ದತ್ತ ಮಾಲಾಧಾರಾಣೆ ಹಿನ್ನೆಲೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿರೋ ಪೊಲೀಸ್ ಇಲಾಖೆ ದತ್ತಪೀಠ ಸೇರಿದಂತೆ ಜಿಲ್ಲಾದ್ಯಂತ 2000 ಕ್ಕೂ ಅಧಿಕ ಪೊಲೀಸರ ಬಂದೋಬಸ್ತ್ ಕಲ್ಪಿಸಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ನ.05): ಕಾಫಿನಾಡ ವಿವಾದಿತ ಕೇಂದ್ರ ಇನಾಂ ದತ್ತಾತ್ರೇಯ ಪೀಠದಲ್ಲಿ ಶ್ರೀರಾಮಸೇನೆ ವತಿಯಿಂದ ನಡೆಯುತ್ತಿರೋ ದತ್ತಮಾಲಾ ಅಭಿಯಾನ ಇಂದಿಗೆ (ಭಾನುವಾರ) ಅಂತಿಮಗೊಳ್ಳಲಿದೆ. ಇಂದು ಮನೆ ಮನೆಗೆ ತೆರಳಿ ಪಡಿ ಸಂಗ್ರಹಿಸಿದ್ದು ಸರ್ಕಾರ ಬದಲಾಗುತ್ತಿದ್ದಂತೆ ಆಡಳಿತದ ನಿಲುವುಗಳು ಬದಲಾಗುತ್ತಿವೆ ಎಂದು ಜಿಲ್ಲಾಡಳಿತ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ವಾರದಿಂದ ನಡೆಯುತ್ತಿರೋ ದತ್ತಮಾಲಾ ಅಭಿಯಾನಕ್ಕೆ ಇಂದು (ಭಾನುವಾರ) ತೆರೆ ಬೀಳಲಿದ್ದು, ನಾಗಸಾಧು ಸೇರಿದಂತೆ ವಿವಿಧ ಮಠಾಧೀಶರು ನಗರದಾದ್ಯಂತ ಬೃಹತ್ ಶೋಭಾಯಾತ್ರೆ ನಡೆಸಿ, ದತ್ತಪೀಠದಲ್ಲಿ ಹೋಮ-ಹವನ ನಡೆಸಿಲಿದ್ದಾರೆ.
undefined
ಜಿಲ್ಲಾಡಳಿತದ ವಿರುದ್ಧ ಶ್ರೀ ರಾಮಸೇನೆ ಕಿಡಿ :
ಚಿಕ್ಕಮಗಳೂರಿನ ಹಿಂದೂ-ಮುಸ್ಲಿಮರ ಭಾವೈಕ್ಯತಾ ಹಾಗೂ ವಿವಾದಿತ ಕೇಂದ್ರ ಇನಾಂ ದತ್ತಾತ್ರೇಯ ಪೀಠ ನಮ್ಮದೆಂದು 3 ದಶಕಗಳಿಂದ ಎರಡೂ ಸಮುದಾಯದವರು ಹೋರಾಡ್ತಿದ್ದಾರೆ. ಹಿಂದೂ ಸಂಘಟನೆಗಳ ಹೋರಾಟದ ಫಲವಾಗಿ ಕಳೆದ ವರ್ಷ ಸರ್ಕಾರ ಹಿಂದೂ ಅರ್ಚಕರ ನೇಮಿಸಿದ್ದು ನಮ್ಮ ಆರಂಭಿಕ ಗೆಲುವು, ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠವಾಗೋವರೆಗೂ ಹೋರಾಟ ನಿಲ್ಲದು ಎಂದು ಶ್ರೀರಾಮಸೇನೆ ಈ ಬಾರಿ ದತ್ತಮಾಲಾ ಅಭಿಯಾನಕ್ಕೆ ಮಹಾರಾಷ್ಟ್ರದಿಂದ ಅಗೋರಿ ವಿವೇಕನಾಥ್ ಜೀ ಅವರನ್ನ ಕರೆತಂದಿದೆ.
ಚಿಕ್ಕಮಗಳೂರು: ಮನೆಯಲ್ಲಿ ಜಿಂಕೆ-ಚಿರತೆ ಚರ್ಮ ಸಿಕ್ಕಿದ್ದ ಶಾಖಾದ್ರಿ ವಿಚಾರಣೆಗೆ ಗೈರು
ಶುಕ್ರವಾರ ನಗರದ ಮನೆ-ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿರೋ ಮಾಲಾಧಾರಿಗಳು ಇಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ ಇರುಮುಡಿ ಹೊತ್ತು ದತ್ತಾತ್ರೇಯ ಹಾಗೂ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ದಾಖಲೆಗಳ ಪ್ರಕಾರ ದತ್ತಪೀಠ ಹಿಂದೂ ಪೀಠವೇ ಆಗಿದೆ. ದತ್ತಪೀಠವೇ ಬೇರೆ, ದರ್ಗಾವೇ ಬೇರೆ. ಅದು ಸರ್ಕಾರಕ್ಕೂ ಗೊತ್ತು. ಶೀಘ್ರವೇ ದತ್ತಪೀಠವನ್ನು ಹಿಂದುಗಳ ಪೀಠವೆಂದು ಘೋಷಿಸಬೇಕೆಂದು ಮಾಲಾಧಾರಿಗಳು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸರ್ಕಾರ ಹೊಸ ಆಚರಣೆ ಮಾಡಬೇಡಿ ಎಂದು ಹೇಳುತ್ತಿದೆ. ಆದರೆ, ಹತ್ತಾರು ಷರತ್ತುಗಳನ್ನ ಹಾಕಿದೆ. ಹೊಸ ಆಚರಣೆ ಮಾಡಬೇಡಿ ಎಂದು ಹೇಳಿ ನಮ್ಮ ಬಳಿ ಬಾಂಡ್ ಕೇಳುತ್ತಿದೆ. ಇಷ್ಟು ವರ್ಷ ಇಲ್ಲದ ಬಾಂಡ್ ಈಗ ಏಕೆ. ಅದು ಹೊಸ ಆಚರಣೆ ಅಲ್ವೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದಾರೆ.
ಜಿಲ್ಲಾದ್ಯಂತ ಖಾಕಿ ಕೂಡ ಹೈ ಅಲರ್ಟ್ :
ಕಳೆದ ಏಳು ದಿನಗಳಿಂದ ನಡೆಯುತ್ತಿರೋ ದತ್ತಮಾಲಾ ಅಭಿಯಾನಕ್ಕೆ ಇಂದು ಅಂತಿಮ ತೆರೆ ಬೀಳಿಲಿದೆ. ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಇಂದು ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ ಮಾಲಾಧಾರಿಗಳು ದತ್ತಪೀಠ ತೆರಳಲಿದ್ದಾರೆ. ಸುಮಾರು 5000 ಸಾವಿರಕ್ಕೂ ಅಧಿಕ ದತ್ತಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ದತ್ತಮಾಲಾಧಾರಾಣೆ ಹಿನ್ನೆಲೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿರೋ ಪೊಲೀಸ್ ಇಲಾಖೆ ದತ್ತಪೀಠ ಸೇರಿದಂತೆ ಜಿಲ್ಲಾದ್ಯಂತ 2000 ಕ್ಕೂ ಅಧಿಕ ಪೊಲೀಸರ ಬಂದೋಬಸ್ತ್ ಕಲ್ಪಿಸಿದೆ.
ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ರೂಟ್ಮಾರ್ಚ್ ನಡೆಸಿದ್ದಾರೆ. ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾದ್ಯಂತ 26 ಚೆಕ್ ಪೋಸ್ಟ್ ನಿರ್ಮಿಸಿದ್ದಾರೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಕ್ಯಾಮರಾ ಹಾಗೂ ಡ್ರೋನ್ ಕಣ್ಗಾವಲು ಶೋಭಾಯಾತ್ರೆ ಹಾಗೂ ದತ್ತಪೀಠದ ಮೇಲಿರುತ್ತೆ. 8 ಕೆ.ಎಸ್.ಆರ್.ಪಿ. 12 ಡಿಎಆರ್ ತುಕಡಿ, ನಗರದಲ್ಲಿ 800-900 ಪೊಲೀಸರು ನಿಯೋಜಿಸಿದ್ದಾರೆ. 35 ಪಿಎಸ್ಐ, 15 ಸಿಪಿಐ, 4 ಡಿವೈಎಸ್ಪಿ ಓರ್ವ ಎಸ್ಪಿ ಹಾಗೂ ಎಸ್ಪಿ ಬಂದೋಬಸ್ತ್ ನಲ್ಲಿ ಇದ್ದಾರೆ. ಜೊತೆಗೆ 300 ಹೋಂಗಾರ್ಡ್ಗಳನ್ನೂ ನೇಮಿಸಿದ್ದಾರೆ.