ಆನಂದ್ ಎಂ. ಸೌದಿ
ಯಾದಗಿರಿ(ಏ.15): ಪೊಲೀಸರು ಬರೀ ಲಾಠಿ ಬೀಸ್ತಾರೆ, ಬಾಸುಂಡೆ ಬರೋ ಹಾಗೆ ಹೊಡೀತಾರೆ. ಅವರಿಗೆ ಕನಿಕರಾನೇ ಇಲ್ಲಾ ಅಂತಂದುಕೊಂಡು ಶಾಪ ಹಾಕುವ ಬಹುತೇಕರಿಗೆ ಯಾದಗಿರಿ ನಗರ ಠಾಣೆಯ ಪೇದೆ (105) ಮಡಿವಾಳಪ್ಪನವರ ಮಾನವೀಯತೆ ಇಂತಹ ಮಾತುಗಳಿಗೆ ವ್ಯತಿರಕ್ತ.
ಹಸಿವಿನಿಂದ ಬಳಲುತ್ತಿದ್ದವರ ಸಂಕಷ್ಟ ನೋಡಲಾಗದ ಮಡಿವಾಳಪ್ಪ, ಕಳೆದ 20 ದಿನಗಳಿಂದ ಅಂತಹವರನ್ನು ಹುಡುಕಿಕೊಂಡು ಹೋಗಿ ಊಟ ನೀಡಿ ಬರುತ್ತಾರೆ. ಬಸ್ ನಿಲ್ದಾಣ, ರೈಲು ನಿಲ್ದಾಣ, ಆಸ್ಪತ್ರೆ, ಎಪಿಎಂಸಿ, ಮುಂತಾದೆಡೆ ತುತ್ತು ಊಟಕ್ಕಾಗಿ ಪರದಾಡುತ್ತಿರುವ ನಿರ್ಗತಿಕರು, ಬಡವರು, ಭಿಕ್ಷುಕರು ಹಾಗೂ ಮಾನಸಿದ ಅಸ್ವಸ್ಥರ ಪಾಲಿಗೆ ಕಾನ್ಸಟೇಬಲ್ ಮಡಿವಾಳಪ್ಪ ಅನ್ನದಾತ.
ಸ್ವತಃ ಗರ್ಭಿಣಿಯಾಗಿ ನೂರಾರು ಹೆರಿಗೆ ಮಾಡಿಸಿದ ವೈದ್ಯೆ
ಲಾಕ್ ಡೌನ್ ಈ ಕ್ಲಿಷ್ಟಕರ ಸಂದರ್ಭದಲ್ಲಿ ಹಸಿವು ಯಾರನ್ನೂ ಬಲಿ ಪಡೆಯಬಾರದು ಅನ್ನೋ ಕಾರಣಕ್ಕೆ, ದಿನಾಲು ಇದಕ್ಕೆಂದೇ ಒಂದಿಷ್ಟು ಸಮಯ ಮೀಸಲಿಟ್ಟಿರುವ ಮಡಿವಾಳಪ್ಪ ಹಾಗೂ ಪತ್ನಿ ದೀಪಾಲಿ 10-15 ಊಟದ ಹಾಗೂ ಬಿಸ್ಕತ್ ಪ್ಯಾಕೇಟ್‌ಗಳನ್ನು ನೀಡಿ ಬರುತ್ತಾರೆ. ಆಸ್ಪ ಇದಕ್ಕೆಂದೇ ಕಚೇರಿಯಲ್ಲಿ ಮೇಲಧಿಕಾರಿಗಳಿಂದ ವಿಶೇಷ ಸಮಯದ ಅನುಮತಿಯನ್ನೂ ಪಡೆದಿದ್ದಾರೆ.
ಹಸಿದವರಿಗೆ ಊಟ ನೀಡುವಲ್ಲಿ ತೊಂದರೆಯಾದರೂ ಸೈ, ಸಹಿಸಿಕೊಳ್ಳೋಣ ಎಂದು ನಿರ್ಧರಿಸಿದಂತಿರುವ ಮಡಿವಾಳಪ್ಪರ ಪತ್ನಿ ದೀಪಾಲಿ, ಆರು ತಿಂಗಳ ಗರ್ಭಿಣಿಯಾಗಿದ್ದರೂ ಸಹ ದಿನಾಲು 10-15 ಜನರ ಅಡುಗೆ ಮಾಡಿ, ಪ್ಯಾಕೇಟ್‌ಗಳಲ್ಲಿ ಹಾಕಿ ಸಿದ್ಧಪಡಿಸಿಟ್ಟಿರುತ್ತಾರೆ. ಡ್ಯೂಟಿ ಮುಗಿಸಿ ಬಂದ ಮಡಿವಾಳಪ್ಪ ಅವುಗಳನ್ನು ಕೊಟ್ಟ ಬಂದ ನಂತರವೇ ಎಲ್ಲರೂ ಊಟ ಮಾಡೋದು. ಒಂದು ವೇಳೆ, ದೂರದ ಕರ್ತವ್ಯ ಇದ್ದರೆ, ಹಸಿದವರಿಗೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ಮೊದಲೇ ಅವುಗಳನ್ನು ಕೊಟ್ಟು ಹೋಗುತ್ತಾರೆ. ಪ್ರಚಾರದ ಹಂಗು, ಊಟ ನೀಡುವ ಫೋಟೋ ಮುಂತಾದ ಯಾವುದನ್ನೂ ಬಯಸದ ಮಡಿವಾಳಪ್ಪನಂಥವರ ಸಂಖ್ಯೆ ದ್ವಿಗುಣವಾಗಬೇಕಾಗಿದೆ.