
ಬೆಂಗಳೂರು (ಮಾರ್ಚ್ 25, 2023): ರಾಜ್ಯದಲ್ಲಿ ಮಾರ್ಚ್ 25, 2023 ರಂದು ಅಂದರೆ ಇಂದು ಮಿಂಚಿನ ಸಂಚಾರ ನಡೆಸುತ್ತಿರುವ ಪ್ರಧಾನಿ ಮೋದಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ನೂತನ ಮಾರ್ಗವನ್ನು ಉದ್ಘಾಟಿಸಿದ್ದಾರೆ. ವೈಟ್‌ಫೀಲ್ಡ್ - ಕೆ.ಆರ್. ಪುರ ಮಾರ್ಗಕ್ಕೆ ಹಸಿರು ನಿಶಾನೆ ತೋರಿದ್ದಾರೆ. 13.71 ಕಿ.ಮೀ. ಮಾರ್ಗದ ಮೆಟ್ರೋ ನೇರಳೆ ವಿಸ್ತೃತ ಮಾರ್ಗವನ್ನು ಮೋದಿ ಉದ್ಘಾಟನೆ ಮಾಡಿದ್ರು. ಬೆಂಗಳೂರಿಗೆ ಬಂದಿಳಿದ ಮೋದಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸ್ವಾಗತ ಮಾಡಿದ್ರು.
4,500 ಕೋಟಿ ರೂ. ವೆಚ್ಚದಲ್ಲಿ ಈ ನಮ್ಮ ಮೆಟ್ರೋ ಮಾರ್ಗ ನಿರ್ಮಾಣವಾಗಿದ್ದು, ಮೆಟ್ರೋ ರೈಲಿನಲ್ಲಿ ಸಂಚರಿಸುವ ಮೂಲಕ ನಮೋ ವೈಟ್‌ಫೀಲ್ಡ್ - ಕೆ.ಆರ್. ಪುರ ಮಾರ್ಗವನ್ನು ಉದ್ಘಾಟಿಸಿದ್ದು ವಿಶೇಷ. ಅಲ್ಲದೆ, ದುಡ್ಡು ಕೊಟ್ಟು ಟೋಕನ್ ಖರೀದಿಸಿಯೇ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದ್ದು, ಮತ್ತೊಂದು ವಿಶೇಷ. ಮೆಟ್ರೋ ರೈಲಿನಲ್ಲಿ ಕೆಲ ಕಾಲ ನಿಂತುಕೊಂಡು ಹಾಗೂ ಕುಳಿತುಕೊಂಡು ಮೋದಿ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದ್ದು, ಈ ವೇಳೆ ಮಕ್ಕಳು ಸೇರಿ ಹಲವರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರು.
ಇದನ್ನು ಓದಿ: ಚಿಕ್ಕಬಳ್ಳಾಪುರದಲ್ಲಿ ಮೋದಿ ಹವಾ: ಸರ್ ಎಂ. ವಿಶ್ವೇಶ್ವರಯ್ಯ ಸಮಾಧಿಗೆ ಶಿರಬಾಗಿ ನಮಿಸಿದ ನಮೋ
ಪ್ರಧಾನಿ ಮೋದಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿರುವ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಪ್ರಧಾನಮಂತ್ರಿ ಕಚೇರಿ ಸಹ ಹಂಚಿಕೊಂಡಿದೆ. ವೈಟ್‌ಫೀಲ್ಡ್ - ಕೆ.ಆರ್. ಪುರ ಮಾರ್ಗದಲ್ಲಿ 12 ಮೆಟ್ರೋ ನಿಲ್ದಾಣಗಳನ್ನು ಬಿಎಂಆರ್‌ಸಿಎಲ್ ನಿರ್ಮಾಣ ಮಾಡಿದೆ.
ಇನ್ನು, ಬೆಂಗಳೂರಿನಲ್ಲಿ ನೂತನ ಮೆಟ್ರೋ ಮಾರ್ಗವನ್ನು ಮೋದಿ ಉದ್ಘಾಟಿಸಿದ್ದು, ಬಳಿಕ ದಾವಣಗೆರೆಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ, ಅವರು ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ, ಬಿಜೆಪಿ ಕಾರ್ಯಕರ್ತರ ಮಧ್ಯೆ ಮೋದಿ ಹಾದು ಹೋಗಲಿದ್ದು, ರೋಡ್ ಶೋ ಸಹ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ: ರಾಜ್ಯದಲ್ಲಿಂದು ಪ್ರಧಾನಿ ಮೋದಿ ಹವಾ: ಇಂದು ರಾಜ್ಯದ 3 ಜಿಲ್ಲೆಗಳಲ್ಲಿ ಕೇಸರಿ ರಣ ಕಹಳೆ..!
ಈ ಮೂಲಕ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿಯ ಮಿಷನ್ - 150 ಗೆ ಮೋದಿ ರಣಕಹಳೆ ಮೊಳಗಿಸಲಿದ್ದಾರೆ.
ಇದನ್ನೂ ಓದಿ: ಇಂದು ದಾವಣಗೆರೆಯಲ್ಲಿ ಮೋದಿ ಚುನಾವಣಾ ಪಾಂಚಜನ್ಯ: ಬಿಜೆಪಿ ಲ್ಯಾಂಡ್ ಮಾರ್ಕ್ ಆಗಲಿದೆಯಾ ಸಮಾವೇಶ?