ಸಿಲಿಕಾನ್‌ ಸಿಟಿಯಲ್ಲಿ ಮತ್ತಷ್ಟು ಕುಸಿದ ಕೊರೋನಾ ಸೋಂಕು ಸಂಖ್ಯೆ: 1 ಸಾವು

By Govindaraj SFirst Published Aug 18, 2022, 4:15 AM IST
Highlights

ಬೆಂಗಳೂರಿನಲ್ಲಿ ಬುಧವಾರ 608 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.6.58 ದಾಖಲಾಗಿದೆ. 1280 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಒಬ್ಬ ವೃದ್ದ ಮೃತಪಟ್ಟ ವರದಿಯಾಗಿದೆ. 

ಬೆಂಗಳೂರು (ಆ.18): ಬೆಂಗಳೂರಿನಲ್ಲಿ ಬುಧವಾರ 608 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.6.58 ದಾಖಲಾಗಿದೆ. 1280 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಒಬ್ಬ ವೃದ್ದ ಮೃತಪಟ್ಟ ವರದಿಯಾಗಿದೆ. ನಗರದಲ್ಲಿ ಸದ್ಯ 5999 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 55 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 26 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 5311 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 

213 ಮಂದಿ ಮೊದಲ ಡೋಸ್‌, 1026 ಮಂದಿ ಎರಡನೇ ಡೋಸ್‌ ಮತ್ತು 4072 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 16,223 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 13,180 ಆರ್‌ಟಿಪಿಸಿಆರ್‌ ಹಾಗೂ 3043 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ. ಬುಧವಾರ ನಗರದಲ್ಲಿ ದಾಸರಹಳ್ಳಿ ವಲಯದಲ್ಲಿ ಹೊಸದಾಗಿ ಒಂದು ಕಂಟೈನ್ಮೆಂಟ್‌ ಪ್ರದೇಶ ಸೃಷ್ಟಿಯಾಗಿದೆ. ಒಟ್ಟು 14 ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಕೊರೋನಾ ಹೆಚ್ಚಳ: ಕರ್ನಾಟಕದಲ್ಲಿ ಮತ್ತೆ ಕಠಿಣ ನಿಯಮ ಜಾರಿ, ಗಣೇಶೋತ್ಸವಕ್ಕೂ ನಿರ್ಬಂಧ?

ಉಚಿತ 3ನೇ ಡೋಸ್‌ ನೀಡಿದರೂ ಜನ ಪಡೆಯುತ್ತಿಲ್ಲ: ರಾಜ್ಯದಲ್ಲಿ ಕೋವಿಡ್‌ ಮೂರನೇ ಡೋಸ್‌ ಲಸಿಕೆಯನ್ನು ಶೇ.17ರಷ್ಟುಮಂದಿ ಮಾತ್ರ ಪಡೆದಿದ್ದು, ಉಚಿತವಾಗಿ ನೀಡುತ್ತಿದ್ದರೂ ಲಸಿಕೆ ಪಡೆಯಲು ಮುಂದೆ ಬಾರದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಲಸಿಕೆ ಪಡೆದರೆ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದರೂ ಸಾವು ಸಂಭವಿಸುವ ಸ್ಥಿತಿ ಸೃಷ್ಟಿಯಾಗುವುದಿಲ್ಲ. ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ ಅರ್ಹರೆಲ್ಲರೂ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

ಗುರುವಾರ ವಿಧಾನಸೌಧದಲ್ಲಿ ನಡೆದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಎರಡೂ ಡೋಸ್‌ ಲಸಿಕಾಕರಣ ಪ್ರಮಾಣ ಶೇ.100ರಷ್ಟುದಾಟಿದರೂ, ಮೂರನೇ ಡೋಸ್‌ ಸಲಿಕಾಕರಣ ಶೇ.17ರಷ್ಟುಮಾತ್ರ ಆಗಿದೆ. ಪ್ರಧಾನಿ ಮೋದಿ ಅವರು ಮೂರನೇ ಡೋಸ್‌ ಕೂಡ ಉಚಿತವಾಗಿ ನೀಡಲು ಕ್ರಮ ವಹಿಸಿದ್ದಾರೆ. ಲಕ್ಷಾಂತರ ಲಸಿಕೆ ಡೋಸ್‌ ಲಭ್ಯವಿದ್ದರೂ ಜನರು ಮುಂದೆ ಬಾರದಿರುವುದು ಬೇಸರ ತಂದಿದೆ. ಲಸಿಕೆ ಪಡೆದವರಲ್ಲಿ 6-7 ತಿಂಗಳ ನಂತರ ರೋಗ ನಿರೋಧಕ ಶಕ್ತಿ ಕ್ಷೀಣಿಸುವುದರಿಂದ ಮೂರನೇ ಡೋಸ್‌ ನೀಡಲಾಗುತ್ತಿದೆ. ಮೂರನೇ ಡೋಸ್‌ ಪಡೆದರೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.

Corona Crisis: 2 ವಾರದ ಬಳಿಕ ಕರ್ನಾಟಕದಲ್ಲಿ ಶೂನ್ಯ ಕೊರೋನಾ ಸಾವು

‘ರಾಜ್ಯದಲ್ಲಿ ಈ ತಿಂಗಳ 10ರವರೆಗೆ 24 ಮಂದಿ ಸಾವನ್ನಪ್ಪಿದ್ದು ಬಹುತೇಕರು 60 ವರ್ಷ ವಯಸ್ಸು ಮೇಲ್ಪಟ್ಟವರಾಗಿದ್ದಾರೆ. ಯುವಜನರು ಲಸಿಕೆ ಪಡೆಯುವ ಜತೆಗೆ ಮನೆಯ ಹಿರಿಯರಿಗೂ ಕೊಡಿಸಬೇಕು. ರಾಜ್ಯದಲ್ಲಿ ಶೇ.7.2ರಷ್ಟುಕೋವಿಡ್‌ ಪಾಸಿಟಿವಿಟಿ ದರ ಇದೆ. ಕೆಲವು ಜಿಲ್ಲೆಗಳಲ್ಲಿ ರಾಜ್ಯದ ಪಾಸಿಟಿವಿಟಿ ದರಕ್ಕಿಂತ ಹೆಚ್ಚು ದರ ದಾಖಲಾಗಿದೆ. ಧಾರವಾಡದಲ್ಲಿ ಅತಿ ಹೆಚ್ಚು ದಾಖಲಾಗಿದೆ. ರಾಜ್ಯದಲ್ಲಿ ಪ್ರತಿದಿನ 30 ಸಾವಿರ ಮಾದರಿಗಳನ್ನು ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಕೇಂದ್ರದ ಮಾರ್ಗಸೂಚಿಯಂತೆ, ರೋಗ ಲಕ್ಷಣ ಇರುವವರಿಗೆ ಪರೀಕ್ಷೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

click me!