುಖವಾಗಿರಲು ಸಾಧ್ಯ ಎಂದರು.

ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠದ ಸುಬುಧೇಂದ್ರ ತೀರ್ಥರು, ಭಂಡಾರಕೇರಿ ಮಠದ ವಿದ್ಯೇಶತೀರ್ಥರು, ಅದಮಾರು ಮಠದ ಈಶಪ್ರಿಯ ತೀರ್ಥರು, ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥರು, ಶಿರೂರ ಮಠದ ವೇದವರ್ಧನ ತೀರ್ಥರು, ಬನ್ನಂಜೆಯ ರಾಘವೇಂದ್ರ ತೀರ್ಥರು, ಸಮ್ಮೇಳನಾಧ್ಯಕ್ಷ ವಿದ್ವಾಂಸ ಎ. ಹರಿದಾಸ ಭಟ್‌ ಉಪಸ್ಥಿತರಿದ್ದರು.

ಶೋಭಾಯಾತ್ರೆ: ಇದಕ್ಕೂ ಮುನ್ನ ಬೆಳಗ್ಗೆ 8ಕ್ಕೆ ನಗರದ ಮಧುರಾ ಕಾಲನಿಯ ಬನ್ನಿಗಿಡದಿಂದ ಶ್ರೀನಿವಾಸ ಗಾರ್ಡನ್‌ ವರೆಗೆ ಶೋಭಾಯಾತ್ರೆ ನಡೆಯಿತು. ವಿವಿಧ ಮಹಿಳಾ ಮಂಡಳಗಳ ಭಜನೆ ಹಾಗೂ ಕೋಲಾಟ, ಕುಂಭ ಹಾಗೂ ಕಳಶ ಹೊತ್ತ ಮಹಿಳೆಯರು ಮತ್ತು ದಾಸರ ಪದ ಹಾಡುತ್ತಾ ಕುಣಿದ ಯುವಕರು ಮೆರವಣಿಗೆಗೆ ಮೆರುಗು ತಂದರು. ಅಲಂಕೃತಗೊಂಡ ರಥದಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಕೂರಿಸಿ ಮೆರವಣಿಗೆ ಮಾಡಲಾಯಿತು.

ಸಮ್ಮೇಳನದ ಸಂಚಾಲಕ ಸಿ.ಎಚ್‌. ಬದರಿನಾಥಾಚಾರ್ಯ, ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷ ಶ್ರೀಕಾಂತ ಕೆಮ್ತೂರ, ಗೋಪಾಲಕೃಷ್ಣ ನಾಯಕ ಗುಜ್ಜಾಡಿ, ಪ್ರಧಾನ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ, ಕಾರ್ಯದರ್ಶಿ ಅನಂತರಾಜ ಭಟ್‌, ಪ್ರಮುಖರಾದ ಎ.ಪಿ. ಐತಾಳ, ಎ.ಸಿ. ಗೋಪಾಲ, ನರೇಂದ್ರ ಕುಲಕರ್ಣಿ, ಸುನೀಲ ಗುಮಾಸ್ತೆ, ವಿಶ್ವನಾಥ ಕುಲಕರ್ಣಿ ಇದ್ದರು.

ಮತಾಂತರ ದೂರವಿಡೋಣ

ಕೆಲವರು ಮತಾಂತರದಿಂದ ಹಿಂದೂ ಸಮಾಜವನ್ನು ವಿಚ್ಛಿನ್ನಗೊಳಿಸುವ ಯತ್ನ ನಡೆಸುತ್ತಿದ್ದಾರೆ. ಮಾಧ್ವ ಹಾಗೂ ಹಿಂದೂ ಸಮಾಜವನ್ನು ಎಲ್ಲರೂ ಗಟ್ಟಿಗೊಳಿಸುವ ಮೂಲಕ ಮತಾಂತರವನ್ನು ದೂರವಿಡೋಣ ಎಂದು ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಸುಬುಧೇಂದ್ರ ತೀರ್ಥರು ಕರೆ ನೀಡಿದರು. ಮಾಧ್ವ ಸಮಾಜದಲ್ಲಿ ಕಷ್ಟಎದುರಾದವರ ನೆರವಿಗೆ ಎಲ್ಲರೂ ನಿಲ್ಲಬೇಕು. ಮತಾಂತರ ತಡೆಯುವ ನಿಟ್ಟಿನಲ್ಲಿ ನಮ್ಮ ಆಚಾರ, ವಿಚಾರ, ಸಂಸ್ಕೃತಿ ಮುಂದುವರಿಸಿಕೊಂಡು ಹೋಗಬೇಕಾಗಿದೆ. 1953ರಲ್ಲಿ ಉಡುಪಿಯ ವಿಶ್ವೇಶ ತೀರ್ಥರು ಮಾಧ್ವ ಸಮಾಜದ ಒಳಿತಿಗಾಗಿ ಮಹಾಮಂಡಳ ಸ್ಥಾಪಿಸಿ ತತ್ವಜ್ಞಾನ ಸಮ್ಮೇಳನ ನಡೆಸಿದರು. ಆಂಧ್ರ, ತಮಿಳುನಾಡು, ಹೈದರಾಬಾದ್‌ ಸೇರಿ ದೇಶದ ಮೊದಲಾದೆಡೆ ಸಮ್ಮೇಳನ ನಡೆಸಲಾಗಿದೆ ಎಂದರು.

ದಲಿತರನ್ನು ಹೊರಗಿಡುವುದು ಧರ್ಮಕ್ಕೆ ಅವಮಾನ ಮಾಡಿದಂತೆ: ಪೇಜಾವರ ಶ್ರೀ

ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪೀಠವು ಉತ್ತಮ ವಿದ್ವಾಂಸರನ್ನು ರೂಪಿಸುತ್ತಿದೆ. ಅವರಲ್ಲಿ ಕಾಡುತ್ತಿರುವ ಅಭದ್ರತೆ ಭಾವನೆ ಹೋಗಲಾಡಿಸಲು ಸುಧಾ ಅಧ್ಯಯನ ಮಾಡುತ್ತಿರುವವರಿಗೆ ಪ್ರತಿ ತಿಂಗಳು .1 ಲಕ್ಷ ಸಹಾಯಧವ ನೀಡಲಾಗುತ್ತಿದೆ ಎಂದು ಹೇಳಿದರು.

ಕಲಿತ ವಿದ್ಯೆ ಹಂಚಿಕೊಳ್ಳುವುದು ಒಂದು ಸಾಧನೆಯಾಗಿದೆ. ಬ್ರಹ್ಮಜ್ಞಾನಿಯಾಗುವವರು ತ್ಯಾಗಿಯಾಗಬೇಕು. ತಪ್ಪಾಗಿ ರಾಮಾಯಣ ಮುದ್ರಿಸಿ ಅಪಪ್ರಚಾರ ನಡೆಸಲಾಗುತ್ತಿರುವುದು ಸರಿಯಲ್ಲ. ರಾಮಾಯಣ ಹಾಗೂ ಮಹಾಭಾರತದ ಕುರಿತು ಸರಿಯಾದ ಪುಸ್ತಕ ಎಲ್ಲೆಡೆ ತಲುಪಿಸುವ ಕಾರ್ಯ ಆಗಬೇಕು.

ಈಶಪ್ರಿಯ ತೀರ್ಥರು, ಅದಮಾರು ಮಠ

click me!