ರಾಜ್ಯ-ಹೊರ ರಾಜ್ಯದಿಂದ ಕಾವೇರಿ ತೀರಕ್ಕೆ ಆಗಮಿಸಿದ ಸಾವಿರಾರು ಜನ

By Kannadaprabha NewsFirst Published Sep 18, 2020, 10:56 AM IST
Highlights

ರಾಜ್ಯ ಹಾಗೂ ಹೊರ ರಾಜ್ಯದಿಂದ ಸಾವಿರಾರು ಜನರು ಕಾವೇರಿ ತೀರಕ್ಕೆ ಆಗಮಿಸಿದ್ದರು. ಮಹಾಲಯ ಅಮವಾಸ್ಯೆ ಹಿನ್ನೆಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು.

ಶ್ರೀರಂಗಪಟ್ಟಣ (ಸೆ.18):  ಪಟ್ಟಣದ ವಿವಿಧೆಡೆಗಳಲ್ಲಿನ ಕಾವೇರಿ ನದಿ ತೀರದಲ್ಲಿ ಪಿತೃಪಕ್ಷದ ಅಂಗವಾಗಿ ರಾಜ್ಯ ಹಾಗೂ ಹೊರ ರಾಜ್ಯದಿಂದ ಆಗಮಿಸಿದ ಸಾವಿರಾರು ನಾಗರೀಕರು ತಮ್ಮ ಪೂರ್ವಿಕರು ಹಾಗೂ ಅಗಲಿದ ಕುಟುಂಬ ಸದಸ್ಯರಿಗೆ ಪಿಂಡ ಪ್ರದಾನ ನೆರವೇರಿಸಿದರು.

ಪಟ್ಟಣದ ಸ್ನಾನಘಟ್ಟ, ಪಶ್ಚಿಮವಾಹಿನಿ, ದೊಡ್ಡಗೋಸಾಯಿ ಘಾಟ್‌ ಸೇರಿದಂತೆ ಕಾವೇರಿ ನದಿ ತೀರ ಪ್ರದೇಶಗಳಲ್ಲಿ ಸಾವಿರಾರು ಜನರು ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಅರ್ಚಕರೊಂದಿಗೆ ವಿವಿಧ ಪೂಜೆ ನೆರವೇರಿಸಿ ಪೂರ್ವಿಕರಿಗೆ ಪಿಂಡ ಪ್ರದಾನ ಮಾಡಿದರು. ಪ್ರತಿ ವರ್ಷವೂ ಈ ಮಹಾಲಯ ಅಮವಾಸ್ಯೆಯಂದು ಅಗಲಿದ ಪೂರ್ವಿಕರ ಆತ್ಮಕ್ಕೆ ಶಾಂತಿ ಕೋರಿ ಪಿಂಡಪ್ರದಾನ ನೆರವೇರಿಸಲಾಗುತ್ತದೆ.

ವಾಹನ ದಟ್ಟಣೆ: ಪಿತೃಪಕ್ಷದ ಹಿನ್ನಲೆಯಲ್ಲಿ ಪಟ್ಟಣದ ಕಾವೇರಿ ನದಿಯಲ್ಲಿ ಪಿಂಡಪ್ರದಾನ ಮತ್ತು ತರ್ಪಣಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿ ಸ್ಥಳೀಯ ಜನರು, ಬಸ್‌ ಪ್ರಯಾಣಿಕರು ಮತ್ತು ಪ್ರವಾಸಿಗರು ಸಂಚಾರಕ್ಕೆ ಪರದಾಡಿದರು.

ಪಟ್ಟಣದ ಸ್ನಾನಘಟ್ಟದ ಬಳಿಯಿಂದ ಜಿ.ಬಿ.ಹೊಳೆಯವರೆಗೂ ತೆರಳುವ ಮಾರ್ಗದುದ್ದಕ್ಕೂ ರಸ್ತೆಯ ಎರಡು ಬದಿಯಲ್ಲಿ ಪ್ರವಾಸಿ ವಾಹನಗಳನ್ನು ಜನರು ಬೇಕಾಬಿಟ್ಟಿನಿಲ್ಲಿಸಿ ಕಾವೇರಿ ತೀರಕ್ಕೆ ತೆರಳಿದ್ದರು. ಹಾಗಾಗಿ ಇದೇ ಮಾರ್ಗದಲ್ಲಿ ನಿತ್ಯ ಸಂಚರಿಸುವ ನಗರ ಸಾರಿಗೆ ಬಸ್ಸುಗಳು, ಸ್ಥಳಿಯ ವಾಹನ ಸವಾರರು ಹಾಗೂ ಇತರೆ ಪ್ರವಾಸಿ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿತ್ತು.

ಕಾವೇರಿ ನದಿ ತೀರದಲ್ಲಿ ವಶೀಕರಣ, ವಾಮಾಚಾರ ಪೂಜೆ .

ಜನರು ಹಾಗೂ ವಾಹನಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸುವ ಮಾಹಿತಿ ಇದ್ದರೂ ಪಶ್ಚಿಮವಾಹಿನಿ, ಶ್ರೀರಂಗಪಟ್ಟಣ ಮತ್ತು ಪುರಸಭೆ ವ್ಯಾಪ್ತಿಯ ಗಂಜಾಂನ ಗೋಸಾಯ್‌ಘಾಟ್‌, ಸಂಗಮ ಮತ್ತು ನಿಮಿಷಾಂಬದ ಬಳಿ ವಾಹನ ನಿಲುಗಡೆಗೆ ಸರಿಯಾದ ವ್ಯವಸ್ಥೆ ಕಲ್ಪಿಸದ ಕಾರಣ ಪೊಲೀಸ್‌ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನಾ ಮರೆತ ಜನ: ಮಾರಕ ರೋಗ ಕೊರೋನಾ ವೈರಸ್‌ಗೆ ಜನರು ಒಂದಿಷ್ಟುತಲೆಕೆಡಿಸಿಕೊಳ್ಳದ ಜನರು ತಮ್ಮ ಪುಟ್ಟಮಕ್ಕಳು ಸೇರಿದಂತೆ ಕುಟುಂಬಸ್ಥರೊಂದಿಗೆ ಸಾಮಾಜಿಕ ಅಂತರ, ಮಾಸ್ಕ್‌ ಧರಿಸದೆ ಎಲ್ಲೆಂದರಲ್ಲಿ ಗುಂಪು ಗೂಡಿ ಪೂರ್ವಜರಿಗೆ ಶ್ರದ್ದಾ ಮತ್ತು ಪಿಂಡ ಪ್ರದಾನ ನೇರವೇರಿಸಿದರು.

ಕಸದ ರಾಶಿ:  ಪಿಂಡಪ್ರದಾನ ಮತ್ತು ತರ್ಪಣ ನೇರವೇರಿಸಲು ನದಿಗೆ ಇಳಿದ ಸಾವಿರಾರು ಜನರು ತಾವು ಧರಿಸಿದ್ದ ಹಳೆ ಬಟ್ಟಯನ್ನು ನದಿಗೆ ಬಿಡುವ ಜೊತೆಗೆ ದಾನವಾಗಿ ಹೊಸ ಬಟ್ಟೆಗಳನ್ನೂ ಸಹ ನದಿಗೆ ಬಿಟ್ಟು ನದಿ ಕಲುಷಿತಕ್ಕೆ ಕಾರಣರಾದರು.

click me!