ಕಾರ್ಮಿಕರಿಗೆ 300ಕ್ಕೂ ಅಧಿಕ ಆಹಾರದ ಕಿಟ್ ಕೊಟ್ಟ ಪಿಎಸ್‌ಐ| ಆಹಾರಕ್ಕಾಗಿ ಪರಿತಪಿಸುತ್ತಿರುವ ಪ್ರಾಣಿಗಳಿಗೆ ಹಾಗೂ ಬಡ ಕಾರ್ಮಿಕರಿಗೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದು ಸೈ ಎನಿಸಿಕೊಂಡ ಇಬ್ಬರು ಪೊಲೀಸ್ ಅಧಿಕಾರಿಗಳು|
ಹುಬ್ಬಳ್ಳಿ(ಏ.25): ಲಾಕ್‌ಡೌನ್‌ನ ಈ ಸಮಯದಲ್ಲಿ ಪೊಲೀಸರೆಂದರೆ ತಟ್ಟನೆ ನೆನಪಿಗೆ ಬರುವುದು ಮನೆಯಿಂದ ಹೊರಗೆ ಬರುವವರಿಗೆ ಲಾಠಿ ರುಚಿ ತೋರಿಸಿ ಮನೆಗೆ ಕಳುಹಿಸುವ ದೃಶ್ಯ ಮಾತ್ರ. ಆದರೆ ಇಲ್ಲಿನ ಇಬ್ಬರು ಪೊಲೀಸ್ ಅಧಿಕಾರಿಗಳು ಆಹಾರಕ್ಕಾಗಿ ಪರಿತಪಿಸುತ್ತಿರುವ ಪ್ರಾಣಿಗಳಿಗೆ ಹಾಗೂ ಬಡ ಕಾರ್ಮಿಕರಿಗೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದು ಸೈ ಎನಿಸಿಕೊಂಡಿದ್ದಾರೆ.
ಹೌದು, ಅಣ್ಣಿಗೇರಿ ಠಾಣೆಯ ಪಿಎಸ್‌ಐ ಎಲ್.ಕೆ. ಜುಲಕಟ್ಟಿ ಕೋತಿಗಳಿಗೆ ಆಹಾರ ನೀಡುವ ಮೂಲಕ ಗಮನ ಸೆಳೆದರೆ, ಧಾರವಾಡ ಗ್ರಾಮೀಣ ಠಾಣೆಯ ಪಿಎಸ್‌ಐ ಮಹೇಂದ್ರ ಕುಮಾರ ನಾಯ್ಕ ಬಡ ಕಾರ್ಮಿಕರಿಗೆ ಆಹಾರದ ಕಿಟ್ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಅಜ್ಜಿ ಮನೆಗೆ ಬಂದು ಕೊರೋನಾ ಸೋಂಕು ಅಂಟಿಸಿಕೊಂಡ ಬಾಲಕಿ
ಕೋತಿಗಳಿಗೆ ಆಹಾರ:
ಅಣ್ಣಿಗೇರಿ ಠಾಣೆಯ ಎದುರು ದೊಡ್ಡ ಪ್ರಾಂಗಣವಿದೆ. ನಾಲ್ಕಾರು ದೊಡ್ಡ ದೊಡ್ಡ ಮರಗಳಿವೆ. ಪ್ರತಿನಿತ್ಯ ಅಲ್ಲಿ ಸುಮಾರು 35-40 ಕೋತಿಗಳು ಬರುತ್ತವೆ. ಲಾಕ್‌ಡೌನ್‌ಗಿಂತ ಮಾರುಕಟ್ಟೆಗಳಲ್ಲಿ ಅಳಿದುಳಿದ, ಬಿಸಾಡಿದ ತರಕಾರಿ, ಹಣ್ಣುಗಳನ್ನು ತಿನ್ನುತ್ತಾ ಬದುಕು ಸಾಗಿಸುತ್ತಿದ್ದವು. ಲಾಕ್‌ಡೌನ್ ಕಾರಣ ಮಾರುಕಟ್ಟೆ ಬಂದ್ ಆಗಿದೆ. ಇವುಗಳಿಗೆ ತಿನ್ನಲು ಆಹಾರ ಸಿಗದೇ ಪರಿತಪಿಸುತ್ತಿದ್ದವು. ಇದನ್ನು ಗಮನಿಸಿದ ಪಿಎಸ್‌ಐ ಎಲ್.ಕೆ. ಜುಲಕಟ್ಟಿ, ಹದಿನೈದು ದಿನಗಳಿಂದ ಈ ಕೋತಿಗಳಿಗೆ ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಿದ್ದಾರೆ. ದ್ರಾಕ್ಷಿ ಹಣ್ಣು, ಬಾಳೆಹಣ್ಣು ಸೇರಿದಂತೆ ಬಗೆ ಬಗೆಯ ಹಣ್ಣುಗಳನ್ನು ತಂದು ಠಾಣೆಯ ಎದುರಿಗೆ ಕೋತಿಗಳಿಗೆ ಹಾಕುತ್ತಾರೆ. ಜತೆಗೆ ನಾಲ್ಕೆ ೖದು ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಕುಡಿಯುವ ನೀರನ್ನು ಇಟ್ಟಿರುತ್ತಾರೆ. ಕೋತಿಗಳು ನೀರು ಕುಡಿದು ಹಣ್ಣು ತಿಂದು ಅಲೆದಾಡುತ್ತಿವೆ. ಪ್ರತಿನಿತ್ಯ 35-40 ಕೋತಿಗಳು ಇಲ್ಲಿ ಆಹಾರ ಪಡೆಯುತ್ತವೆಯಂತೆ.
ಆಹಾರದ ಕಿಟ್:
ಇನ್ನೂ ಧಾರವಾಡ ಗ್ರಾಮೀಣ ಠಾಣೆಯ ಪಿಎಸ್‌ಐ ಮಹೇಂದ್ರಕುಮಾರ ನಾಯ್ಕ, ತಮ್ಮ ಸಹದ್ಯೋಗಿಗಳು, ಸ್ನೇಹಿತರ ನೆರವು ಪಡೆದು . 2.5-3 ಲಕ್ಷ ಸಂಗ್ರಹಿಸಿದ್ದಾರೆ. ಅದರಲ್ಲಿ ಅಕ್ಕಿ, ಬೇಳೆ, ರವಾ, ಬೆಲ್ಲ ಮತ್ತಿತರರ ವಸ್ತುಗಳನ್ನು ಖರೀದಿಸಿ ಆಹಾರದ ಕಿಟ್ ತಯಾರಿಸಿದ್ದಾರೆ. ನರೇಂದ್ರ, ನಿಗದಿ, ಅಮ್ಮಿನಬಾವಿ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಇಟ್ಟಿಗೆ ಭಟ್ಟಿ, ಕಟ್ಟಡ ಕಾರ್ಮಿಕರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದ್ದಾರೆ. ಈ ವರೆಗೆ ಬರೋಬ್ಬರಿ 300ಕ್ಕೂ ಹೆಚ್ಚು ಆಹಾರದ ಕಿಟ್‌ಗಳನ್ನು ವಿತರಿಸಿದ್ದಾರೆ. ಪ್ರತಿ ಕಿಟ್‌ನಲ್ಲೂ 5 ಕೆಜಿ ಅಕ್ಕಿ, 3 ಕೆಜಿ ರವಾ, 1 ಕೆಜಿ ಎಣ್ಣೆ, 2 ಕೆಜಿ ಬೆಲ್ಲ, 1 ಕೆಜಿ ತೊಗರಿ ಬೇಳೆ, 1 ಕೆಜಿ ಕಡ್ಲೆ ಬೇಳೆ, ಸೋಪು ಮತ್ತಿತರ ವಸ್ತುಗಳಿವೆಯಂತೆ.
ಇನ್ನೂ 50-60 ಕಿಟ್‌ಗಳಿವೆಯಂತೆ. ಒಟ್ಟಿನಲ್ಲಿ ಈ ಪಿಎಸ್‌ಐಗಳ ಕಾರ್ಯವೈಖರಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟುಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ಹದಿನೈದು ದಿನಗಳಿಂದ ಕೋತಿಗಳಿಗೆ ಆಹಾರ ನೀಡುತ್ತಿದ್ದೇನೆ. ನಾನಷ್ಟೇ ಅಲ್ಲ. ಕೆಲವೊಂದಿಷ್ಟುನನ್ನ ಸಿಬ್ಬಂದಿ ಇದಕ್ಕೆ ನೆರವಾಗುತ್ತಿದ್ದಾರೆ. ಮನುಷ್ಯರು ಬೇಡಿಕೊಂಡು ತಿನ್ನಬಹುದು. ಆದರೆ ಮೂಕ ಪ್ರಾಣಿಗಳು ಏನು ಮಾಡಬೇಕು. ಅದಕ್ಕೆ ನನ್ನ ಕೈಲಾದಷ್ಟುವ್ಯವಸ್ಥೆ ಮಾಡಿದ್ದೇನೆ ಎಂದು ಅಣ್ಣಿಗೇರಿ ಪಿಎಸ್‌ಐ ಎಲ್.ಕೆ. ಜುಲಕಟ್ಟಿ ಹೇಳಿದ್ದಾರೆ.
ಕೆಲ ಕಾರ್ಮಿಕರು ಊಟವೂ ಇಲ್ಲದೇ ಒದ್ದಾಡುವುದನ್ನು ನೋಡಿದೆ. ಆದಕಾರಣ ಸ್ನೇಹಿತರು, ಸಿಬ್ಬಂದಿ ನೆರವು ಪಡೆದು ಆಹಾರದ ಕಿಟ್‌ಗಳನ್ನು ತಯಾರಿಸಿ ಗ್ರಾಮೀಣ ಭಾಗದ ಕಾರ್ಮಿಕರಿಗೆ ಹಂಚಿದ್ದೇವೆ ಎಂದು ಧಾರವಾಡ ಗ್ರಾಮೀಣ ಠಾಣೆಯ ಪಿಎಸ್‌ಐ ಮಹೇಂದ್ರ ಕುಮಾರ ನಾಯ್ಕ ಹೇಳಿದ್ದಾರೆ.