ಬೆಂಗಳೂರು: ಅಪರಿಚಿತನಿಗೆ ವಿದ್ಯುತ್‌ ಶಾಕ್‌, ರಕ್ಷಿಸಲು ಹೋದ ವ್ಯಕ್ತಿ ಸಾವು

By Kannadaprabha NewsFirst Published Apr 13, 2023, 7:37 AM IST
Highlights

ಮಡಿವಾಳದ ಹೊಸೂರು ರಸ್ತೆಯ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಸಮೀಪದ ಅಲಿ ನಡೆದುಕೊಂಡು ಹೋಗುವಾಗ ವಿದ್ಯುತ್‌ ಕಂಬದಲ್ಲಿ ವಿದ್ಯುತ್‌ ಪ್ರವಹಿಸಿ ಈ ಅವಘಡ ಸಂಭವಿಸಿದೆ. 

ಬೆಂಗಳೂರು(ಏ.13):  ಬೀದಿ ದೀಪದ ವಿದ್ಯುತ್‌ ಕಂಬದಿಂದ ವಿದ್ಯುತ್‌ ಪ್ರವಹಿಸಿ ಸಂಕಷ್ಟದಲ್ಲಿದ್ದ ವ್ಯಕ್ತಿಯನ್ನು ಕಾಪಾಡಲು ಹೋಗಿ ಕೇರಳ ಮೂಲದ ಮೊಬೈಲ್‌ ವ್ಯಾಪಾರಿಯೊಬ್ಬರು ಪ್ರಾಣ ತೆತ್ತಿರುವ ಮಡಿವಾಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೇರಳ ರಾಜ್ಯದ ತ್ರಿಶೂರ್‌ ಜಿಲ್ಲೆಯ ಅಕ್ಬರ್‌ ಅಲಿ (36) ಮೃತ ದುರ್ದೈವಿ. ಮಡಿವಾಳದ ಹೊಸೂರು ರಸ್ತೆಯ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಸಮೀಪದ ಅಲಿ ನಡೆದುಕೊಂಡು ಹೋಗುವಾಗ ವಿದ್ಯುತ್‌ ಕಂಬದಲ್ಲಿ ವಿದ್ಯುತ್‌ ಪ್ರವಹಿಸಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Chamarajanagar: ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ತಗುಲಿ ಹೆಣ್ಣಾನೆ ಸಾವು

ತನ್ನೂರಿನಲ್ಲಿ ಮೊಬೈಲ್‌ ಮಾರಾಟ ಅಂಗಡಿ ನಡೆಸುತ್ತಿದ್ದ ಅಕ್ಬರ್‌ ಅಲಿ, ಮೂರು ದಿನಗಳ ಹಿಂದೆ ಮೊಬೈಲ್‌ ಬಿಡಿಭಾಗಗಳ ಖರೀದಿಗೆ ನಗರಕ್ಕೆ ಬಂದಿದ್ದ. ಬಳಿಕ ಮಡಿವಾಳ ಸಮೀಪದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ ಆತ, ನಗರದ ಎಸ್‌ಪಿ ರಸ್ತೆಯಲ್ಲಿ ಬಿಡಿ ಭಾಗಗಳನ್ನು ಖರೀದಿಸಿ ಬುಧವಾರ ಮರಳಲು ನಿರ್ಧರಿಸಿದ್ದ. ಎಂದಿನಂತೆ ಮಂಗಳವಾರ ರಾತ್ರಿ ಮದ್ಯ ಸೇವಿಸಿ ಲಾಡ್ಜ್‌ಗೆ ಅಲಿ ಮರಳುತ್ತಿದ್ದ. ಆಗ ಮಾರ್ಗ ಮಧ್ಯೆ ಹೊಸೂರು ರಸ್ತೆಯ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಮುಂದಿನ ವಿದ್ಯುತ್‌ ಕಂಬದಲ್ಲಿ ವಿದ್ಯುತ್‌ ಪ್ರವಹಿಸಿ ವ್ಯಕ್ತಿಯೊಬ್ಬ ಸಂಕಷ್ಟಕ್ಕೆ ಸಿಲುಕಿದ್ದ. ಇದನ್ನು ಗಮನಿಸಿದ ಅಲಿ, ಕೂಡಲೇ ಅಪರಿಚಿತ ವ್ಯಕ್ತಿಯ ರಕ್ಷಣೆಗೆ ಧಾವಿಸಿದ್ದಾರೆ. ಅಲ್ಲೇ ಇದ್ದ ದೊಣ್ಣೆಯಿಂದ ಆ ವ್ಯಕ್ತಿಯನ್ನು ನೂಕಿ ಅಪರಿಚಿತನನ್ನು ರಕ್ಷಿಸಿ ಕೊನೆಗೆ ಅಲಿ ಪ್ರಾಣ ತೆತ್ತಿದ್ದಾರೆ.

ಅಪರಿಚಿತ ವ್ಯಕ್ತಿ ರಕ್ಷಣೆಗೆ ತಾನು ಹಿಡಿದುಕೊಂಡಿದ್ದ ಮರದ ಕೋಲು ಬೀದಿ ದೀಪದ ಕಂಬಕ್ಕೆ ತಾಕಿ ವಿದ್ಯುತ್‌ ಪ್ರವಹಿಸಿದ ಪರಿಣಾಮ ಅಲಿ ಮೃತಪಟ್ಟಿದ್ದಾರೆ. ಆದರೆ ಆತನಿಂದ ರಕ್ಷಣೆಗೊಳಗಾದ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ವಿದ್ಯುತ್‌ ಕಂಬದ ಬಳಿ ಅಪರಿಚಿತ ವ್ಯಕ್ತಿ ಮೃತದೇಹ ಕಂಡು ಪೊಲೀಸರಿಗೆ ಸ್ಥಳೀಯರು ತಿಳಿಸಿದ್ದಾರೆ. ಈ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೃತನ ಗುರುತು ಪತ್ತೆಯಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

click me!