ಬಸ್‌ ಸ್ಟ್ರೈಕ್‌: 'ಸರ್ಕಾರಕ್ಕೆ ತಾಕತ್ತಿದ್ದರೆ ಎಲ್ಲ ನೌಕರರನ್ನೂ ವಜಾ ಮಾಡಲಿ'

By Kannadaprabha NewsFirst Published Apr 16, 2021, 3:01 PM IST
Highlights

ಸಾರಿಗೆ ಸಂಸ್ಥೆಯ ನೌಕರರ ಮೇಲೆ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ನಿಲ್ಲದಿದ್ದರೆ, ನೌಕರರ ಹೋರಾಟದ ಸ್ವರೂಪವೇ ಬದಲಾಗಲಿದೆ| ಸರ್ಕಾರ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ದಿಸೆಯಲ್ಲಿ ಹಠಮಾರಿತನ ಬಿಟ್ಟು ಮಾತುಕತೆ ನಡೆಸಬೇಕಿದೆ: ನೀರಲಕೇರಿ| 

ಧಾರವಾಡ(ಏ.16): ಸಾರಿಗೆ ಸಂಸ್ಥೆಗಳು ಇನ್ಮುಂದೆ ಸಂಪೂರ್ಣವಾಗಿ ನಿವೃತ್ತರು ಮತ್ತು ಖಾಸಗಿ ವಾಹನಗಳ ಮೂಲಕ ಸಾರಿಗೆ ಸೇವೆ ಪಡೆಯುವ ಆಸಕ್ತಿ ಇದ್ದರೆ ಸಂಸ್ಥೆಯ 1.30 ಲಕ್ಷ ಜನ ನೌಕರರನ್ನು ವಜಾ ಮಾಡಿ ಸರ್ಕಾರ ತನ್ನ ತಾಕತ್ತು ತೋರಿಸಲಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಧಾರವಾಡ ವಿಭಾಗದ ಗೌರವ ಅಧ್ಯಕ್ಷ ಪಿ.ಎಚ್‌. ನೀರಲಕೇರಿ ಸವಾಲು ಹಾಕಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಯ ನೌಕರರ ಮೇಲೆ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ನಿಲ್ಲದಿದ್ದರೆ, ನೌಕರರ ಹೋರಾಟದ ಸ್ವರೂಪವೇ ಬದಲಾಗಲಿದೆ. ಏ. 16ರಂದು ಶಾಸಕರ ಮನೆಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದರು.

ನಿಲ್ಲದ ಸಾರಿಗೆ ಮುಷ್ಕರ: ಮತ್ತೆ 121 ನೌಕರರ ಅಮಾನತು

ಸರ್ಕಾರ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ದಿಸೆಯಲ್ಲಿ ಹಠಮಾರಿತನ ಬಿಟ್ಟು ಮಾತುಕತೆ ನಡೆಸಬೇಕಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರ ಹೋರಾಟ ಒಂಬತ್ತು ದಿನ ಪೂರೈಸಿದೆ. ಈ ಮಧ್ಯೆ ಸೇವೆಯಿಂದ ವಜಾ, ವರ್ಗಾವಣೆ, ಬೆದರಿಕೆ, ಅಧಿಕಾರಿಗಳ ಕಿರುಕುಳ ಮತ್ತು ವೇತನ ಸಿಗದೇ ಆರ್ಥಿಕ ತೊಂದರೆಗೆ ಸಿಲುಕಿದ ಒಟ್ಟು ನಾಲ್ಕು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಷ್ಟುಮಾತ್ರವಲ್ಲದೇ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಸಂಗತಿ ನಡೆಯುತ್ತಿದೆ ಎಂದು ದೂರಿದರು. ನೌಕರರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಿಸುವುದು ಬೇಡ. ಮಾನವೀಯತೆಯಿಂದ ಸ್ಪಂದಿಸಿ. ನ್ಯಾಯಯುತ ಬೇಡಿಕೆ ಈಡೇರಿಸಲು ಪ್ರಯತ್ನಿಸಿ ಎಂದು ಸರ್ಕಾರಕ್ಕೆ ನೀರಲಕೇರಿ ಮನವಿ ಮಾಡಿದರು.

ಸರ್ಕಾರದ ಜತೆ ಮಾತುಕತೆ ನಡೆಸಿ ಸಕಾರಾತ್ಮಕ ಸ್ಪಂದನೆ ನೀಡುವ ಬದಲಿಗೆ ಸರ್ಕಾರದ ಏಜೆಂಟರಂತೆ ವರ್ತಿಸಿ ಅನಂತಸುಬ್ಬರಾವ್‌ ಅವರು ಅಧಿಕಾರಿಗಳ ದಾರಿ ತಪ್ಪಿಸುವುದನ್ನು ಬಿಡಬೇಕು. ಸರ್ಕಾರಕ್ಕೆ ಆರನೇ ವೇತನ ಆಯೋಗ ಜಾರಿಗೆ ಸಮಯಾವಕಾಶ ನೀಡಲಾಗುವುದು. ಆದರೆ, ಈ ಬಗ್ಗೆ ದಿನ ನಿಗದಿಪಡಿಸಿ ರಾಜ್ಯಪತ್ರ ಹೊರಡಿಸಬೇಕು. ಸಂಸ್ಥೆಯ ಎಂ.ಡಿ. ಶಿವಯೋಗಿ ಕಳಸದ ಸಂಘಟನೆಯ ಮುಖಂಡರೊಂದಿಗೆ ಮಾತನಾಡದೇ ತಮ್ಮ ನಿರ್ಲಕ್ಷ ್ಯ ಧೋರಣೆ ಮೆರೆಯುತ್ತಿದ್ದಾರೆ ಎಂದು ದೂರಿದರು.
 

click me!