ಮಕ್ಕಳ ಶೂನಲ್ಲಿ ರಾಜಕೀಯ ಎಂಟ್ರಿ: ಇಕ್ಕಟ್ಟಿಗೆ ಸಿಲುಕಿದ ಮುಖ್ಯೋಪಾಧ್ಯಾಯರು

By Suvarna News  |  First Published Dec 8, 2019, 7:51 AM IST

ಏಜೆನ್ಸಿಗಳಿಂದ ಶೂ ಪಡೆಯುವಂತೆ ಧಮ್ಕಿ| ಸರ್ಕಾರ ಶೂ ಖರೀದಿಸಲು ಶಾಲಾ ಮುಖ್ಯಾಧ್ಯಾಪಕರು ಹಾಗೂ ಎಸ್‌ಡಿಎಂಸಿಗೆ ಅಧಿಕಾರ ನೀಡಿದೆ| ಎಸ್‌ಡಿಎಂಸಿ ಆಡಳಿತ ಮಂಡಳಿ, ಶಾಸಕರು ಹಾಗೂ ಅವರ ಹಿಂಬಾಲಕರ ಒಳ ಸಂಚು ಹಾಗೂ ಏಜೆನ್ಸಿಯ ಕಳ್ಳಾಟದಿಂದ ಶಿಕ್ಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ|


ಸೋಮರಡ್ಡಿ ಅಳವಂಡಿ

ಕೊಪ್ಪಳ(ಡಿ.08): ಶಾಲಾ ಮಕ್ಕಳಿಗೆ ಸರ್ಕಾರದಿಂದ ನೀಡುವ ಶೂ ವಿತರಣೆಯಲ್ಲಿ ರಾಜಕೀಯ ನುಸುಳಿರುವುದು ಶಾಲೆಗೆಳ ಮುಖ್ಯಾಧ್ಯಾಪಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.ಸರ್ಕಾರ ಶೂ ಖರೀದಿಸಲು ಶಾಲಾ ಮುಖ್ಯಾಧ್ಯಾಪಕರು ಹಾಗೂ ಎಸ್‌ಡಿಎಂಸಿಗೆ ಅಧಿಕಾರ ನೀಡಿದೆ. ಇದರಿಂದ ಎಸ್‌ಡಿಎಂಸಿ ಆಡಳಿತ ಮಂಡಳಿ, ಶಾಸಕರು ಹಾಗೂ ಅವರ ಹಿಂಬಾಲಕರ ಒಳ ಸಂಚು ಹಾಗೂ ಏಜೆನ್ಸಿಯ ಕಳ್ಳಾಟದಿಂದ ಶಿಕ್ಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.

Tap to resize

Latest Videos

ಏಜೆನ್ಸಿಗಳ ಕಿತ್ತಾಟ:

ಸರ್ಕಾರ ಶಾಲಾ ಮಕ್ಕಳಿಗೆ ಶೂ ಪೂರೈಸುವಂತೆ ಯಾವುದೇ ಏಜೆನ್ಸಿಗೆ ಅನುಮತಿ ನೀಡಿಲ್ಲ. ಎಸ್‌ಡಿಎಂಸಿ ಆಡಳಿತ ಮಂಡಳಿ ಹಾಗೂ ಶಾಲಾ ಮುಖ್ಯಾಧ್ಯಾಪಕರಿಗೆ ಗುಣ ಮಟ್ಟದ ಶೂಗಳನ್ನು ಪೂರೈಸುವ ಅಂಗಡಿಗಳಲ್ಲಿ ತೆಗೆದುಕೊಳ್ಳಬಹುದು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಜೆನ್ಸಿಯೊಂದು ಶಾಲೆಗಳಿಗೆ ಶೂ ವಿತರಿಸುತ್ತಿತ್ತು. ಇದೀಗ ಮತ್ತೊಂದು ಏಜೆನ್ಸಿ ಮಧ್ಯಪ್ರವೇಶಿಸಿದ್ದು ಲಕ್ಷ ಲಕ್ಷ ಮೊತ್ತದ ಶೂ ಖರೀದಿಸಿ ಮಾರಾಟದ ಒತ್ತಡಕ್ಕೆ ಸಿಲುಕಿವೆ. ಹೀಗಾಗಿ ಶಾಲೆ ಮುಖ್ಯಾಧ್ಯಾಪಕರ ಅನುಮತಿ ಪಡೆಯದೆ ಏಜೆನ್ಸಿಗಳು ಶಾಲೆಗಳಿಗೆ ಶೂಗಳನ್ನು ತಂದಿಟ್ಟು ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಮುಖ್ಯಾಧ್ಯಾಪಕರು ಒಪ್ಪದೆ ಇದ್ದಾಗ ಆರೋಪ ಮಾಡುವುದು, ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಹಾಕುತ್ತೇವೆ ಎಂದು ಧಮ್ಕಿ ಹಾಕುತ್ತಿದ್ದಾರೆ.

ಶಾಸಕರ ಕೈವಾಡ:

ಜಿಲ್ಲೆಯ ಕೆಲವು ಶಾಸಕರು ಶೂ ವಿತರಣೆಯ ಏಜೆನ್ಸಿಯನ್ನು ಪರೋಕ್ಷವಾಗಿ ಹೊಂದಿದ್ದಾರೆ. ಈ ಮೂಲಕ ಶಾಲೆಗಳಿಗೆ ಅವುಗಳನ್ನು ವಿತರಿಸಲು ಮುಂದಾಗಿದ್ದಾರೆ. ತಮ್ಮ ಬೆಂಬಲಿಗರು ಹಾಗೂ ಆಪ್ತ ಸಹಾಯಕರ ಮೂಲಕ ಕರೆ ಮಾಡಿ ಇಂಥ ಏಜೆನ್ಸಿಯಿಂದಲೇ ನೀವು ಶೂ ಖರೀದಿಸಬೇಕು ಎಂದು ಮುಖ್ಯಾಧ್ಯಾಪಕರಿಗೆ ಒತ್ತಡ ಹಾಕುತ್ತಿದ್ದಾರೆ.

ಕಮಿಷನ್‌ ದಂಧೆ:

ಶೂ ವಿತರಣೆಯಲ್ಲಿ ಕಮಿಷನ್‌ ದಂಧೆ ನಡೆಯುತ್ತಿದೆ. ಎಸ್‌ಡಿಎಂಸಿ, ಶಾಸಕರು, ಜನಪ್ರತಿನಿಧಿಗಳು ಸೇರಿ ಜೋಡಿ ಶೂಗೆ ಇಂತಿಷ್ಟುಕಮಿಷನ್‌ ನೀಡಿದರೆ ನಿಮ್ಮ ಏಜೆನ್ಸಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಏಜೆನ್ಸಿಗಳು ಸಹ ಒಪ್ಪಿಗೆ ಸೂಚಿಸಿವೆ. ಕಮಿಷನ್‌ ಪಡೆಯುವ ದುರಾಸೆಯಿಂದ ಅವರು ನೀಡುವ ಶೂಗಳು ಗುಣಮಟ್ಟದಿಂದ ಕೂಡಿವೆ ಎಂದು ಪರಿಶೀಲಿಸುವ ಗೋಜಿಗೂ ಹೋಗುತ್ತಿಲ್ಲ. ಇದರಿಂದ ಮಕ್ಕಳು ಕಳಪೆ ಗುಣಮಟ್ಟದ ಶೂ ಪಡೆಯುವಂತೆ ಆಗಿದೆ. 1 ರಿಂದ 5ನೇ ತರಗತಿ ವರೆಗೆ ಪ್ರತಿ ಜೊತೆ ಶೂಗೆ 265, 6 ರಿಂದ 8 ರ ವರೆಗೆ 295, 9ರಿಂದ 10ನೇ ತರಗತಿಯ ಮಕ್ಕಳ ಶೂ ಗೆ 325 ನಿಗದಿ ಮಾಡಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಾನು ಇಲ್ಲದ ವೇಳೆ ಶಾಲೆಗೆ ಏಜೆನ್ಸಿಯ ಸಿಬ್ಬಂದಿ ಬಂದು ಶೂ ಇಟ್ಟು ಹೋಗಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಧಮ್ಕಿ ಹಾಕುತ್ತಾರೆ. ವಿದ್ಯಾರ್ಥಿಗಳಿಗೆ ಕೊಡುವುದು, ಬಿಡುವುದು ನಿಮಗೆ ಬಿಟ್ಟಿದ್ದು. ನಮಗೆ ಮಾತ್ರ ಹಣ ನೀಡಿ ಎಂದು ಒತ್ತಾಯಿಸುತ್ತಾರೆ ಎಂದು ಹೆಸರು ಹೇಳದ ಮುಖ್ಯಾಧ್ಯಾಪಕರು ಹೇಳಿದ್ದಾರೆ. 

ನಾವು ಹೇಳಿದ ಏಜೆನ್ಸಿಯಿಂದಲೇ ನಿಮ್ಮ ಶಾಲೆಗೆ ಶೂ ಖರೀದಿಸಬೇಕು. ಇಲ್ಲದಿದ್ದರೆ ನಿಮ್ಮ ಶಾಲೆಯ ಮಾಹಿತಿಯನ್ನು ಮಾಹಿತಿ ಹಕ್ಕು ಅರ್ಜಿ ಹಾಕಿ ಪಡೆದುಕೊಳ್ಳುತ್ತೇವೆ ಎಂದು ಹೆದರಿಸುತ್ತಿದ್ದಾರೆ ಎಂದು ಹೆಸರು ಹೇಳದ ಮುಖ್ಯಾಧ್ಯಾಪಕರು ತಿಳಿಸಿದ್ದಾರೆ. 
 

click me!