ಪಾತಕಿ ರವಿ ಪೂಜಾರಿ ಜತೆ ಪ್ರಖ್ಯಾತ ಪೊಲೀಸ್ ಅಧಿಕಾರಿ ಸ್ನೇಹ!

By Kannadaprabha NewsFirst Published Mar 12, 2020, 10:16 AM IST
Highlights

ಪಾತಕಿ ರವಿ ಪೂಜಾರಿ ಜತೆ ಸಿಸಿಬಿ ಎಸಿಪಿಯೊಬ್ಬರು ಆತ್ಮೀಯ ಒಡನಾಟ ಹೊಂದಿದ್ದ ಮಹತ್ವದ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿ ಬಂದಿದೆ.

 ಬೆಂಗಳೂರು [ಮಾ.12]:  ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿ ಜತೆ ಸಿಸಿಬಿ ಎಸಿಪಿಯೊಬ್ಬರು ಆತ್ಮೀಯ ಒಡನಾಟ ಹೊಂದಿದ್ದ ಮಹತ್ವದ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿ ಬಂದಿದ್ದು, ಆರೋಪಿತ ಅಧಿಕಾರಿ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪೊಲೀಸ್‌ ಮಹಾನಿರ್ದೇಶಕರಿಗೆ ಬೆಂಗಳೂರು ಪೊಲೀಸ್‌ ಆಯುಕ್ತ ಎಸ್‌.ಭಾಸ್ಕರ್‌ರಾವ್‌ ಶಿಫಾರಸು ಮಾಡಿದ್ದಾರೆ.

ಸಿಸಿಬಿ ಎಸಿಪಿ ವೆಂಕಟೇಶ್‌ ಪ್ರಸನ್ನ ವಿರುದ್ಧ ಆರೋಪ ಕೇಳಿ ಬಂದಿದ್ದು, ಈ ಆಪಾದನೆ ಹಿನ್ನೆಲೆಯಲ್ಲಿ ಅವರನ್ನು ಸಿಸಿಬಿಯಿಂದ ಅತಿ ಗಣ್ಯ ವ್ಯಕ್ತಿಗಳ ಭದ್ರತಾ (ವಿವಿಐಪಿ) ವಿಭಾಗಕ್ಕೆ ಆಯುಕ್ತರು ಬುಧವಾರ ಎತ್ತಂಗಡಿ ಮಾಡಿದ್ದಾರೆ. ಇನ್ನೊಂದೆಡೆ ಪಾತಕಿ ಜತೆ ಸಂಬಂಧವಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಪಿ ಪ್ರವೀಣ್‌ ಸೂದ್‌, ಎಸಿಪಿ ವಿರುದ್ಧ ಇಲಾಖಾ ಮಟ್ಟದ ವಿಚಾರಣೆ ಅಥವಾ ಭ್ರಷ್ಟಾಚಾರ ಆರೋಪದಡಿ ಎಸಿಬಿ ತನಿಖೆ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಎಸಿಪಿ ವೆಂಕಟೇಶ್‌ ಪ್ರಸನ್ನ ಜೊತೆಗಿನ ಸ್ನೇಹದ ವಿಚಾರವನ್ನು ವಿಚಾರಣೆ ವೇಳೆ ರವಿ ಪೂಜಾರಿಯೇ ಬಹಿರಂಗಪಡಿಸಿದ್ದಾನೆ. ಪೂಜಾರಿ ಮಾತ್ರವಲ್ಲದೆ ಕರಾವಳಿ ಭಾಗದ ಮತ್ತೊಬ್ಬ ಕುಖ್ಯಾತ ಪಾತಕಿ ಕಲಿ ಯೋಗೇಶ್‌ ಜತೆ ಕೂಡಾ ಎಸಿಪಿಗೆ ಸಂಪರ್ಕವಿತ್ತು ಎಂದು ಪೂಜಾರಿ ಉಲ್ಲೇಖಿಸಿದ್ದಾನೆ. ಈ ಹೇಳಿಕೆ ಆಧರಿಸಿ ಎಸಿಪಿ ವೆಂಕಟೇಶ್‌ ಪ್ರಸನ್ನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಡಿಜಿಪಿ ಅವರಿಗೆ ಆಯುಕ್ತರ ಮೂಲಕ ಸಿಸಿಬಿ ವಿಸ್ತಾರವಾದ ವರದಿ ಸಲ್ಲಿಸಿದೆ ಎಂದು ಇಲಾಖೆಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

90ರಿಂದ ಪೂಜಾರಿ ನಂಟು:

1994ರಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಪೊಲೀಸ್‌ ಸೇವೆ ಆರಂಭಿಸಿದ ವೆಂಕಟೇಶ್‌ ಪ್ರಸನ್ನ ಅವರು, 2002ರಲ್ಲಿ ಇನ್‌ಸ್ಪೆಕ್ಟರ್‌ ಹುದ್ದೆಗೆ ಮುಂಬಡ್ತಿ ಸಿಕ್ಕಿತು. ಆನಂತರ 2003ರಲ್ಲಿ ಮಂಗಳೂರು ಜಿಲ್ಲಾ ಅಪರಾಧ ಶಾಖೆಯ (ಡಿಸಿಐಬಿ) ಇನ್‌ಸ್ಪೆಕ್ಟರ್‌ ಆಗಿ ನೇಮಕವಾದರು. ಅದೇ ವೇಳೆಗೆ ರವಿ ಪೂಜಾರಿ ಹಾಗೂ ಕಲಿ ಯೋಗೇಶ್‌ ಸೇರಿದಂತೆ ಕರಾವಳಿ ಭಾಗದಲ್ಲಿ ಕೆಲವು ಭೂಗತ ಪಾತಕಿಗಳ ಹಾವಳಿ ಶುರುವಾಗಿತ್ತು. ಅಂದಿನಿಂದಲೇ ಭೂಗತ ಜಗತ್ತಿನೊಂದಿಗೆ ಪ್ರಸನ್ನಗೆ ನಂಟು ಬೆಳೆಯಿತು ಎಂದು ಅಧಿಕಾರಿಗಳು ಹೇಳುತ್ತಾರೆ.

ಮುತ್ತಪ್ಪ ರೈ ಲೋಕಲ್ ಡಾನ್; ಮೇಹೂ ಇಂಟರ್‌ನ್ಯಾಷನಲ್ ಡಾನ್: ರವಿ ಪೂಜಾರಿ...

2003ರಿಂದ 2015ವರೆಗೆ ಮಂಗಳೂರಿನಲ್ಲಿ ಕಾರ್ಯನಿರ್ವಹಿಸಿದ ಪ್ರಸನ್ನ, 2015ರಲ್ಲಿ ಬೆಂಗಳೂರು ಸಿಸಿಬಿಗೆ ವರ್ಗಾವಣೆಗೊಂಡಿದ್ದರು. ಅನಂತರ ಕೂಡಾ ಕರಾವಳಿ ಭಾಗದ ಪಾತಕಿಗಳ ಜತೆ ಅವರ ಸ್ನೇಹ ಮುಂದುವರೆಯಿತು. ಇದರಲ್ಲಿ ಹಣಕಾಸು ವ್ಯವಹಾರ ಕೂಡಾ ನಡೆದಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ಸೆನೆಗಲ್‌ನಲ್ಲಿ ಸಿಕ್ಕಿಬಿದ್ದ ರವಿ ಪೂಜಾರಿಯನ್ನು ಕರೆ ತಂದು ಸಿಸಿಬಿ ವಿಚಾರಣೆಗೊಳಪಡಿಸಿತು. ಆಗ ತನ್ನೊಂದಿಗೆ ವೆಂಕಟೇಶ್‌ ಪ್ರಸನ್ನ ನಿರಂತರ ಸಂಪರ್ಕದಲ್ಲಿದ್ದರು. ಇದರಿಂದ ನನ್ನ ವಿರುದ್ಧ ಪೊಲೀಸ್‌ ವಲಯದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಮಾಹಿತಿ ಸಿಗುತ್ತಿತ್ತು. ಕಲಿ ಯೋಗೇಶ್‌ ಜತೆ ಸಹ ಪ್ರಸನ್ನಗೆ ಉತ್ತಮ ಸ್ನೇಹವಿದೆ ಎಂದು ಪೂಜಾರಿ ಹೇಳಿಕೆ ನೀಡಿದ್ದಾನೆ.

ಎಸಿಪಿ ನಂಟಿನ ವಿಚಾರ ಗೊತ್ತಾದ ಕೂಡಲೇ ತನಿಖಾಧಿಕಾರಿಗಳು, ಕೂಡಲೇ ಆಯುಕ್ತ ಭಾಸ್ಕರ್‌ ರಾವ್‌ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಿಸಿಬಿ ಅಧಿಕಾರಿಗಳಿಂದ ಆರೋಪ ಕುರಿತು ವಿವರ ವರದಿ ಪಡೆದ ಆಯುಕ್ತರು, ಮೂರು ದಿನಗಳ ಹಿಂದೆ ಡಿಜಿಪಿ ಅವರಿಗೆ ಕಳುಹಿಸಿ ಎಸಿಪಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಪೂಜಾರಿ ವಿರುದ್ಧ ಸಿಸಿಬಿ ತನಿಖೆ ನಡೆಸುತ್ತಿದೆ. ಹೀಗಿರುವಾಗ ಆತನೊಂದಿಗೆ ಗೆಳೆತನ ಹೊಂದಿದ್ದ ಆರೋಪ ಎದುರಿಸುತ್ತಿರುವ ಅಧಿಕಾರಿಯನ್ನು ಅದೇ ವಿಭಾಗದಲ್ಲಿ ಮುಂದುವರೆಸಿದರೆ ತಪ್ಪು ಸಂದೇಶ ಹೋಗುತ್ತದೆ. ಇದರಿಂದ ಪ್ರಸನ್ನ ಅವರನ್ನು ವಿವಿಐಪಿ ವಿಭಾಗಕ್ಕೆ ಆಯುಕ್ತ ವರ್ಗಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭೂಗತ ಲೋಕ ಬಲ್ಲ ಪರಿಣಿತ ಅಧಿಕಾರಿಯೆಂದೇ ಖ್ಯಾತಿ!

ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಅಂತಾರಾಷ್ಟ್ರೀಯ ಮಟ್ಟದ ಭೂಗತ ಲೋಕದ ಬಗ್ಗೆ ಒಳ್ಳೆಯ ಮಾಹಿತಿ ಹೊಂದಿದ್ದ ಅಧಿಕಾರಿಯೆಂದೇ ವೆಂಕಟೇಶ್‌ ಪ್ರಸನ್ನ ಹೆಸರು ಪಡೆದಿದ್ದರು. ಈಗ ಅವರ ವಿರುದ್ಧ ಆರೋಪ ಬಂದಿರುವುದು ತೀವ್ರ ಚರ್ಚೆ ಹುಟ್ಟು ಹಾಕಿದೆ.

ಐದು ವರ್ಷಗಳ ಹಿಂದೆ ಸೆರೆಯಾದ ಕರಾವಳಿ ಭಾಗದ ಭೂಗತ ಪಾತಕಿ ಬನ್ನಂಜೆ ರಾಜಾ ಬಂಧನ ಪ್ರಕರಣದಲ್ಲಿ ಪ್ರಸನ್ನ ಕೆಲಸ ಮಾಡಿದ್ದರು. ಅಲ್ಲದೆ, ರವಿ ಪೂಜಾರಿ ಸೆರೆಯಲ್ಲಿ ತನ್ನ ಪಾತ್ರವಿದೆ ಎಂಬಂತೆ ಅವರು ಬಿಂಬಿಸಿಕೊಂಡಿದ್ದರು. ಇಲಾಖೆಯಲ್ಲಿ ಡಾನ್‌ಗಳ ವಿರುದ್ಧ ತನಿಖೆ ನಡೆಸುವಂತೆ ತೋರಿಸಿ, ಆಂತರಿಕವಾಗಿ ಅವರಿಗೆ ನೆರವಾಗುತ್ತಿದ್ದರು ಎಂಬ ಗಂಭೀರ ಸ್ವರೂಪ ಆರೋಪದ ಕೇಳಿ ಬಂದಿದೆ.

click me!