ಕೇವಲ 4.50 ಕೋಟಿ ಬರ ಪರಿಹಾರ: ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಖೂಬಾ ಗರಂ

By Kannadaprabha NewsFirst Published Nov 4, 2023, 10:45 PM IST
Highlights

ಒಂದು ಜಿಲ್ಲೆಗೆ ನೀಡಬೇಕಾದ 334 ಕೋಟಿ ರುಪಾಯಿ ಪರಿಹಾರವನ್ನು ಇಡಿ ರಾಜ್ಯಕ್ಕೆ ನೀಡಿರುವುದು ಶೋಚನೀಯ ಸಂಗತಿಯಾಗಿದೆ ಎಂದ ಕೇಂದ್ರ ಸಚಿವ ಭಗವಂತ ಖೂಬಾ 

ಬೀದರ್(ನ.04):  ಬರ ಪರಿಹಾರ ಘೋಷಣೆ ಮಾಡುವಲ್ಲಿ ರಾಜ್ಯದ ರೈತರಿಗೆ ಹಾಗೂ ಬೀದರ್‌ ರೈತರಿಗೆ ಮತ್ತೆ ಅನ್ಯಾಯ ಮಾಡಿದೆ, 4.50 ಕೋಟಿ ರು. ನೀಡುವ ಮೂಲಕ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಪರಿಹಾರ ಘೋಷಿಸಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಕಿಡಿ ಕಾರಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ಒಂದು ಜಿಲ್ಲೆಗೆ ನೀಡಬೇಕಾದ 334 ಕೋಟಿ ರುಪಾಯಿ ಪರಿಹಾರವನ್ನು ಇಡಿ ರಾಜ್ಯಕ್ಕೆ ನೀಡಿರುವುದು ಶೋಚನೀಯ ಸಂಗತಿಯಾಗಿದೆ. ಬೀದರ್‌ ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ಮೊದಲ ಹಂತದಲ್ಲಿ ಜಿಲ್ಲಾಡಳಿತದಿಂದ 8 ತಾಲೂಕುಗಳಲ್ಲಿ ಕೃಷಿ, ತೋಟಗಾರಿಕೆ ಮತ್ತು ರೆಷ್ಮೆ ಇಲಾಖೆಗಳ ಮೂಲಕ ಸರ್ವೆ ಮಾಡಿ, 2,54,803 ರೈತರ ಒಟ್ಟು 4 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದ್ದು, ಅಂದಾಜು 330 ಕೋಟಿ ಬೆಳೆ ಹಾನಿ ಕುರಿತು ವರದಿ ಸಲ್ಲಿಸಲಾಗಿದೆ. ಇಷ್ಟು ಕಡಿಮೆ ಮೊತ್ತದ ಪರಿಹಾರ ಜಿಲ್ಲೆಗೆ ಬರುವಲ್ಲಿ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ನಿರ್ಲಕ್ಷ್ಯತನವೇ ಕಾರಣವಾಗಿದೆ.

ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಕೆಳಮಟ್ಟದ ರಾಜಕೀಯ: ಖಂಡ್ರೆ ವಿರುದ್ಧ ಹರಿಹಾಯ್ದ ಖೂಬಾ

ಖಂಡ್ರೆಯವರು ಅಧಿಕಾರದ ಮದದಿಂದ ಹೊರಬಂದು, ಲೂಟಿ ಸರ್ಕಾರದಿಂದ ರೈತರಿಗೆ ಸಿಗಬೇಕಾದಂತ ನ್ಯಾಯಯುತವಾದಂತ ಪರಿಹಾರ ತಕ್ಷಣವೆ ಒದಗಿಸಿಕೊಡಬೇಕು ಹಾಗೂ ಫಸಲ್ ಬಿಮಾ ಯೋಜನೆಯಡಿ ನಷ್ಟವಾದ ರೈತರ ಬೆಳೆಗಳಿಗೂ ಸರಿಯಾಗಿ ಸಮೀಕ್ಷೆ ಮಾಡಿಸಿ, ಸರಿಯಾದ ಪರಿಹಾರ ಶೀಘ್ರದಲ್ಲಿ ಕೊಡಿಸುವ ಕೆಲಸ ಮಾಡಬೇಕು ಖಂಡ್ರೆಯವರಿಗೆ ತಾಕೀತು ಮಾಡಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೂಡಲೇ ಈ ಪರಿಹಾರ ಹೆಚ್ಚಿಸಿ, ಜಿಲ್ಲಾಡಳಿತ ಸಲ್ಲಿಸಿರುವ ವರದಿಯನ್ವಯ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಒತ್ತಾಯಿಸಿದ್ದಾರೆ.

click me!