ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ, ಜೋಶಿ: ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

By Girish Goudar  |  First Published Jan 1, 2023, 9:45 AM IST

ಶ್ರೀಗಳ ಜೊತೆ ಅರ್ಧ ಗಂಟೆಗಳ ಕಾಲ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ಹಾಗೂ ಸಿಎಂ ಬೊಮ್ಮಾಯಿ ಶೀಘ್ರ ಗುಣಮುಖರಾಗುವಂತೆ ಆಶಯ ವ್ಯಕ್ತಪಡಿಸಿದರು. 
 


ವಿಜಯಪುರ(ಜ.01):  ಸರಳತೆ, ಉತ್ತಮ ನಡವಳಿಕೆ ಮೂಲಕವೇ ಭಕ್ತರ ಮನದಲ್ಲಿ ನೆಲೆಸಿರುವ ಸಿದ್ದೇಶ್ವರ ಶ್ರೀಗಳನ್ನ ಜ್ಞಾನ ಯೋಗಾಶ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಶ್ರೀಗಳ ಜೊತೆ ಅರ್ಧ ಗಂಟೆಗಳ ಕಾಲ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ಹಾಗೂ ಸಿಎಂ ಬೊಮ್ಮಾಯಿ ಶೀಘ್ರ ಗುಣಮುಖರಾಗುವಂತೆ ಆಶಯ ವ್ಯಕ್ತಪಡಿಸಿದರು. 

ಇದೇ ವೇಳೆ ಪ್ರಲ್ಹಾದ್ ಜೋಶಿ ಅವರಿಗೆ ಕರೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ ಅವರು ಶ್ರೀಗಳ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಕರೆ ಮಾಡಿದ ವೇಳೆ ಪ್ರಧಾನಿ ಮೋದಿ ಅವರು, ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಶ್ರೀಗಳ ಪುಸ್ತಕ ಬಿಡುಗಡೆಗೊಳಿದ ಪ್ರಸಂಗವನ್ನ ನೆನಪಿಸಿಕೊಂಡು ಆರೋಗ್ಯವಾಗಿದ್ದ ಶ್ರೀಗಳ ಅನಾರೋಗ್ಯಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಹೆಚ್ಚಿನ ಚಿಕಿತ್ಸೆಗೆ ಕೇಂದ್ರ ಹಾಗೂ ರಾಜ್ಯದಿಂದ ಎಲ್ಲ ರೀತಿಯ ಸಹಕಾರ ನೀಡುವಂತೆ ಪ್ರಧಾನಿ ಮೋದಿ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಸೂಚನೆ ನೀಡಿದರು. 

Tap to resize

Latest Videos

Vijayapura: ಅನಾರೋಗ್ಯ ವದಂತಿ ನಂತರ ಸಿದ್ದೇಶ್ವರ ಶ್ರೀಗಳಿಂದ ಭಕ್ತರ ದರ್ಶನ: ಅರ್ಧ ಗಂಟೆ ಪ್ರವಚನ

ಹೆಚ್ಚಿನ ಚಿಕಿತ್ಸೆ ಒದಗಿಸುವ ಬಗ್ಗೆ ಪ್ರಧಾನ ಮಂತ್ರಿಗಳು ಅಭಿಲಾಶೆ ವ್ಯಕ್ತಪಡಿಸಿರುವ ಬಗ್ಗೆ ಶ್ರೀಗಳಿಗೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೇಳಿದಾಗ ಸಿದ್ದೇಶ್ವರ ಶ್ರೀಗಳು ಕೈ ಮುಗಿದರು. ಇದನ್ನು ನೋಡಿದರೆ ಸಿದ್ದೇಶ್ವರ ಶ್ರೀಗಳು ಯಾವುದೇ ಚಿಕಿತ್ಸೆ ಪಡೆಯದಿರಲು ನಿರ್ಧರಿಸಿದಂತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ. 

ಸಿದ್ದೇಶ್ವರ ಶ್ರೀಗಳ ದರ್ಶನದ ಬಳಿಕ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ಆಕ್ಸಿಜನ್ ಕಡಿಮೆ ಆಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಳವಳಗೊಂಡು, ನಾನು ಸಿಎಂ ಬೊಮ್ಮಾಯಿ ಅವರು ಶ್ರೀಗಳನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆವು. ಶ್ರೀಗಳು ಚೆನ್ನಾಗಿಯೇ ಇದ್ದರು. ಅವರಿಗೆ ಏನಾಗಿದೆ ಎಂದು ಪ್ರಧಾನಿ ಮೋದಿ ಅವರು ಆತಂಕಕ್ಕೆ ಒಳಗಾಗಿದ್ದರು. ಸಿದ್ದೇಶ್ವರ ಶ್ರೀಗಳಂಥ ಆದರ್ಶ ಸ್ವಾಮೀಜಿ ಸಿಗುವುದು ಬಹಳ ಕಷ್ಟ. ಶ್ರೀಗಳು ಬೇಗ ಗುಣವಾಗಲಿ ಎಂದು ಪಾರ್ಥಿಸುತ್ತೇವೆ ಎಂದು‌ ಹೇಳಿದರು. 

ಸಮಾಜ, ಕೇಂದ್ರ ಹಾಗೂ ರಾಜ್ಯ ಸರಕಾರ ಎಲ್ಲ ರೀತಿಯ ಸಹಕಾರವನ್ನು ಕೊಡಲಿವೆ. ಚಿಕಿತ್ಸೆಯ ಬಗ್ಗೆ ಶ್ರೀಗಳಿಗೆ ವಿನಂತಿ ಮಾಡಿದ್ದೇವೆ. ಅವರು ಕೈ ಮುಗಿಯುತ್ತಿದ್ದಾರೆ. ಶ್ರೀಗಳ ಸನ್ನೆಯನ್ನು ನೋಡಿದರೆ, ಅವರು ಟ್ರೀಟಮೆಂಟ್ ತೆಗೆದುಕೊಳ್ಳಬಾರದು ಎಂದು ನಿರ್ಧರಿಸಿದ್ದಾರೆ ಎಂದು ನನಗೆ ಎನಿಸುತ್ತಿದೆ ಎಂದು ಪ್ರಹ್ಲಾದ ಜೋಶಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. 

ವಿಜಯಪುರ: 'ಸಿದ್ದೇಶ್ವರ ಶ್ರೀ ಆರೋಗ್ಯ ಬಗ್ಗೆ ವದಂತಿ ಹರಡಬೇಡಿ, ಕೋವಿಡ್‌ ಹಿನ್ನೆಲೆ ದರ್ಶನ ಇಲ್ಲ'

ಇದೇ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,‌ ಕಳೆದ ಒಂದು ವಾರದಿಂದ ಪ್ರತಿದಿನ ಫೋನ್ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸುತ್ತಿದ್ದೇನೆ. ಮೊನ್ನೆ ನಾನು ಕರೆ ಮಾಡಿದ್ದಾಗ ಒಂದೆರಡು ಮಾತಾಡಿದ್ದರು. ಈಗ ಶ್ರೀಗಳ ಆರೋಗ್ಯ ಆಶ್ಚರ್ಯಕರ ರೀತಿಯಲ್ಲಿ ಸುಧಾರಿಸಿದೆ. ಪ್ರಧಾನಿಗಳು ಜೋಶಿ ಅವರೊಂದಿಗೆ ಮಾತನಾಡಿದ್ದಾರೆ‌. ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಧಾನ ಮಂತ್ರಿಗಳು ಹಾರೈಸಿದ್ದಾರೆ. ಶ್ರೀಗಳ ಬದುಕೇ ಮಾದರಿಯಾಗಿದೆ. ಅವರ ಮಾತು, ನಡೆ, ನುಡಿ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ವಿಜಯಪುರದ ಪುಣ್ಯ ಭೂಮಿಯಲ್ಲಿ ಅವರ ಕರ್ಮ ಭೂಮಿ ಮಾಡಿಕೊಂಡಿದ್ದು ನಮ್ಮ ಪುಣ್ಯ. ನಿಜವಾಗಿಯೂ ಶ್ರೀಗಳು ನಡೆದಾಡುವ ದೇವರು. ಅವರ ಆಚರಣೆ, ವಿಚಾರ ಎಲ್ಲವೂ ಪರಿಶುದ್ಧವಾಗಿದೆ ಎಂದು ಹೇಳಿದರು.

ಶ್ರೀಗಳು ಅಪರೂಪದ ತತ್ವಜ್ಞಾನಿಯಾಗಿದ್ದಾರೆ. ಇವರು ಬದುಕಿನ ಸೂಕ್ಷ್ಮತೆಯನ್ನು ನಿಖರವಾಗಿ, ಸ್ಪಷ್ಟವಾಗಿ ತಿಳಿದುಕೊಂಡಿದ್ದಾರೆ.  ಸಾಮಾನ್ಯ ಮನುಷ್ಯನ ಸಮಸ್ಯೆಗಳಿಗೆ ಸರಳವಾಗಿ ಪರಿಹಾರ ಕೊಟ್ಟವರು.‌ ಅವರ ಮಾತುಗಳನ್ನು ಕೇಳಿ ನಾವೆಲ್ಲ ಬದಲಾಗಿದ್ದೇವೆ. ಹಲವಾರು ಬಾರಿ ಶ್ರೀಗಳು ರೈತರ ಬಗ್ಗೆ, ನೀರಾವರಿ ಬಗ್ಗೆ, ತತ್ವಗಳ ಬಗ್ಗೆ ಗಂಟೆಗಟ್ಟಲೇ ಚರ್ಚೆ ಮಾಡಿದ್ದೇವೆ. ನನ್ನನ್ನು ಅತ್ಯಂತ ಸಮಾಧಾನವಾಗಿ ಪ್ರೀತಿ ವಿಶ್ವಾಸದಿಂದ ಕಂಡಿದ್ದಾರೆ. ಅವರ ಆರೋಗ್ಯ ಕ್ಷೀಣಿಸಿದ್ದು, ಬೇಗ ಗುಣವಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಆಶಯ ವ್ಯಕ್ತಪಡಿಸಿದರು.‌

click me!