ಇಂತಹ ಕೆಲ್ಸ ಮಾಡಿದಕ್ಕೆ ಜೈಲು ಸೇರಿದ ಪೇದೆ

By Kannadaprabha NewsFirst Published Mar 3, 2020, 1:17 PM IST
Highlights

ಬೇಲಿಯೇ ಎದ್ದು ಹೊಲ ಮೇದಂತೆ ಇಂತಹ ಕೆಲಸ ಮಾಡಿದ್ದಕ್ಕೆ ಪೊಲೀಸ್ ಪೇದೆಯೋರ್ವ ಜೈಲು ಸೇರಿದ ಘಟನೆ ನಡೆದಿದೆ. ಹಾಗಾದ್ರೆ ಅವನು ಮಾಡಿದ್ದೇನು..? 

ಚಿಕ್ಕಮಗಳೂರು [ಮಾ.03]: ಪಾಸ್‌ಪೋರ್ಟ್‌ ಪರಿಶೀಲನೆಗೆ ಲಂಚ ಪಡೆದ ಪೇದೆಗೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000 ರು. ದಂಡ ವಿಧಿಸಿದೆ.

ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್‌ ಠಾಣೆಯ ಪೇದೆ ಸಿ.ಎಂ. ಗಿರೀಶ್‌ಕುಮಾರ್‌ ಅವರಿಗೆ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಉಮೇಶ್‌ ಎಂ.ಅಡಿಗ ತೀರ್ಪು ನೀಡಿದ್ದಾರೆ.

ಮೂಡಿಗೆರೆ ತಾಲೂಕು ಹರಮಕ್ಕಿ ಗ್ರಾಮದ ಎಚ್‌.ಎಂ. ಅಜಿತ್‌ ಅವರು ಪಾಸ್‌ ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ಪರಿಶೀಲನೆಗೆ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಿಂದ ಗೋಣಿಬೀಡು ಪೊಲೀಸ್‌ ಠಾಣೆಗೆ ಕಳಿಸಲಾಗಿತ್ತು. ವರದಿಯನ್ನು ನೀಡಲು ಗೋಣಿಬೀಡು ಪೊಲೀಸ್‌ ಠಾಣೆ ಪೊಲೀಸ್‌ ಪೇದೆ ಸಿ.ಎಂ. ಗಿರೀಶ್‌ಕುಮಾರ್‌ 3000 ರು. ಲಂಚ ಕೇಳಿದ್ದರು. ಹಣ ಕೊಡಲು ಅರ್ಜಿದಾರ ಎಚ್‌.ಎಂ. ಅಜಿತ್‌ ನಿರಾಕರಿಸಿದಾಗ ಗಿರೀಶ್‌ಕುಮಾರ್‌ ವರದಿ ನೀಡಲು ಸತಾಯಿಸುತ್ತಿದ್ದರು. ಈ ಸಂಬಂಧ ಅಜಿತ್‌ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ನೀರು ಒಯ್ಯಲು ಬಂದ ಯುವತಿ ಗುಪ್ತಾಂಗಕ್ಕೆ ಕೈ ಹಾಕಿ ಕಿರುಕುಳ...

2013 ಮೇ 28ರಂದು ಗೋಣಿಬೀಡಿನ ರಾಮೇಶ್ವರ ಬೇಕರಿ ಬಳಿ ಪೇದೆ ಸಿ.ಎಂ.ಗಿರೀಶ್‌ಕುಮಾರ್‌ 2500 ರು. ಲಂಚ ಪಡೆಯುತ್ತಿದ್ದಾಗ, ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಧೀಶ ಉಮೇಶ್‌ ಎಂ. ಅಡಿಗ ಅವರು ಸಿ.ಎಂ.ಗಿರೀಶ್‌ಕುಮಾರ್‌ ಅಪರಾಧಿ ಎಂದು ತೀರ್ಮಾನಿಸಿ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000 ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಲೋಕಾಯುಕ್ತ ವಿಶೇಷ ಅಭಿಯೋಜಕರಾದ ವಿ.ಟಿ.ಥಾಮಸ್‌ ವಾದ ಮಂಡಿಸಿದರು.

click me!