ಕೋಳಿಗಳಿಂದ ಕೊರೋನಾ ವೈರಸ್ ಹರಡಲಿದೆ ವದಂತಿ| ಕೋಳಿಗಳ ಮಾರಾಟದಲ್ಲಿ ತೀವ್ರ ಕುಸಿತ| ಕುಕ್ಕಟೋಧ್ಯಮಕ್ಕೆ ಪೆಟ್ಟು| ಕೋಳಿಯಿಂದ ವೈರಸ್ ಹರಡುತ್ತಿರುವುದು ಸಾಬೀತುಪಡಿಸಿದರೆ 5 ಲಕ್ಷ ಬಹುಮಾನ|
ಬಳ್ಳಾರಿ(ಮಾ.12): ಕೋಳಿಗಳಿಂದ ಕೊರೋನಾ ವೈರಸ್ ಹರಡಲಿದೆ ಎಂಬ ವದಂತಿಗೆ ಕುಕ್ಕಟೋದ್ಯಮ ತತ್ತರಿಸಿ ಹೋಗಿದೆ. ಕೋಳಿ ಮಾಂಸ ಪ್ರಿಯರಲ್ಲಿ ವಿಶ್ವಾಸ ಮೂಡಿಸಲು ಹಾಗೂ ಇದರಿಂದ ವೈರಸ್ ಹರಡುವುದಿಲ್ಲ ಎಂಬುದನ್ನು ತಿಳಿ ಹೇಳುವ ಉದ್ದೇಶದಿಂದ ಕುಕ್ಕುಟೋದ್ಯಮಿಗಳು ಸಾರ್ವಜನಿಕವಾಗಿಯೇ ಸವಾಲು ಹಾಕಿದ್ದಾರೆ.
ಕೋಳಿಯಿಂದ ವೈರಸ್ ಹರಡುತ್ತಿರುವುದು ಸಾಬೀತುಪಡಿಸಿದರೆ 5 ಲಕ್ಷ ಬಹುಮಾನ ನೀಡುವುದಾಗಿ ಬಳ್ಳಾರಿ ಜಿಲ್ಲಾ ಕುಕ್ಕುಟೋದ್ಯಮಿಗಳ ಸಂಘ ಘೋಷಣೆ ಮಾಡಿದೆ. ಕೋಳಿಗಳಿಂದ ವೈರಸ್ ಹರಡುತ್ತಿಲ್ಲ ಎಂದು ಈಗಾಗಲೇ ಅರಿವು ಮೂಡಿಸುವ ಕಾರ್ಯವನ್ನು ನಾವು ನಿರಂತರವಾಗಿ ಮಾಡುತ್ತಿದ್ದೇವೆ. ಇಷ್ಟಾಗಿಯೂ ಅನೇಕರಲ್ಲಿ ಈ ಬಗ್ಗೆ ಸಂಶಯವಿದೆ. ಇದನ್ನು ಹೋಗಲಾಡಿಸುವ ಉದ್ದೇಶದಿಂದ 5 ಲಕ್ಷ ಬಹುಮಾನ ಘೋಷಣೆ ಮಾಡಿದ್ದೇವೆ ಎಂದು ಕೋಳಿಫಾರಂ ಮಾಲೀಕರು ಹೇಳುತ್ತಾರೆ. ಆದರೂ ಜನರಲ್ಲಿ ವಿಶ್ವಾಸ ಮೂಡುತ್ತಿಲ್ಲ. ಕೋಳಿ ಮಾಂಸ, ಕೋಳಿ ಮೊಟ್ಟೆ ಖರೀದಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಜನರು ಖರೀದಿಗೆ ಮುಂದಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹೇಗಾದರೂ ಮಾಡಿ ಉದ್ಯಮ ಉಳಿಸಿಕೊಳ್ಳಲು ಕೋಳಿಫಾರಂಗಳ ಮಾಲೀಕರು ಹೆಣಗಾಡುತ್ತಿದ್ದಾರೆ. ‘ಕೋಳಿಗಳಿಂದ ಕೊರೋನಾ ವೈರಸ್ ಬರಲಿದೆ’ ಎಂದು ಹಬ್ಬಿರುವ ವದಂತಿಯಿಂದ ಅವರು ದಿಕ್ಕು ತೋಚದಂತಾಗಿದ್ದಾರೆ. ಕೋಳಿ ಮಾಂಸಪ್ರಿಯರು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಗರದಲ್ಲಿ ಇತ್ತೀಚೆಗೆ ಅತಿ ಕಡಿಮೆ ಬೆಲೆಯಲ್ಲಿ ಕೋಳಿ ಊಟ ಉಣಬಡಿಸಿದ್ದ ಕುಕ್ಕುಟೋದ್ಯಮಿಗಳು, ಕೊರೋನಾ ವೈರಸ್ ಭೀತಿಯಿಂದ ಮಾಂಸೋದ್ಯಮ ತೀವ್ರ ಕುಸಿತ ಕಂಡಿರುವುದರಿಂದ ಮುಂದೇನು ಮಾಡುವುದು ತಿಳಿಯಲಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಪ್ರತಿ ಕೆಜಿ ಮಾಂಸಕ್ಕೆ 90 ಇತ್ತು. ಕೊರೋನಾ ವೈರಸ್ ಭೀತಿ ಶುರುವಾಗುತ್ತಿದ್ದಂತೆಯೇ ದಿನ ದಿನಕ್ಕೆ ಬೆಲೆ ಕುಸಿಯುತ್ತಾ ಬಂದಿದೆ. ಇದೀಗ 6 ರಿಂದ 10 ಗೆ ಇಳಿದಿದೆ. ಇನ್ನು ಕೋಳಿಮೊಟ್ಟೆದರ ಸಹ ಕುಸಿದಿದ್ದು ಒಂದು ಕೋಳಿ ಮೊಟ್ಟೆಯ ಬೆಲೆ 4.80 ರಿಂದ 2.80ಗೆ ಕುಸಿತವಾಗಿದೆ. ಇದರಿಂದ ಕೋಟ್ಯಂತರ ರು. ಹೂಡಿಕೆ ಮಾಡಿ ಉದ್ಯಮ ಶುರು ಮಾಡಿರುವವರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ನಷ್ಟದಿಂದ ಹೊರ ಬರಲು ಒಂದು ಕೋಳಿ ಕೊಂಡರೆ ಮತ್ತೊಂದು ಕೋಳಿ ಉಚಿತ ನೀಡುತ್ತಿದ್ದೇವೆ. ಇಷ್ಟಾಗಿಯೂ ಜನರು ಖರೀದಿಗೆ ಮುಂದೆ ಬರುತ್ತಿಲ್ಲ ಎಂದು ಕುಕ್ಕುಟೋದ್ಯಮಿಗಳು ಆತಂಕ ವ್ಯಕ್ತಪಡಿಸುತ್ತಾರೆ.
ಜಿಲ್ಲೆಯಲ್ಲಿ ಒಟ್ಟು 150 ಜನರು ಕೋಳಿ ಉದ್ಯಮವನ್ನು ನಡೆಸುತ್ತಿದ್ದು, 5 ಲಕ್ಷ ಬಾಯ್ಲರ್ ಕೋಳಿ, 80 ಲಕ್ಷಕ್ಕೂ ಅಧಿಕ ಮೊಟ್ಟೆ ಇಡುವ ಕೋಳಿಯನ್ನು ಸಾಕಾಣಿಕೆ ಮಾಡುತ್ತಿದ್ದಾರೆ.
ಸುಳ್ಳು ವದಂತಿಯಿಂದಾಗಿ ಕೋಳಿ ಉದ್ಯಮಕ್ಕೆ ಪೆಟ್ಟು ಬಿದ್ದಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮೊಟ್ಟೆ ಹಾಗೂ ಕೋಳಿಗಳ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ ಎಂದು ಬಳ್ಳಾರಿಯ ಕೋಳಿ ಫಾರಂ ಮಾಲೀಕ ದುರ್ಗಪ್ರಸಾದ್ ಹೇಳಿದ್ದಾರೆ.