ಪ್ರತಾಪ್ ಸಿಂಹಗೆ ಸಕಲೇಶಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಓಪನ್ ಚಾಲೆಂಜ್ ಹಾಕಿದ ಚಾಮರಾಜ ಕ್ಷೇತ್ರದ ಶಾಸಕ!

Published : Jul 31, 2026, 05:20 PM IST
Pratap Simha vs Harish Gowda

ಸಾರಾಂಶ

ಶಾಸಕ ಕೆ.ಹರೀಶ್ ಗೌಡ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಚಾಮುಂಡಿಬೆಟ್ಟದಲ್ಲಿ ಬಹಿರಂಗ ಸವಾಲು ಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಕಲೇಶಪುರ ಅಥವಾ ಚಾಮರಾಜ ಕ್ಷೇತ್ರದಿಂದ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಆಹ್ವಾನಿಸಿದ್ದು, ವೈಯಕ್ತಿಕ ಟೀಕೆ ಮತ್ತು ಪದಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯ ರಾಜಕೀಯ ವಲಯದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೈಸೂರಿನ ಪವಿತ್ರ ಚಾಮುಂಡಿಬೆಟ್ಟದಲ್ಲಿ ನಿಂತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಹರೀಶ್ ಗೌಡ, ಪ್ರತಾಪ್ ಸಿಂಹ ಅವರಿಗೆ ನೇರವಾದ ಬಹಿರಂಗ ಸವಾಲು ಹಾಕಿದ್ದು, ಧೈರ್ಯವಿದ್ದರೆ ಮುಂದಿನ ಚುನಾವಣೆಯಲ್ಲಿ ಸಕಲೇಶಪುರ ಅಥವಾ ಚಾಮರಾಜ ಕ್ಷೇತ್ರದಿಂದ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾರೆ.

ಸಕಲೇಶಪುರ ಕಣದಲ್ಲಿ ಮುಖಾಮುಖಿಗೆ ಆಹ್ವಾನ

ಸಕಲೇಶಪುರ ಕ್ಷೇತ್ರವು ಪ್ರತಾಪ್ ಸಿಂಹ ಅವರ ಸ್ವಗ್ರಾಮವಾಗಿದೆ. ಪ್ರಸ್ತುತ ಇದು ಮೀಸಲು ಕ್ಷೇತ್ರವಾಗಿದ್ದು, ಬಿಜೆಪಿಯ ಸಿಮೆಂಟ್ ಮಂಜು ಇಲ್ಲಿ ಶಾಸಕರಾಗಿದ್ದಾರೆ. ಆದರೆ ಮುಂಬರುವ ಚುನಾವಣೆಗೆ ಇದು ಸಾಮಾನ್ಯ ಕ್ಷೇತ್ರವಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಮಾತನಾಡಿರುವ ಹರೀಶ್ ಗೌಡ, "ನಾನು ಮುಂದಿನ ಚುನಾವಣೆಯಲ್ಲಿ ಸಕಲೇಶಪುರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ. ನಮ್ಮ ಹೈಕಮಾಂಡ್ ನಾಯಕರಿಗೂ ಅಲ್ಲಿಂದಲೇ ಟಿಕೆಟ್ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ. ಪ್ರತಾಪ್ ಸಿಂಹ, ನೀನು ಕೂಡ ಅಲ್ಲೇ ಬಂದು ಸ್ಪರ್ಧೆ ಮಾಡು, ಯಾರು ಗೆಲ್ಲುತ್ತಾರೆ ಎಂಬುದು ಅಲ್ಲಿಯೇ ತೀರ್ಮಾನವಾಗಲಿ. ಒಂದು ವೇಳೆ ಅಲ್ಲಿಗೆ ಬರುವುದಿಲ್ಲ ಎಂದಾದರೆ ಚಾಮರಾಜ ಕ್ಷೇತ್ರದಲ್ಲಾದರೂ ಸ್ಪರ್ಧೆ ಮಾಡು, ಅದಕ್ಕೂ ನಾನು ಸಿದ್ಧನಿದ್ದೇನೆ ಎಂದು ಚಾಲೆಂಜ್ ಮಾಡಿದ್ದಾರೆ..

ವೈಯಕ್ತಿಕ ಟೀಕೆಗಳಿಗೆ ತಿರುಗೇಟು

ಚಾಮರಾಜ ಕ್ಷೇತ್ರದ ಮತದಾರರಿಗೆ ಹಾಗೂ ಜನತೆಗೆ ಹರೀಶ್ ಗೌಡ ಯಾರೆಂಬುದು ಸಂಪೂರ್ಣವಾಗಿ ತಿಳಿದಿದೆ. ರಾಜಕೀಯವನ್ನು ರಾಜಕೀಯವಾಗಿ ಎದುರಿಸಬೇಕು ಹೊರತು, ವೈಯಕ್ತಿಕ ವಿಚಾರಗಳನ್ನು ಕೆದಕುವುದು ಸರಿಯಲ್ಲ. ನನ್ನ ಹಿನ್ನೆಲೆಯನ್ನು ಬಿಚ್ಚಿಡುತ್ತೇನೆ ಎಂದು ಸವಾಲು ಹಾಕುತ್ತಿರುವ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಏನೋ ನನ್ನ ಹಿನ್ನೆಲೆ ಬಿಚ್ಚಿಡುತ್ತೇನೆ ಅಂತ ಹೇಳ್ತಿದ್ದೀರಲ್ಲ, ಧೈರ್ಯವಿದ್ದರೆ ಬಿಚ್ಚಿಡಿ ನೋಡೋಣ. ತಾನು ಪ್ರತಾಪ್ ಸಿಂಹ ಅವರನ್ನು 'ವಲಸಿಗ' ಎಂದು ಎಲ್ಲಿಯೂ ಹೀಯಾಳಿಸಿಲ್ಲ ಎಂದರು.

ಮಹನೀಯರ ಹೆಸರು ಬಳಕೆ ಹಾಗೂ ಪದಬಳಕೆ ಬಗ್ಗೆ ಆಕ್ಷೇಪ

ರಾಷ್ಟ್ರಕವಿ ಕುವೆಂಪು ಹಾಗೂ ಕನ್ನಡದ ದಿಗ್ಗಜ ಸಾಹಿತಿ ಎಸ್.ಎಲ್. ಭೈರಪ್ಪ ಅವರಂತಹ ಮಹನೀಯರ ಹೆಸರನ್ನು ಈ ರಾಜಕೀಯ ವಿವಾದಗಳಿಗೆ ಅನಗತ್ಯವಾಗಿ ಎಳೆದು ತರುವುದು ಸರಿಯಲ್ಲ ಎಂದು ಹರೀಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ತಮ್ಮ ಜೊತೆ ಇರುವವರನ್ನು ಉದ್ದೇಶಿಸಿ ಪ್ರತಾಪ್ ಸಿಂಹ 'ರೇಬಿಸ್ ಬಂದಿರುವ ನಾಯಿಗಳು' ಎಂದು ಹಗುರವಾಗಿ ಮಾತನಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, "ಮಾತನಾಡುವಾಗ ಸ್ವಲ್ಪ ಗಮನಕೊಟ್ಟು ಮಾತನಾಡಿ, ನೀವೊಬ್ಬರು ಜವಾಬ್ದಾರಿಯುತ ಮಾಜಿ ಸಂಸದರು ಎಂಬುದನ್ನು ಮರೆಯಬಾರದು" ಎಂದು ಎಚ್ಚರಿಕೆ ನೀಡಿದ್ದಾರೆ.

ಚಾಮುಂಡಿಬೆಟ್ಟದ ಸನ್ನಿಧಿಯಲ್ಲಿ ಶಾಸಕ ಹರೀಶ್ ಗೌಡ ನೀಡಿರುವ ಈ ಓಪನ್ ಚಾಲೆಂಜ್ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮುಂಬರುವ ದಿನಗಳಲ್ಲಿ ಈ ನಾಯಕರ ಮಾತಿನ ಸಮರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

PREV
Read more Articles on
click me!

Recommended Stories

164 ಎಕರೆ ಭೂಸ್ವಾಧೀನ ಕೈಬಿಟ್ಟ ಕರ್ನಾಟಕ ಗೃಹ ಮಂಡಳಿ, ರೈತರು ನಿರಾಳ
ಧಾರವಾಡ: ವಿನಯ್ ಕುಲಕರ್ಣಿಗೆ ಜಾಮೀನು, 'ನಾನು ಸುಪ್ರೀಂ ಕೋರ್ಟ್‌ಗೆ ಹೋಗಲ್ಲ' ಎಂದ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ!