* ಕೋವಿಡ್ ಲಸಿಕೆ ಪಡೆಯದಿದ್ದರೆ ಅಂಗಡಿ ತೆರೆಯುವಂತಿಲ್ಲ
* ಸಾರ್ವಜನಿಕರ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿರುವ ಸರ್ಕಾರ
* 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಲೇಬೇಕು
ಕುಷ್ಟಗಿ(ಸೆ.13): ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ಎಲ್ಲ ರೀತಿಯ ಅಂಗಡಿಗಳ ಮಾಲೀಕರು ಮತ್ತು ಕೆಲಸಗಾರರು ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂಗಡಿ ತೆರೆಯುವಂತಿಲ್ಲ ಎಂದು ಅಧಿಕಾರಿಗಳು ತಾಕೀತು ಮಾಡಿದ್ದಾರೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ಹಾಕಿಸಿಕೊಂಡವರಿಗೆ ಯಾವುದೇ ರೀತಿಯ ಅಡ್ಡಪರಿಣಾಮ ಬೀರಿಲ್ಲ ಎಂದು ತಿಳಿಸಲು ಜಾಗೃತಿ ಮೂಡಿಸಿದರೂ ಜನರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಇನ್ನೊಂದೆಡೆ ಲಸಿಕೆ ನೀಡುವಿಕೆಯಲ್ಲಿ ಪ್ರಗತಿ ಕಾಣದಿರುವುದಕ್ಕೆ ಮೇಲಧಿಕಾರಿಗಳು ಗರಂ ಆಗುತ್ತಿರುವುದು ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ತಲೆಬಿಸಿಯಾಗಿದೆ.
ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಇಲ್ಲಿಯ ಕಂದಾಯ, ಆರೋಗ್ಯ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಪಟ್ಟಣದ ಬಹಳಷ್ಟು ಅಂಗಡಿಗಳಿಗೆ ಖುದ್ದಾಗಿ ತೆರಳಿ ಪುನಃ ಮನವೊಲಿಸುವ ಕೆಲಸ ಮುಂದುವರಿಸಿದರು.
ಕೋವಿಡ್‌ದಿಂದ ಜನರು ತೊಂದರೆ ಅನುಭವಿಸಬಾರದು ಎಂದೇ ಸರ್ಕಾರ ಸಾರ್ವಜನಿಕರ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದೆ. ಎಲ್ಲ ಅಧಿಕಾರಿ, ಸಿಬ್ಬಂದಿ ಈ ವಿಷಯದಲ್ಲಿ ಮುತುವರ್ಜಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಿದ್ದರೂ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ನಿಮಗೇನು ಕಷ್ಟ? ಎಂದು ಅಧಿಕಾರಿಗಳು ಅಂಗಡಿಗಳ ಮಾಲೀಕರನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡರು.
ಶ್ರೀಮಂತ ದೇಶವನ್ನೇ ಹಿಂದಿಕ್ಕಿದ ಕರುನಾಡು: ರಾಜ್ಯದಲ್ಲಿ ಲಸಿಕೆ ರಷ್ಯಾಗಿಂತ ವೇಗ!
ಅಂಗಡಿ ಮಾಲೀಕರು ಅಥವಾ ಕೆಲಸ ಮಾಡುವ ಯಾರೇ ಆಗಿರಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಲೇಬೇಕು. ಅಂದರೆ ಮಾತ್ರ ಅಂಗಡಿ ತೆರೆಯುವುದಕ್ಕೆ ಪರವಾನಗಿ ನೀಡಲಾಗುತ್ತದೆ. ಲಸಿಕೆ ಹಾಕಿಸಿಕೊಂಡ ದಾಖಲೆಯನ್ನು ಸಿಬ್ಬಂದಿಗೆ ತೋರಿಸಬೇಕು. ಯಾರೇ ನಿರ್ಲಕ್ಷ್ಯವಹಿಸಿದರೂ ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಪುರಸಭೆ ಸಿಬ್ಬಂದಿಗೆ ಸ್ಥಳದಲ್ಲಿಯೇ ಸೂಚಿಸಿದರು.
ಈ ವೇಳೆ ಸಬ್ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ, ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು. ಈಗ ಸಾಂಕೇತಿಕವಾಗಿ ಕೆಲ ಅಂಗಡಿಗಳಿಗೆ ಭೇಟಿ ನೀಡಲಾಗಿದೆ. ಪುರಸಭೆ ಅಧಿಕಾರಿಗಳು ಪ್ರತಿದಿನ ಪರಿಶೀಲನೆ ನಡೆಸಲಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.