* ಧಾರವಾಡಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನದಿಂದ ಉಂಟಾಗಿದ್ದ ಆತಂಕ ದೂರ
* ರಾಯಚೂರಿಗೆ ಏಮ್ಸ್ ಮಂಜೂರಿಗಾಗಿ ಬೇಕಾಗಿದೆ ತೀವ್ರ ಹೋರಾಟ
* ಈಗಾಗಲೇ ಹುಬ್ಬಳ್ಳಿ-ಧಾರವಾಡದಲ್ಲಿರುವ ಅನೇಕ ಪ್ರತಿಷ್ಠಿತ ಸಂಸ್ಥೆಗಳು
ರಾಮಕೃಷ್ಣ ದಾಸರಿ
ರಾಯಚೂರು(ಸೆ.01): ಕಳೆದ ಐದು ವರ್ಷಗಳ ಹಿಂದೆ ಜಿಲ್ಲೆಗೆ ಮಂಜೂರಾಗಬೇಕಾಗಿದ್ದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಯನ್ನು ಧಾರವಾಡಕ್ಕೆ ತೆಗೆದುಕೊಂಡು ಹೋಗಲಾಗಿತ್ತು, ಇದೀಗ ಅದೇ ಮಾದರಿಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯನ್ನು ಸಹ ಹುಬ್ಬಳ್ಳಿ-ಧಾರವಾಡಕ್ಕೆ ಪಡೆಯುವ ಪ್ರಯತ್ನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ್ದಾರೆ. ಈ ವೇಳೆಯಲ್ಲಿಯೇ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯಿಂದ ಬಂದಿರುವ ಸಂದೇಶವು ಜಿಲ್ಲೆ ಸಾರ್ವಜನಿಕರಲ್ಲಿ ಮನೆ ಮಾಡಿದ್ದ ಆತಂಕವನ್ನು ದೂರ ಮಾಡಿದೆ.
undefined
ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕು ಎಂದು ತಿಂಗಳ ಹಿಂದೆ ಜಿಲ್ಲೆ ಹಿರಿಯ ಮುಖಂಡ ಪಾರಸಮಾಲ ಸುಖಾಣಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿರುವ ಯು ಕರ್ನಾಟಕ ರಾಜ್ಯಕ್ಕೆ ಏಮ್ಸ್ ಮಂಜೂರು ಮಾಡಿಲ್ಲವೆಂದು ಸ್ಪಷ್ಟಪಡಿಸಿತ್ತು. ಇದು ಏಮ್ಸ್ ಮಂಜೂರಾತಿಯ ಪ್ರಯತ್ನದ ಬಲವನ್ನು ಹೆಚ್ಚಿಸುವಂತೆ ಮಾಡಿದೆ.
ತೀವ್ರ ಹೋರಾಟದ ಅಗತ್ಯ :
ವಿಚಾರದಲ್ಲಿ ಸುಮಾರು ಮೂರು ತಿಂಗಳ ಕಾಲ ನಿರಂತರ ಹೋರಾಟ ನಡೆಸಿದರೂ ಸಹ ಅದರ ಫಲವನ್ನು ಧಾರವಾಡದವರು ಅನುಭವಿಸುತ್ತಿದ್ದಾರೆ. ಇದೀಗ ಅದೇ ರೀತಿಯಲ್ಲಿ ಏಮ್ಸ್ ನಿಧಾನವಾಗಿ ಕೈತಪ್ಪುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಹೋದಾಗ ಏಮ್ಸ್ ಸಂಸ್ಥೆಯನ್ನು ಹುಬ್ಬಳ್ಳಿ-ಧಾರವಾಡಕ್ಕೆ ನೀಡಬೇಕು. ಏಮ್ಸ್ ಮಾದರಿಯ ಮತ್ತೊಂದು ಸಂಸ್ಥೆಯನ್ನು ರಾಯಚೂರು ಜಿಲ್ಲೆಗೆ ಮಂಜೂರು ಮಾಡಬೇಕು ಎಂದು ಮನವಿ ಮಾಡಿ ಬಂದಿದ್ದರು. ಇದರಿಂದಾಗಿ ಜಿಲ್ಲೆ ಜನರು ಮತ್ತೆ ತೀವ್ರ ನಿರಾಸೆಗೊಂಡಿದ್ದರು. ಇದರಿಂದಾಗಿ ಏಮ್ಸ್ ಹೋರಾಟ ಸಮಿತಿಯು ಮುಂದೆ ಏನು ಮಾಡಬೇಕು ಎನ್ನುವ ಗೊಂದಲದಲ್ಲಿತ್ತು. ಅದರಂತೆ ಸಭೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ್ದ ಸಚಿವರು ಸಹ ಕೇಂದ್ರ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಸೇರಿಕೊಂಡು ಸಿಎಂ ಭೇಟಿಯಾಗಿ ಅವರ ಮನಪರಿವರ್ತಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ರೂಪಿಸಬೇಕಾಗಿದೆ. ಐಐಟಿಯಲ್ಲಿ ಆದಂತಹ ಅನ್ಯಾಯವನ್ನು ಏಮ್ಸ್ ಪಡೆಯುವುದರ ಮೂಲಕ ಸಾಧಿಸಬೇಕಾಗಿದೆ. ಅದಕ್ಕಾಗಿ ಜಿಲ್ಲೆ ಎಲ್ಲ ಜನಪ್ರತಿನಿಧಿಗಳು, ಏಮ್ಸ್ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹೇರಬೇಕಾಗಿದೆ.
ಮೀಸಲಾತಿಯಲ್ಲಿ IIT ಸೇರಿ ಅರ್ಧದಲ್ಲೇ ಕಾಲೇಜು ಬಿಡ್ತಿದ್ದಾರೆ ಶೇ.60 ವಿದ್ಯಾರ್ಥಿಗಳು
ಏಮ್ಸ್ ಪಡೆಯಲು ನಾವೇ ಅರ್ಹರು
ಕೇಂದ್ರ ಸರ್ಕಾರದ ನೀತಿ ಆಯೋಗವು ರೂಪಿಸಿರುವ ಮಹತ್ವಾಕಾಂಕ್ಷಿ ಯೋಜನೆಯಡಿ ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯದಿಂದ ಎರಡು ಜಿಲ್ಲೆಗಳು ಆಯ್ಕೆಯಾಗಿದ್ದು, ಅವು ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರು-ಯಾದಗಿರಿ ಜಿಲ್ಲೆಗಳಾಗಿವೆ. ಈಗಾಗಲೇ ಹುಬ್ಬಳ್ಳಿ-ಧಾರವಾಡದಲ್ಲಿ ಅನೇಕ ಪ್ರತಿಷ್ಠಿತ ಸಂಸ್ಥೆಗಳಿವೆ. ಅದ್ದರಿಂದ ಏಮ್ಸ್ ಪಡೆಯಲು ನಾವೇ ಅರ್ಹರಾಗಿದ್ದೇವೆ ಎನ್ನುತ್ತಾರೆ ಇಲ್ಲಿಯ ಮುಖಂಡರು.
ರಾಜ್ಯದ ಯಾವುದೇ ಜಿಲ್ಲೆಗೆ ಏಮ್ಸ್ ಮಂಜೂರು ಮಾಡಿಲ್ಲವೆಂದು ಪ್ರಧಾನ ಮಂತ್ರಿ ಕಚೇರಿಯಿಂದ ಬಂದಿರುವ ಮೇಲ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಹಿಂದೆಯೇ ರಾಯಚೂರಿಗೆ ಏಮ್ಸ್ ನೀಡಲೇ ಬೇಕು ಎಂದು ಪಿಎಂಗೆ ಮತ್ತೊಮ್ಮೆ ಮನವಿ ಮಾಡಲಾಗಿದೆ ಎಂದು ರಾಯಚೂರಿನ ಹಿರಿಯ ಮುಖಂಡ ಪಾರಸಮಾಲ್ ಸುಖಾಣಿ ತಿಳಿಸಿದ್ದಾರೆ.
ಪಿಎಂ ಕಚೇರಿಯಿಂದ ಬಂದಿರುವ ಸ್ಪಷ್ಟೀಕರಣ ವೈಯಕ್ತಿಕ ಮನವಿಗೆ ಸ್ಪಂದಿಸಿದ ಉತ್ತರವಾಗಿದೆ. ಮುಂದಿನ ದಿನಗಳಲ್ಲಿ ಸಭೆಯನ್ನು ಕರೆದು ಚರ್ಚಿಸಲಾಗುವುದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಯಾವ ರೀತಿ ಒತ್ತಡ ಹೇರಬೇಕು, ಏನುನು ಹೋರಾಟಗಳನ್ನು ರೂಪಿಸಬೇಕು ಎನ್ನುವುದರ ಕುರಿತು ಚರ್ಚಿಸಲಾಗುವುದು ಎಂದು ರಾಯಚೂರಿನ ಏಮ್ಸ್ ಮಂಜೂರಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರು ಬಸವರಾಜ ಕಳಸ ಹೇಳಿದ್ದಾರೆ.