Kodagu: ನೀರಿನ ಟ್ಯಾಂಕ್ ಕೆಡವಿ ಜಾಗ ಕಬಳಿಕೆಗೆ ಪ್ಲಾನ್, 12-15 ಲಕ್ಷ ಮೌಲ್ಯದ ಆಸ್ತಿ ಲಪಟಾಯಿಸಲು ಪಂಚಾಯಿತಿಯವರೇ ಸಾಥ್?

By Suvarna NewsFirst Published Dec 22, 2022, 11:09 PM IST
Highlights

ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಜಾಗ ಸಾಕಷ್ಟು ಪ್ರಮಾಣದಲ್ಲಿದ್ದು ಅದನ್ನು ಉಳ್ಳವರು ಕದ್ದುಮುಚ್ಚಿ ತಮ್ಮದಾಗಿಸಿಕೊಳ್ಳುತ್ತಿರುವುದು ಹೊಸದೇನು ಅಲ್ಲ. ಆದರೆ ಇಲ್ಲಿ ವ್ಯಕ್ತಿಯೊಬ್ಬರು ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕನ್ನೇ ಕೆಡವಿ ತನ್ನ ಜಾಗವನ್ನಾಗಿ ಮಾಡಿಕೊಳ್ಳಲು ಹೊರಟಿರುವ ಘಟನೆ ಬೆಳಕಿಗೆ ಬಂದಿದೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಡಿ.22): ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಜಾಗ ಸಾಕಷ್ಟು ಪ್ರಮಾಣದಲ್ಲಿದ್ದು ಅದನ್ನು ಉಳ್ಳವರು ಕದ್ದುಮುಚ್ಚಿ ತಮ್ಮದಾಗಿಸಿಕೊಳ್ಳುತ್ತಿರುವುದು ಹೊಸದೇನು ಅಲ್ಲ. ಆದರೆ ಇಲ್ಲಿ ವ್ಯಕ್ತಿಯೊಬ್ಬರು ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕನ್ನೇ ಕೆಡವಿ ತನ್ನ ಜಾಗವನ್ನಾಗಿ ಮಾಡಿಕೊಳ್ಳಲು ಹೊರಟಿರುವ ಘಟನೆ ಬೆಳಕಿಗೆ ಬಂದಿದೆ. ಹತ್ತಾರು ಲಕ್ಷ ಮೌಲ್ಯದ ಜಾಗ ಕಬಳಿಕೆಗೆ ಪಂಚಾಯಿತಿಯ ಕೆಲವರು ತೆರೆಮರೆಯಲ್ಲಿ ಬೆಂಬಲ ನೀಡುತ್ತಿದ್ದಾರೆ ಎನ್ನಲಾಗಿದೆ.  ಕೊಡಗು ಜಿಲ್ಲೆಯಲ್ಲಿ ಸಾವಿರಾರು ಎಕರೆಯಷ್ಟು ಸರ್ಕಾರಿ ಪೈಸಾರಿ ಜಾಗವಿದ್ದು, ಅದರಲ್ಲಿ ಸಾಕಷ್ಟು ಭೂಮಿ ಒಳ್ಳವರಿಂದಲೇ ಒತ್ತುವರಿಯಾಗಿದೆ. ಆದರೆ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮನಕೊಲ್ಲಿ ವಾರ್ಡಿನ ಬಸವೇಶ್ವರ ಬಡಾವಣೆಯಲ್ಲಿ ಪಂಚಾಯಿತಿಯಿಂದ ನಿರ್ಮಿಸಲಾಗಿದ್ದ ಕುಡಿಯುವ ನೀರಿನ ಟ್ಯಾಂಕನ್ನು ದಿನೇಶ್ ಎಂಬುವವರು ಕೆಡವಿ ಆ ಜಾಗವನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿರುವ ಆರೋಪ ಕೇಳಿ ಬಂದಿದೆ. ಕಳೆದ ಶುಕ್ರವಾರ ರಾತ್ರಿ ದಿನೇಶ್ ಎಂಬುವರು ಏಕಾಏಕಿ ಬಂದು ಜೆಸಿಬಿ ಬಳಸಿ ನೀರಿನ ಟ್ಯಾಂಕ್ ಅನ್ನು ಸಂಪೂರ್ಣ ನಾಶ ಪಡಿಸಿದ್ದಾರೆ. ಟ್ಯಾಂಕ್ ನಿರ್ಮಾಣಕ್ಕೆ ಬಳಸಿದ್ದ ಸೈಜು ಕಲ್ಲುಗಳನ್ನು ರಾತ್ರೋರಾತ್ರಿ ಒಂದು ಲೋಡ್ ಸಾಗಿಸಿದ್ದಾರೆ ಎನ್ನಲಾಗಿದೆ. ಶನಿವಾರ ಬೆಳಿಗ್ಗೆಯೂ ಸೈಜು ಕಲ್ಲುಗಳನ್ನು ಸಾಗಿಸುತ್ತಿದ್ದಾಗ ಟ್ಯಾಂಕನ್ನು ಕೆಡವಿರುವ ವಿಷಯ ತಿಳಿದು ವಾರ್ಡಿನ ಸದಸ್ಯರಾದ ಮಣಿ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆ ಸಂದರ್ಭದಲ್ಲೂ ಟ್ಯಾಂಕಿನ ಕಲ್ಲುಗಳನ್ನು ಬೇರೆಡೆ ಸಾಗಿಸುತ್ತಿದ್ದನ್ನು ತಡೆದಿದ್ದಾರೆ. ಬಳಿಕ ಪಂಚಾಯಿತಿ ಪಿಡಿಓ ಸುಮೇಶ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.

1996 ಕ್ಕೂ ಮೊದಲೇ ಇಲ್ಲಿ ಪಂಚಾಯಿತಿಯಿಂದ ಸುಮಾರು ಎರಡು ಸೆಂಟು ಜಾಗದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಗುಮ್ಮನಕೊಲ್ಲಿಯ ವಾರ್ಡಿಗೆ ಕುಡಿಯುವ ನೀರು ಒದಗಿಸಲಾಗುತ್ತಿತ್ತು. ಕುಡಿಯುವ ನೀರಿಗಾಗಿ ಆದ್ದರಿಂದ ಈ ಜಾಗವನ್ನು ವ್ಯಕ್ತಿಯೊಬ್ಬರು ಅಂದು ಪಂಚಾಯಿತಿಗೆ ದಾನವಾಗಿ ನೀಡಿದ್ದರಂತೆ. ಆ ನಂತರ ದಿನೇಶ್ ಎಂಬುವರು ಟ್ಯಾಂಕ್ ಪಕ್ಕದಲ್ಲಿಯೇ ಜಾಗವನ್ನು ಕೊಂಡುಕೊಂಡಿದ್ದರು ಎನ್ನಲಾಗಿದೆ.

ಮೂಡಿಗೆರೆಯ ಎಂ.ಜಿ.ರಸ್ತೆ ಅಗಲೀಕರಣಕ್ಕೆ ಜನರಿಂದ ಒತ್ತಾಯ, ಜಾಗ ಬಿಟ್ಟು ಕೊಡಲು ಕಟ್ಟಡ ಮಾಲೀಕರಿಗೆ ವಾರದ ಗಡುವು

ಕಳೆದ ಎರಡು ವರ್ಷಗಳಿಂದ ಈ ಟ್ಯಾಂಕಿನಿಂದ ನೀರು ಪೂರೈಕೆ ಸ್ಥಗಿತಗೊಂಡಿದ್ದರಿಂದ ಅದರ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಟ್ಯಾಂಕ್ ಕಾಣದಂತೆ ಮುಚ್ಚಿಕೊಂಡಿತ್ತು. ಅದನ್ನೇ ಬಳಸಿಕೊಂಡು ಟ್ಯಾಂಕನ್ನು ಕೆಡವಿ ತನ್ನ ಜಾಗವನ್ನು ಇನ್ನಷ್ಟು ದೊಡ್ಡದು ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಪಂಚಾಯಿತಿ ಸದಸ್ಯ ಮಣಿ ಅವರು ದೂರು ನೀಡುತ್ತಿದ್ದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಅವರು ದಿನೇಶ್ ಅವರಿಗೆ ನೊಟೀಸ್ ಜಾರಿ ಮಾಡಿದ್ದು 24 ಗಂಟೆಯೊಳಗಾಗಿ ಬಂದು ಉತ್ತರ ನೀಡುವಂತೆ ಸೂಚಿಸಿದ್ದಾರೆ. ಬಳಿಕ ಪಂಚಾಯಿತಿಗೆ ಕರೆಸಿ ವಿಚಾರಣೆ ಮಾಡಿದ್ದಾರೆ.

Chamarajanagar: ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳ ಮಾರಾಟ: ಕಣ್ಮುಚ್ಚಿ ಕುಳಿತಿರುವ ಸರ್ಕಾರಿ ಅಧಿಕಾರಿಗಳು

ಈ ಕುರಿತು ಪ್ರತಿಕ್ರಿಯಿಸಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಅವರು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿರುವ ಬಗ್ಗೆ ವಿಚಾರಣೆ ಮಾಡಲಾಗಿದೆ. ಆ ಸ್ಥಳದಲ್ಲಿ ಪಂಚಾಯಿತಿಯ ಕುಡಿಯುವ ನೀರಿನ ಟ್ಯಾಂಕ್ ಇತ್ತು ಎನ್ನುವುದಕ್ಕೆ ಸಾಕ್ಷಿಗಳಿವೆ. ಆದರೆ ವ್ಯಕ್ತಿಯು ಟ್ಯಾಂಕನ್ನು ನನ್ನ ಜಾಗದ ಮೇಲೆ ನಿರ್ಮಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಸರ್ವೇ ಮಾಡಿ ತನಿಖೆ ಮಾಡಲಾಗುವುದು. ಒಂದು ವೇಳೆ ಜಾಗವು ಪಂಚಾಯಿತಿಯದ್ದೇ ಎಂದು ಖಚಿತವಾದರೆ, ಸಾರ್ವಜನಿಕ ಆಸ್ತಿಯನ್ನು ನಾಶ ಮಾಡಿರುವುದಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಏನೇ ಆಗಲಿ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಉದ್ಯಾನವನ ಜಾಗ ಸೇರಿದಂತೆ ಸಾರ್ವಜನಿಕ ಆಸ್ತಿಗಳು ಹಣ, ಅಧಿಕಾರ ಬಲ ಇರುವವರ ಪಾಲಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಸರ್ಕಾರದ ಆಸ್ತಿಗಳನ್ನು ಉಳಿಸಬೇಕಾಗಿದೆ.

click me!