* ವಿ ನಾರಾಯಣ ಅವರ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ
* ಪಕ್ಷಿ ಸಂಕುಲ ಉಳಿವಿಗೆ ಮುಂದಾದ ಪೊಲೀಸ್ ಅಧಿಕಾರಿ
* ಪಕ್ಷಿಗಳಿಗೆ ಸಾಧ್ಯವಾದಷ್ಟು ಪ್ರತಿಯೊಬ್ಬರು ನೀರುಣಿಸುವ ಕಾರ್ಯ ಮಾಡಬೇಕು
ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ(ಏ.21): ಈಗ ಹೇಳಿ ಕೇಳಿ ಬೇಸಿಗೆ ಕಾಲ(Summer Season). ಈ ಸಮಯದಲ್ಲಿ ಪ್ರತಿಯೊಬ್ಬರಿಗೂ ಬಾಯಾರಿಕೆ ಆಗುವುದು ಸಾಮಾನ್ಯ. ಮನುಷ್ಯರೇನೋ ನೀರು ಇದ್ದಲ್ಲಿಗೆ ಹೋಗಿ ನೀರು ಕುಡಿದು ಬಾಯಾರಿಕೆ ತಿರಿಸಿಕೊಳ್ಳುತ್ತಾರೆ. ಆದರೆ ಪಾಪ ಪಕ್ಷಿಗಳು(Birds) ಬಾಯಾರಿಕೆ ತಿರುಸಿಕೊಳ್ಳುವುದು ಬಲು ಕಷ್ಟ. ಈ ಕಷ್ಟ ಅರಿತ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಪಕ್ಷಿಗಳ ದಾಹ ತಣಿಸಲು ಮುಂದಾಗಿದ್ದಾರೆ.
ಪಕ್ಷಿ ಸಂಕುಲ ಉಳಿವಿಗೆ ಮುಂದಾಗಿರುವ ಪೊಲೀಸ್ ಅಧಿಕಾರಿ ಯಾರು?
ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಸಮಾಜದ ಸ್ವಾಸ್ಥ್ಯ ಕಾಪಾಡುವುದಲ್ಲದೇ ಬಿರು ಬೇಸಿಗೆಯಲ್ಲಿ ಹನಿ ನೀರಿಗೂ ಹಾತೋರೆಯುವ ಪಕ್ಷಿಗಳ ದಾಹ ನೀಗಿಸುವ ಪೊಲೀಸ್ ಇನ್ಸ್ಪೆಕ್ಟರ್‌ರೊಬ್ಬರ(Police Inspector) ಕಾರ್ಯ ಮಾದರಿಯಾಗಿದೆ. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಡಿಎಸ್‌ಬಿ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ವಿ.ನಾರಾಯಣ ಎಂಬುವರು ಕಳೆದ ಮೂರು ತಿಂಗಳಿನಿಂದ ಪಕ್ಷಿಗಳಿಗೆ ನೀರುಣಿಸುವ ಮೂಲಕ ಪಕ್ಷಿಪ್ರೇಮಿ ಎನಿಸಿಕೊಂಡಿದ್ದಾರೆ.
Koppal: ಅಂಜನಾದ್ರಿ ಅಭಿವೃದ್ಧಿ: ಶೀಘ್ರ ಸಿಎಂ ನೇತೃತ್ವದಲ್ಲಿ ಸಭೆ: ಆನಂದ ಸಿಂಗ್
ಪಕ್ಷಿಗಳ ಬಗ್ಗೆ ಕಾಳಜಿ ಬರಲು ಕಾರಣ
ಎಲ್ಲಾ ತಿಳುವಳಿಕೆಯುಳ್ಳ ಬುದ್ಧಿಜೀವಿ ಎನಿಸಿಕೊಂಡಿರುವ ಮನುಷ್ಯನೇ ಬೇಸಿಗೆಗೆ ನಲಗುತ್ತಿದ್ದಾನೆ. ಇತಂಹ ಪರಿಸ್ಥಿತಿಯಲ್ಲಿ ಪ್ರಾಣಿ-ಪ್ಷಕಿಗಳು ಯಾವ ರೀತಿಯ ಸಂಕಷ್ಟ ಅನುಭವಿಸುತ್ತಿವೆ ಎನ್ನುವುದು ಊಹಿಸಲು ಕೂಡ ಅಸಾಧ್ಯ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ ವಿ.ನಾರಾಯಣ ತಮ್ಮ ಒತ್ತಡದ ಬದುಕಿನಲ್ಲಿಯೂ ಬೆಳಗ್ಗೆ ಮತ್ತು ಸಂಜೆ ನಿತ್ಯ ಪಕ್ಷಿಗಳಿಗೆ ಸ್ವಂತ ಹಣದಲ್ಲಿ ಆಹಾರ ಒದಗಿಸಿ, ಹಸಿವು ನೀಗಿಸಿ ಮೂಕ ಸಂವೇದನೆಗೆ ಮನಮಿಡಿದಿದ್ದಾರೆ.
ಯಾವ ರೀತಿ ನೀರಿನ ವ್ಯವಸ್ಥೆ ಮಾಡಿದ್ದಾರೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಗಿಡಮರಗಳಲ್ಲಿ 150 ಕ್ಕೂ ಹೆಚ್ಚು ಮಡಿಕೆಯ ಮುಚ್ಚಳಗಳನ್ನು ಕಟ್ಟಿದ್ದಾರೆ. ಒಂದು ಮರದಲ್ಲಿ ಎರಡರಿಂದ ನಾಲ್ಕು ಮಡಿಕೆ ಮುಚ್ಚಳ ಕಟ್ಟಿ ಬೆಳಗ್ಗೆ ಮತ್ತು ಸಂಜೆ ನವಣೆ, ಕಡಲೆ ಸೇರಿದಂತೆ ನಾನಾ ಆಹಾರ ಮತ್ತು ನೀರು ಹಾಕಲಾಗುತ್ತಿದೆ. ತಮ್ಮ ಕರ್ತವ್ಯ ಇಲ್ಲದ ದಿನದಲ್ಲೂ ಸಹ ಕಚೇರಿಗೆ ಆಗಮಿಸಿ ಪಕ್ಷಿಗಳ ದಾಹ ನೀಗಿಸುತ್ತಿರುವುದನ್ನು ಕಂಡ ಎಸ್ಪಿ ಅರುಣಾಂಗ್ಷು ಗಿರಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾವ್ಯಾವ ಹಕ್ಕಿ ಭೇಟಿ
ನಿತ್ಯ ಆಹಾರ ಅರಸಿಕೊಂಡು ಯುರೋಪಿನ ರೆಡ್ ಬಸ್ಟ್ರೆಡ್ ಫ್ಲೆ ಕ್ಯಾಚರ್, ಗ್ರೀನ್ ವಾಲ್ಬರ್, ಗಿಳಿ, ಹಮ್ಮಿಂಗಿ ಬರ್ಡ್ ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಪಕ್ಷಿಗಳ ತಳಿ ಇಲ್ಲಿ ಭೇಟಿ ನೀಡಿ ನೀರು ಮತ್ತು ಆಹಾರ(Food) ಸೇವಿಸಿ, ಮತ್ತೊಂದು ಕಡೆ ವಲಸೆ ಹೋಗುತ್ತಿವೆ.
ಪಕ್ಷಿ ಸಂಕುಲ ಉಳಿವಿಗೆ ಜಾಗೃತಿ ಅವಶ್ಯ
ದೇಶ ಮತ್ತು ರಾಜ್ಯದಲ್ಲಿ ಬೆಳೆಯುತ್ತಿರುವ ನಗರೀಕರಣ, ಕಾಡು ನಾಶದಿಂದ ಪಕ್ಷಿ ಸಂಕುಲಕ್ಕೆ ಆಪತ್ತು ಬಂದೊದಗಿದ್ದು, ಇವುಗಳ ರಕ್ಷಣೆಗೆ ಹಾಗೂ ಉಳವಿಗಾಗಿ ಪ್ರತಿಯೊಬ್ಬರು ಸೇವೆ ಸಲ್ಲಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಕೂಡ ಮುಖ್ಯವಾಗಿದೆ. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಚಿತ್ರಗಳ ಮೂಲಕ ಪಕ್ಷಿಗಳನ್ನು ಗುರುತಿಸುವಂತ ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ.
ಆಂಜನೇಯನ ಜನ್ಮ ಸ್ಥಳದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡ್ಬೇಡಿ, ಕಂಗ್ರೆಸ್ ಮುಖಂಡ ಮನವಿ
ವಿ ನಾರಾಯಣ ಅವರ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ
ಪೊಲೀಸ್ ಇಲಾಖೆಯವರು(Department of Police) ಸದಾ ಒತ್ತಡದಲ್ಲಿ ಇರುತ್ತಾರೆ. ಇತಂಹ ಇಲಾಖೆಯಲ್ಲಿದ್ದರೂ ಸಾಮಾಜಿಕವಾದ ಪಕ್ಷಿ ಸಂಕುಲ ಉಳಿಸುವ ಕಾರ್ಯದಲ್ಲಿ ತೊಡಗಿರುವ ತಮ್ಮ ಅಧಿಕಾರಿ ನಾರಾಯಣ ಅವರ ಕಾರ್ಯಕ್ಕೆ ಎಸ್ಪಿ ಅರುಣಾಂಗ್ಷು ಗಿರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪಕ್ಷಿ ಸಂಕುಲ ಉಳಿವಿಗೆ ಪ್ರತಿಯೊಬ್ಬರು ಕೂಡ ಸ್ವಯಂ ಪ್ರೇರಿತರಾಗಿ ಜಾಗೃತರಾಗಬೇಕಿದೆ ಎಂದು ಹೇಳಿದ್ದಾರೆ.
ಪೊಲೀಸ್ ಅಧಿಕಾರಿ ವಿ ನಾರಾಯಣ ಹೇಳುವುದು ಏನು
ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ಆಹಾರ ಮತ್ತು ನೀರು(Water) ಸಿಗುವುದು ಕಷ್ಟಸಾಧ್ಯ. ಹಾಗಾಗಿ ಪಕ್ಷಿಗಳಿಗೆ ಆಹಾರ ಮತ್ತು ನೀರಿನ ದಾಹ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಇದಕ್ಕೆ ಇಲಾಖೆಯ ಮೇಲಧಿಕಾರಿಗಳು ಸಹಕರಿಸಿದ್ದಾರೆ. ಪಕ್ಷಿಗಳಿಗೆ ಸಾಧ್ಯವಾದಷ್ಟು ಪ್ರತಿಯೊಬ್ಬರು ನೀರುಣಿಸುವ ಕಾರ್ಯ ಮಾಡಬೇಕು. ಅಂದಾಗ ಮಾತ್ರ ಪಕ್ಷಿ ಸಂಕುಲ ಉಳಿಯಲು ಸಾಧ್ಯ ಎಂದು ವಿ ನಾರಾಯಣ ಹೇಳುತ್ತಾರೆ. ಒಟ್ಟಿನಲ್ಲಿ ಪಕ್ಷಿಗಳ ಸಂಕಷ್ಟ ಕಂಡು ನೀರಿನ ವ್ಯವಸ್ಥೆ ಮಾಡಿರುವ ಪೊಲೀಸ್ ಅಧಿಕಾರಿ ವಿ ನಾರಾಯಣ ಅವರ ಕಾರ್ಯಕ್ಕೆ ಎಲ್ಲರೂ ಅಭಿನಂದಿಸಿದ್ದು, ಇವರ ಕಾರ್ಯ ನಿಜಕ್ಕೂ ಮಾದರಿಯೇ ಸರಿ.