ಪೊಲೀಸ್ ಕೆಲಸಕ್ಕೆ ಬರೊಲ್ಲವೆಂದ ASP ಬರಮನಿ ಮನವೊಲಿಸಿದ ಸಿಎಂ ಸಿದ್ದರಾಮಯ್ಯ; ಇಂದು ಡ್ಯೂಟಿಗೆ ಹಾಜರ್!

Published : Jul 03, 2025, 06:57 PM ISTUpdated : Jul 03, 2025, 06:59 PM IST
police officer Narayan Barmani

ಸಾರಾಂಶ

ಸಿಎಂ ಸಿದ್ದರಾಮಯ್ಯ ಅವರಿಂದ ಸಾರ್ವಜನಿಕವಾಗಿ ಅವಮಾನಗೊಂಡ ನಂತರ ಸ್ವಯಂ ನಿವೃತ್ತಿ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದ ಹಿರಿಯ ಪೊಲೀಸ್ ಅಧಿಕಾರಿ ನಾರಾಯಣ ಬರಮನಿ, ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸಿಎಂ ಮತ್ತು ಗೃಹ ಸಚಿವರ ಮನವೊಲಿಕೆಯ ನಂತರ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ.

ಬೆಂಗಳೂರು: ನಿನ್ನೆ ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿ ನಾರಾಯಣ ಬರಮನಿ ಅವರು ಸ್ವಯಂ ನಿವೃತ್ತಿ ಪಡೆದ ವಿಚಾರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಮೇಲೆ ಕೈ ಎತ್ತಿ ಅವಮಾನ ಮಾಡಿದ್ದರಿಂದ ನೊಂದು ಸ್ವಯಂ ನಿವೃತ್ತಿ ಪಡೆಯುವುದಾಗಿ ಅವರು ವಿಧಾನಸೌಧದಲ್ಲಿರುವ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಜೂನ್ 12 ರಂದೇ ಪತ್ರ ಬರೆದಿದ್ದರು. ಇದು ಮಾಧ್ಯಮಗಳಲ್ಲಿ ತೀವ್ರ ಚರ್ಚೆಯಾದ ನಂತರ ಮುಜುಗರಕ್ಕೊಳಗಾದ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರು ಅವರಿಗೆ ಕರೆ ಮಾಡಿ ತಮ್ಮ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಸೂಚಿಸಿದ್ದರು. ಈ ಬೆಳವಣಿಗೆಯ ಬೆನ್ನಲೇ ಇಂದು ನಾರಾಯಣ ಬರಮನಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದ ಸಾಧನಕೇರಿಯ ನಿವಾಸದಲ್ಲಿ ಮಾತನಾಡಿದ ನಾರಾಯಣ ಬರಮನಿ, ನಾನು ಶಿಸ್ತಿನ ಇಲಾಖೆಯಲ್ಲಿ ಇದ್ದೇನೆ. ನನ್ನ ಭಾವನೆಗಳನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಈ‌ ಕುರಿತು ಮೇಲಾಧಿಕಾರಿಗಳು, ಸಿಎಂ, ಗೃಹ ಸಚಿವರು ಮಾತನಾಡಿದ್ದಾರೆ. ಈಗ ನಾನು ದೈನಂದಿನ ಕೆಲಸಕ್ಕೆ ಹಾಜರಾಗುತ್ತಿರುವೆ ಎಂದು ಹೇಳಿಕೆ ನೀಡಿದ್ದಾರೆ.

ಧಾರವಾಡದ ಹೆಚ್ಚುವರಿ ಎಸ್‌ಪಿ ಆಗಿ ಕೆಲಸ ಮಾಡುತ್ತಿರುವ ನಾರಾಯಣ ಬರಮಣಿ ಅವರು ಪೊಲೀಸ್ ಇಲಾಖೆಯಲ್ಲಿ ಕಳೆದ 31 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಅವರ ನಿವೃತ್ತಿಗೆ ಕೇವಲ 4 ವರ್ಷವಷ್ಟೇ ಬಾಕಿ ಇತ್ತು. ಹೀಗಿರುವಾಗ ಬೆಳಗಾವಿಯಲ್ಲಿ ನಡೆದ ಈ ಘಟನೆಯಿಂದ ಅವರು ತಮಗೆ ತೀವ್ರ ಮುಜುಗರ ಹಾಗೂ ಬೇಸರವಾಗಿದೆ ಎಂದು ಆಪ್ತರ ಬಳಿಯೂ ಹೇಳಿಕೊಂಡಿದ್ದರು ಎನ್ನಲಾಗಿದೆ.

ಇಂದು ಕರ್ತವ್ಯಕ್ಕೆ ಹಾಜರಾದ ಎಎಸ್ಪಿ ಬರಮನಿ

ಇಂದು ಧಾರವಾಡದ ಎಎಸ್ಪಿ ಕಚೇರಿಗೆ ಆಗಮಿಸಿದ ನಾರಾಯಣ ಬರಮನಿ ಎಸ್ಪಿ ಜೊತೆ ಚರ್ಚಿಸಿ ಬಳಿಕ ಕಚೇರಿಗೆ ಆಗಮಿಸಿದ್ದರು. ಆದರೆ ಅವರು ಮಾಧ್ಯಮಗಳ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಜೀನಾಮೆ ವಾಪಸ್ ಪಡೆಯುವ ವಿಚಾರದ ಬಗ್ಗೆ ಸಿಎಂ ಸಾಹೇಬ್ರು ಹಾಗೂ ಗೃಹ ಸಚಿವರು ಮಾತನಾಡಿದ್ದಾರೆ. ನಾನು ಮಾಧ್ಯಮಗಳ ಜೊತೆ ಮಾತನಾಡಿಲ್ಲ, ಸದ್ಯಕ್ಕೆ ಕರ್ತ್ಯವಕ್ಕೆ ಹಾಜರಾಗಿದ್ದೇನೆ ಎಂದು ಹೇಳಿದ್ದಾರೆ.

ನಾರಾಯಣ ಬರಮನಿ ಅವರಿಗೆ ಕೆಲ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೈ ಎತ್ತಿ ಅವಮಾನ ಮಾಡಿದ್ದರು. ರಾಜ್ಯದ ಬೆಳಗಾವಿಯಲ್ಲಿ ನಡೆದ ರಾಜಕೀಯ ಸಮಾವೇಶವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಇವರ ವಿರುದ್ಧ ಕೈ ಎತ್ತಿ ಸಾರ್ವಜನಿಕವಾಗಿ ಅವಮಾನಿಸಿದ್ದರು. ಈ ವೀಡಿಯೋ ನಂತರ ಭಾರಿ ವೈರಲ್ ಆಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಈಗ ಹಿರಿಯ ಪೊಲೀಸ್ ಅಧಿಕಾರಿ ನಾರಾಯಣ ಬರಮಣಿ ಅವರು ರಾಜೀನಾಮೆ ನೀಡಿ ಸ್ವಯಂ ನಿವೃತ್ತಿ ಪಡೆದ ಬಗ್ಗೆ ವರದಿಯಾಗಿತ್ತು. ಕೂಡಲೇ ಅವರ ಜೊತೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್‌, ಮಾತನಾಡಿದ್ದು, ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲೇ ಪೊಲೀಸ್ ಅಧಿಕಾರಿ ನಾರಾಯಣ ಬರಮನಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ನಾರಾಯಣ ಬರಮನಿ ಪತ್ರದಲ್ಲಿ ಏನಿತ್ತು?

ಕಳೆದ 31 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ನಿವೃತ್ತಿಗೆ ಕೇವಲ 4 ವರ್ಷವಷ್ಟೇ ಬಾಕಿ ಇತ್ತು. ಹೀಗಿರುವಾಗ ಬೆಳಗಾವಿಯಲ್ಲಿ ನಡೆದ ಈ ಘಟನೆಯಿಂದ ತಮಗೆ ತೀವ್ರ ಮುಜುಗರ ಹಾಗೂ ಬೇಸರವಾಗಿದೆ. ನಾನು ಮಾಡದ ತಪ್ಪಿಗೆ ಮುಖ್ಯಮಂತ್ರಿಯಿಂದ ಸಾರ್ವಜನಿಕವಾಗಿ ಅವಮಾನ ಮತ್ತುಮುಜುಗರಕ್ಕೊಳಗಾಗಿದ್ದೇನೆ. ಹೀಗಾಗಿ ನನ್ನ ಸೇವೆಗೆ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸುವಂತೆ ನಾನು ವಿನಂತಿಸುತ್ತೇನೆ ಎಂದು ಅವರು ಈ ಪತ್ರದಲ್ಲಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

PREV
Read more Articles on
click me!

Recommended Stories

ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?
ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್