ಕೊರೋನಾದಿಂದಾಗಿ ಕಪ್ಪೆಗಳ ಜೀವ ಉಳೀತು!

By Kannadaprabha NewsFirst Published Aug 30, 2021, 2:22 PM IST
Highlights

*  ಕಪ್ಪೆ ಸಾಗಾಟ ಜಾಲದ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸರು
*  ಗೋವಾದಲ್ಲಿ ಕಪ್ಪೆಗಳ ಮಾಂಸಕ್ಕೆ ಭಾರೀ ಡಿಮ್ಯಾಂಡ್‌ 
*  ಒಂದು ದೊಡ್ಡ ಗಾತ್ರದ ಕಪ್ಪೆ 180 ವರೆಗೆ ಮಾರಾಟ
 

ಅಂಕೋಲಾ(ಆ.30): ಕೊರೋನಾ ಅದೆಷ್ಟೋ ಮಂದಿಯ ಬದುಕಿಗೆ ಸಂಕಷ್ಟ ತಂದಿಟ್ಟರೂ ಉತ್ತರ ಕನ್ನಡ ಭಾಗದ ಕಪ್ಪೆಗಳ ಪಾಲಿಗೆ ವರವಾಗಿ ಪರಿಣಮಿಸಿದೆ. ಕೊರೋನಾದಿಂದಾಗಿ ಗಡಿಯಲ್ಲಿ ಬಿಗಿ ತಪಾಸಣೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡದಿಂದ ಕಾರವಾರಕ್ಕೆ ಅಕ್ರಮವಾಗಿ ಸಾಗಣೆಯಾಗುತ್ತಿದ್ದ ಕಪ್ಪೆಗಳ ಜೀವ ಉಳಿದಿದೆ.

ಗೋವಾದಲ್ಲಿ ಕಪ್ಪೆಗಳ ಮಾಂಸಕ್ಕೆ ಭಾರೀ ಡಿಮ್ಯಾಂಡ್‌ ಇದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಂಡುಬರುವ ಕಪ್ಪೆಗಳಿಗೆ ಅಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅಲ್ಲಿ ಒಂದು ದೊಡ್ಡ ಗಾತ್ರದ 180 ವರೆಗೆ ಮಾರಾಟವಾಗುತ್ತದೆ. ಹೀಗಾಗಿ ಈ ಭಾಗದಲ್ಲಿ ಕಪ್ಪೆ ಹಿಡಿದು ಗೋವಾದ ಹೋಟೆಲ್‌ಗಳಿಗೆ ಅಕ್ರಮವಾಗಿ ಮಾರಾಟ ಮಾಡುವ ಜಾಲವೇ ಇದೆ. ಈ ರೀತಿ ಮಾಂಸಕ್ಕಾಗಿ ಕಪ್ಪೆಗಳನ್ನು ಸಾಗಿಸುತ್ತಿರುವಾಗ ಅನೇಕ ಬಾರಿ ಸಿಕ್ಕಿ ಬಿದ್ದಿದ್ದೂ ಇದೆ. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಗೋವಾ ಗಡಿಯ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಂಡಿರುವ ಹಿನ್ನೆಲೆಯಲ್ಲಿ ಅಕ್ರಮವಾಗಿ ಕಪ್ಪೆ ಸಾಗಿಸಲು ಕಷ್ಟವಾಗುತ್ತಿದೆ. ಹೀಗಾಗಿ ಬಡ ಕಪ್ಪೆಗಳ ಜೀವ ಉಳಿದಿದೆ.

ಮುಂಗಾರು ಆರಂಭ: ಸಂಗಾತಿಯನ್ನು ಆಕರ್ಷಿಸಲು ಹಳದಿ ಬಣ್ಣ ಪಡೆದ ಗಂಡು ಕಪ್ಪೆಗಳು

ಕಪ್ಪೆ ಸಾಗಾಟ ಜಾಲದ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಕಪ್ಪೆಗಳ ರಕ್ಷಣೆಗೆ ನಾವು ಸನ್ನದ್ಧರಾಗಿದ್ದೇವೆ. ಕಪ್ಪೆ ಹಿಡಿಯುತ್ತಿರುವದು ಕಂಡುಬಂದಲ್ಲಿ ಕೂಡಲೇ ಪೊಲೀಸ್‌ ಗಮನಕ್ಕೆ ತರಬೇಕು ಎಂದು ಅಂಕೋಲಾ ಠಾಣೆಯ ಸಿಪಿಐ  ಸಂತೋಷ ಶೆಟ್ಟಿ ತಿಳಿಸಿದ್ದಾರೆ.  

ಈ ವರ್ಷ ಕಪ್ಪೆಗಳ ಸದ್ದು ಹೆಚ್ಚಾಗಿ ಕೇಳಿ ಬರುತ್ತಿದೆ. ಮೊದಲೆಲ್ಲ ಸಿಕ್ಕ ಸಿಕ್ಕ ಕಪ್ಪೆಗಳನ್ನು ಹಿಡಿದು ಕೊಂಡೊಯ್ಯಲಾಗುತ್ತಿತ್ತು. ಕೊರೋನಾ ಮುಗಿದ ಮೇಲೂ ಗಡಿ ಭಾಗದಲ್ಲಿ ಕಪ್ಪೆ ಸಾಗಾಟದ ಮೇಲೆ ಕಣ್ಣಿಡುವ ಮೂಲಕ ಕಪ್ಪೆಗಳ ರಕ್ಷಣೆಗೆ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎಂದು ನಾಗೇಂದ್ರ ನಾಯ್ಕ ಹೇಳಿದ್ದಾರೆ. 
 

click me!