ಕಳ್ಳತನವಾಗಿದ್ದ ರೈತರ ಕೃಷಿ ಪಂಪ್‌ಸೆಟ್‌ಗಳನ್ನು ವಶಪಡಿಸಿಕೊಂಡ ಬಳಿಕ ಪೊಲೀಸ್ ಅಧಿಕಾರಿಗಳು ಅವುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಆದರೆ, 4 ತಿಂಗಳಾದರೂ ನ್ಯಾಯಾಲಯಕ್ಕೆ ಹಾಜರು ಪಡಿಸದೇ ಠಾಣೆಯಲ್ಲಿಯೇ ಇಟ್ಟುಕೊಂಡಿರುವುದು ಸರಿಯಲ್ಲ ಎಂದು ಜನಪರ ಹೋರಾಟಗಾರ ಹಾಗೂ ಹಿರಿಯ ನ್ಯಾಯವಾದಿ ಎಸ್.ಎಸ್. ಪಾಟೀಲ ಹೇಳಿದರು.
ಕಾಗವಾಡ (ಜೂ.17) ಕಳ್ಳತನವಾಗಿದ್ದ ರೈತರ ಕೃಷಿ ಪಂಪ್‌ಸೆಟ್‌ಗಳನ್ನು ವಶಪಡಿಸಿಕೊಂಡ ಬಳಿಕ ಪೊಲೀಸ್ ಅಧಿಕಾರಿಗಳು ಅವುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಆದರೆ, 4 ತಿಂಗಳಾದರೂ ನ್ಯಾಯಾಲಯಕ್ಕೆ ಹಾಜರು ಪಡಿಸದೇ ಠಾಣೆಯಲ್ಲಿಯೇ ಇಟ್ಟುಕೊಂಡಿರುವುದು ಸರಿಯಲ್ಲ ಎಂದು ಜನಪರ ಹೋರಾಟಗಾರ ಹಾಗೂ ಹಿರಿಯ ನ್ಯಾಯವಾದಿ ಎಸ್.ಎಸ್. ಪಾಟೀಲ ಹೇಳಿದರು.
ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳವಾದ ಕೆಲ ಬಡ ರೈತರ ಪಂಪ್‌ಸೆಟ್‌ಗಳನ್ನು ಹಿಂದಿರುಗಿಸುವಂತೆ ಪೊಲೀಸ್ ಅಧಿಕಾರಿಗಳ ಬಳಿ ಪ್ರಶ್ನಿಸಿದಾಗ ಅವುಗಳನ್ನು ನ್ಯಾಯಾಲಯಕ್ಕೆ ಇನ್ನೂ ಹಸ್ತಾಂತರ ಮಾಡದೇ ಇರುವುದು ಬೆಳಕಿಗೆ ಬಂದಿದೆ ಎಂದರು.
ಪಂಪ್‌ಸೆಟ್‌ಗಳ ಬಗ್ಗೆ ಕೇಳಿದರೆ ಪಿಎಸೈ ಹಾರಿಕೆ ಉತ್ತರ ಕೊಡುತ್ತಾರೆ. ನ್ಯಾಯಾಲಯಕ್ಕೆ ಪಿಎಫ್ ಸಲ್ಲಿಸುತ್ತೇವೆ. ನೀವು ನ್ಯಾಯಾಲಯದಿಂದಲೇ ಪಂಪ್‌ಸೆಟ್‌ಗಳನ್ನು ತೆಗೆದುಕೊಳ್ಳುವಂತೆ ಅದು ನಾಲ್ಕೈದು ತಿಂಗಳು ಗತಿಸಿದ ನಂತರ ಹೇಳುತ್ತಾರೆ. ಕಳ್ಳತನವಾದ ಪಂಪ್‌ಸೆಟ್‌ಗಳನ್ನು ವಶಪಡಿಸಿಕೊಂಡು ತಮ್ಮ ಠಾಣೆಯಲ್ಲಿಟ್ಟುಕೊಂಡಿದ್ದ ಪೊಲೀಸ್ ಅಧಿಕಾರಿಗಳು ಇಲ್ಲಿಯವರೆಗೆ ಏಕೆ ನ್ಯಾಯಾಲಯಕ್ಕೆ ಪಿಎಫ್ ಸಲ್ಲಿಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಕಳ್ಳತನವಾಗಿರುವ ಪಂಪ್‌ಸೆಟ್ ಮಾಲೀಕರಿಂದ ಮುಚ್ಚಳಿಕೆ ಬರೆಸಿಕೊಂಡು ಅವರಿಗೆ ಸೇರಿದ ಪಂಪ್‌ಸೆಟ್‌ಗಳನ್ನು ಮರಳಿಸುವ ಬಗ್ಗೆ ಠಾಣೆಯಲ್ಲಿಯೇ ಅವಕಾಶವಿದೆ. ಆದರೂ, ಉದ್ದೇಶ ಪೂರ್ವಕವಾಗಿ ರೈತರಿಗೆ ತೊಂದರೆ ನೀಡುವುದು ಮತ್ತು ನ್ಯಾಯಾಲಯಕ್ಕೆ ಅಲೆದಾಡಿಸುವ ದುರುದ್ದೇಶ ಇದರಲ್ಲಿ ಅಡಗಿದೆ ಎಂದು ಆರೋಪಿಸಿದರು.
ಹಲವಾರು ಬೆಲೆ ಬಾಳುವ ಬೆಳ್ಳಿ, ಬಂಗಾರದ ಆಭರಣಗಳು, ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಮೌಲ್ಯಯುತವಾದ ವಸ್ತುಗಳು ಸಿಕ್ಕಾಗ ಆಯಾ ಪೊಲೀಸ್ ಠಾಣೆಯಲ್ಲಿಯೇ ಕ್ಯಾಂಪ್ ಮಾಡಿ ವಿತರಿಸಿರುವ ಹಲವಾರು ನಿದರ್ಶನಗಳಿವೆ. ಅದೇ ಪ್ರಕಾರ ಪಂಪ್‌ಸೆಟ್‌ಗಳನ್ನು ಬಿಡುಗಡೆಗೊಳಿಸಲು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಕಾಗವಾಡ ಠಾಣಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಕಳುವಾದ ವಸ್ತುವನ್ನು ಆಯಾ ಮಾಲೀಕ ಗುರುತಿಸಿದರೆ ಠಾಣೆಯಲ್ಲಿಯೇ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ವಸ್ತುಗಳನ್ನು ಬಿಡುಗಡೆ ಮಾಡಬೇಕೆಂದು ಉಚ್ಛ ನ್ಯಾಯಾಲಯದ ನಿರ್ದೇಶನವಿದೆ. ಹೀಗಾಗಿ, ಕಾಗವಾಡ ಪೊಲೀಸರು ರೈತರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಪಂಪ್‌ಸೆಟ್‌ಗಳನ್ನು ಮರಳಿಸಬೇಕು. ರೈತರು ಈಗಾಗಲೇ ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ಬರಬೇಕಾದದ್ದು ಧರ್ಮ. ಐಜಿಯವರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿ ರೈತರಿಗೆ ಅನುಕೂಲ ಮಾಡಿಕೊಡಬೇಕು.
ಎಸ್.ಎಸ್.ಪಾಟೀಲ, ಹಿರಿಯ ವಕೀಲರು.