ಈಜಿಪ್ಟ್‌ನಿಂದ ಆಮದು ಮಾಡಿಕೊಂಡಿರುವ ಈರುಳ್ಳಿಯನ್ನು ಹುಬ್ಬಳ್ಳಿಯಲ್ಲಿ ಕೇಳುವವರೇ ಇಲ್ಲದ ಪರಿಸ್ಥಿತಿ ಉದ್ಭವವಾಗಿದೆ. ನೋಡಲು ಸುಂದರವಾಗಿರುವ, ಸೇಬು ಗಾತ್ರದಲ್ಲಿರುವ ಆಕರ್ಷಕ ಈರುಳ್ಳಿ ರುಚಿಕರವಾಗಿಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ.
ಮಯೂರ ಹೆಗಡೆ
ಹುಬ್ಬಳ್ಳಿ[ಡಿ.08]: ಸ್ಥಳೀಯ ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸುವ ಸಲುವಾಗಿ ಈಜಿಪ್ಟ್‌ನಿಂದ ಆಮದು ಮಾಡಿಕೊಂಡಿರುವ ಈರುಳ್ಳಿಯನ್ನು ಹುಬ್ಬಳ್ಳಿಯಲ್ಲಿ ಕೇಳುವವರೇ ಇಲ್ಲದ ಪರಿಸ್ಥಿತಿ ಉದ್ಭವವಾಗಿದೆ. ನೋಡಲು ಸುಂದರವಾಗಿರುವ, ಸೇಬು ಗಾತ್ರದಲ್ಲಿರುವ ಆಕರ್ಷಕ ಈರುಳ್ಳಿ ರುಚಿಕರವಾಗಿಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ. ಹೀಗಾಗಿ ಎಲ್ಲರೂ ಸ್ಥಳೀಯ ಈರುಳ್ಳಿ ಖರೀದಿಗೆ ಮಂದಾಗುತ್ತಿದ್ದು, ಹೊರಗಿನಿಂದ ಈರುಳ್ಳಿ ಆವಕ ಮಾಡಿಕೊಂಡಿ ಕೈ ಸುಟ್ಟುಕೊಂಡ ಏಜೆನ್ಸಿಗಳು ಇದೀಗ ವಾಪಸ್ ಕಳುಹಿಸಿದ್ದಾರೆ.
ಶನಿವಾರ ಹುಬ್ಬಳ್ಳಿ ಎಪಿಎಂಸಿಗೆ ಮುಂಬೈನಿಂದ 150 ಕ್ವಿಂಟಲ್ ಈಜಿಪ್ಟ್ ಈರುಳ್ಳಿ ಬಂದಿತ್ತು. ಇಷ್ಟುಕಡಿಮೆ ಆವಕವಾದರೂ ಈ ಈರುಳ್ಳಿ ಖರೀದಿ ಮಾಡಲು ಖರೀದಿದಾರರು, ವ್ಯಾಪಾರಸ್ಥರು, ದಳ್ಳಾಳಿಗಳು ಹಿಂದೇಟು ಹಾಕಿದರು. ಇದರ ಬದಲಾಗಿ ಹಳೆ ದಾಸ್ತಾನು ಈರುಳ್ಳಿಗೆ ಹೆಚ್ಚಿನ ಬೇಡಿಕೆಯಿದ್ದು, .15 ಸಾವಿರದವರೆಗೂ ಹರಾಜು ಕೂಗಲಾಯಿತು.
ನೋಡಲಷ್ಟೇ ಆಕರ್ಷಕ:
ನೋಡಲು ಆಕರ್ಷಕವಾಗಿರುವ ಈಜಿಪ್ಟ್ ಈರುಳ್ಳಿ ಸೇಬು ಗಾತ್ರದಲ್ಲಿದ್ದು, ಕಡುಗೆಂಪು ಬಣ್ಣದಲ್ಲಿದೆ. ಆದರೆ ಹೊರನೋಟಕ್ಕೆ ಮಾತ್ರ ಇವು ಚೆಂದ. ತಿನ್ನಲು ಅಷ್ಟು ರುಚಿಕರವಾಗಿಲ್ಲ. ಸ್ಥಳೀಯ ಈರುಳ್ಳಿಯಷ್ಟು ಘಾಟಿಲ್ಲ, ಅಲ್ಲದೆ ಕೊಂಚ ಸಿಹಿಯಾಗಿವೆ. ಈಜಿಪ್ಟ್ ಈರುಳ್ಳಿಯನ್ನು ಬೆಳಗ್ಗೆಯಿಂದ ಹರಡಿಕೊಂಡಿದ್ದರೂ ಖರೀದಿದಾರರು ಹರಾಜಿಗೇ ಬರುತ್ತಿಲ್ಲ, ಹೀಗಾಗಿ ವಾಪಸ್ ಕಳಿಸಿದ್ದೇವೆ ಎಂದು ಎಪಿಎಂಸಿಯಲ್ಲಿರುವ ಗಾಂಧಿ ಟ್ರೇಡರ್ಸ್‌ನ ಇಬ್ರಾಹಿಂ ಗಂಡಾಪುರಿ ಹೇಳಿದರು.
ಇದೇವೇಳೆ ಬೆಂಗಳೂರು ಮಾರುಕಟ್ಟೆಗೆ ಸಹ ಈಜಿಪ್ಟ್ ಈರುಳ್ಳಿ ಬಂದಿದ್ದರೂ ಸ್ಥಳೀಯ ಈರುಳ್ಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಮಂಗಳೂರಲ್ಲಿ ಮಾತ್ರ ಪರಿಸ್ಥಿತಿ ಭಿನ್ನವಾಗಿದೆ. ಸ್ಥಳೀಯ ಈರುಳ್ಳಿ 120ರಿಂದ 130 ರು.ಗೆ ಮಾರಾಟವಾಗುತ್ತಿದ್ದರೆ, ಈಜಿಪ್ಟ್ ಈರುಳ್ಳಿ 140ರಿಂದ 150 ರು.ಗೆ ಮಾರಾಟವಾಗುತ್ತಿದೆ.