
ಮಂಡ್ಯ(ಮಾ.13): ರೋಡ್ ಶೋ ಮುಗಿಸಿ ನಗರದಿಂದ ಹೊರಟ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಾಲೂಕಿನ ಹನಕೆರೆ ಸೇತುವೆ ಬಳಿ ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದರು.
12 ಗಂಟೆಗೆ ಹನಕೆರೆ ಬಳಿ ನಿಗದಿಪಡಿಸಿದ ಸ್ಥಳಕ್ಕೆ ಆಗಮಿಸಿದ ಮೋದಿ ಅವರನ್ನು ಹೆದ್ದಾರಿ ಪ್ರಾಧಿಕಾರದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಒಂದು ಪಥದಲ್ಲಿ ಕಲಾ ವಿದರು, ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಸ್ವಾಗತ ಕೋರಿದರು. ಮೋದಿ ಅವರು ಜಾನಪದ ಕಲಾತಂಡಗಳತ್ತ ಕೈಬೀಸುತ್ತಲೇ ಮುಂದೆ ನಡೆದು ಬಂದರು. ಬಳಿಕ ಹೆದ್ದಾರಿಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.
ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಯಾದ ದಿನವೇ ಅಪಘಾತ, ಮೂವರಿಗೆ ಗಾಯ!
ಹೆದ್ದಾರಿಯಲ್ಲಿ ಕೆಂಪು ಹಾಸಿನ ಹೊದಿಕೆ ಮೇಲೆ 50 ಮೀಟರ್ ಹೆದ್ದಾರಿಯಲ್ಲಿ ನಿಧಾನವಾಗಿ, ಹೆಜ್ಜೆ ಹಾಕುವುದರೊಂದಿಗೆ ದಶಪಥ ಹೆದ್ದಾರಿಯನ್ನೊಮ್ಮೆ ವೀಕ್ಷಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬಿಟ್ಟು 50 ಮೀಟರ್ ದೂರ ಪ್ರಧಾನಿ ಮೋದಿ ಏಕಾಂಗಿಯಾಗಿಯೇ ಹೆಜ್ಜೆ ಹಾಕಿದರು.
ಬಳಿಕ ಗೆಜ್ಜಲಗೆರೆ ಕಾಲೋನಿ ಬಳಿ ನಿರ್ಮಿಸಲಾಗಿದ್ದ ವೇದಿಕೆಗೆ ನೇರವಾಗಿ ಕಾರಿನಲ್ಲಿ ಬಂದಿಳಿದರು. ವೇದಿಕೆಯ ಹಿಂಭಾಗದಲ್ಲಿ ನಿರ್ಮಿಸಲಾಗಿದ್ದ ಹೆದ್ದಾರಿಯ ಫೋಟೋ ಗ್ಯಾಲರಿಯಲ್ಲಿ ಎಲ್ಲಾ ಛಾಯಾಚಿತ್ರಗಳನ್ನು ವೀಕ್ಷಿಸಿದರು.