ಚಾಮರಾಜನಗರದ ಶಿಕ್ಷಣ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು: ಸರ್ಕಾರಿ ಕಾನೂನು ಕಾಲೇಜು ಆರಂಭಕ್ಕೆ ಅನುಮತಿ

Published : Jun 06, 2025, 06:55 PM IST
Chamarajanagar Law College

ಸಾರಾಂಶ

ಚಾಮರಾಜನಗರ ಜಿಲ್ಲೆಯಾಗಿ ಬರೋಬ್ಬರಿ 28 ವರ್ಷಗಳ ನಂತರ ಸರ್ಕಾರಿ ಕಾನೂನು ಕಾಲೇಜು ಆರಂಭಕ್ಕೆ ಭಾರತೀಯ ವಕೀಲ ಪರಿಷತ್ ಹಸಿರು ನಿಶಾನೆ ತೋರಿದೆ.

ವರದಿ: ಪುಟ್ಟರಾಜು.ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಜೂ.06): ಚಾಮರಾಜನಗರ ಜಿಲ್ಲೆಯಾಗಿ ಬರೋಬ್ಬರಿ 28 ವರ್ಷಗಳ ನಂತರ ಸರ್ಕಾರಿ ಕಾನೂನು ಕಾಲೇಜು ಆರಂಭಕ್ಕೆ ಭಾರತೀಯ ವಕೀಲ ಪರಿಷತ್ ಹಸಿರು ನಿಶಾನೆ ತೋರಿದೆ. ಇದರೊಂದಿಗೆ ಕಾನೂನು ಪದವಿ ವ್ಯಾಸಂಗಕ್ಕೆ ದೂರದ ಮೈಸೂರು ಬೆಂಗಳೂರು ಜಿಲ್ಲೆಗಳಿಗೆ ಹೋಗಬೇಕಿದ್ದ ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶುಲ್ಕದೊಂದಿಗೆ ಕಾನೂನು ಪದವಿ ವ್ಯಾಸಂಗ ಮಾಡುವ ಅವಕಾಶ ದೊರೆತಂತಾಗಿದೆ. 1997 ರಲ್ಲಿ ಪ್ರತ್ಯೇಕ ಜಿಲ್ಲೆಯಾದ ಚಾಮರಾಜನಗರದಲ್ಲಿ ಇದುವರೆಗೂ ಕಾನೂನು ಕಾಲೇಜು ಇರಲಿಲ್ಲ.

ಇಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಇದೆ. ಆದರೆ ಕಾನೂನು ಪದವಿ ವ್ಯಾಸಂಗ ಮಾಡಲು ಇಲ್ಲಿನ ವಿದ್ಯಾರ್ಥಿಗಳು ದೂರದ ಮೈಸೂರು ಬೆಂಗಳೂರು ಜಿಲ್ಲೆಗಳಿಗೆ ಹೋಗುವ ಅನಿವಾರ್ಯತೆ ಇತ್ತು. ಖಾಸಗಿ ಕಾನೂನು ಕಾಲೇಜುಗಳಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ ಇರುವುದರಿಂದ ಎಷ್ಟೋ ಮಂದಿ ವಿದ್ಯಾರ್ಥಿಗಳು ಕಾನೂನು ಪದವಿ ವ್ಯಾಸಂಗ ದಿಂದ ವಂಚಿತರಾಗುತ್ತಿದ್ದರು. ಇದನ್ನು ಮನಗಂಡ ಹಿಂದೆ ಸಂಸದರಾಗಿದ್ದ ಆರ್ ಧ್ರುವನಾರಾಯಣ ಅವರ ಪ್ರಯತ್ನದ ಫಲವಾಗಿ ಜಿಲ್ಲೆಗೆ ಸರ್ಕಾರಿ ಕಾನೂನು ಕಾಲೇಜು ಮಂಜೂರಾಗಿತ್ತು. ಆದರೆ ಮೂಲಭೂತ ಸೌಕರ್ಯ ಕೊರತೆಯಿಂದಾಗಿ ಕಾನೂನು ಕಾಲೇಜು ಆರಂಭಕ್ಕೆ ಭಾರತೀಯ ವಕೀಲರ ಪರಿಷತ್ ನಿರ್ಬಂಧ ಹೇರಿತ್ತು.

ಕಳೆದ ಆರು ತಿಂಗಳ ಹಿಂದಷ್ಟೇ ಪ್ರಾಂಶುಪಾಲರಾಗಿ ನೇಮಕಗೊಂಡ ಲಲಿತಾಬಾಯಿ ವೈಯಕ್ತಿಕವಾಗಿ ಮುತುವರ್ಜಿ ವಹಿಸಿ ಕಾನೂನು ಕಾಲೇಜು ಆರಂಭಕ್ಕೆ ಭಾರತೀಯ ವಕೀಲರ ಪರಿಷತ್ನಿಂದ ಅನುಮತಿ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರ ಈಗಾಗಲೇ ಪ್ರಾಂಶುಪಾಲರು, ಐವರು ಬೋಧಕರು ಹಾಗು ಅಗತ್ಯ ಬೋದಕೇತರ ಸಿಬ್ಬಂದಿಯನ್ನು ನೇಮಿಸಿದೆ. ಎಂಎಸ್ಐಎಲ್ ಅಧ್ಯಕ್ಷರೂ ಆಗಿರುವ ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ ಅವರಿ ಎಂಎಸ್ಐಎಲ್ನ ಸಿಎಸ್ಆರ್ ನಿಧಿಯಿಂದ ಕಾಲೇಜಿಗೆ ಅಗತ್ಯ ವಾದ ಪೀಠೋಪಕರಣ ಕೊಡಿಸಿದ್ದಾರೆ. ಕಾನೂನು ಕಾಲೇಜು ಆರಂಭವಾಗುತ್ತಿರುವುದರಿಂದ ಜಿಲ್ಲೆಯ ಶಿಕ್ಷಣ ಕ್ಷೇತ್ರ ಮತ್ತಷ್ಟು ಬಲಗೊಳ್ಳಲಿದೆ.

ಕಾನೂನು ಪದವಿ ವ್ಯಾಸಂಗ ಮಾಡಬಯಸುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಮೂರು ವರ್ಷಗಳ ಕಾನೂನು ಪದವಿಯ ಮೊದಲ ವರ್ಷಕ್ಕೆ ಸರ್ಕಾರಿ ಶುಲ್ಕ ಕೇವಲ ಐದು ಸಾವಿರದ ಐನೂರು ರೂಪಾಯಿ ಪ್ರವೇಶ ಶುಲ್ಕ ಇರಲಿದ್ದು ಜಿಲ್ಲೆಯ ಹಿಂದುಳಿದ ದಲಿತ ಹಾಗು ಬಡವರ್ಗದ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. ಪ್ರಸ್ತುತ ಪದವಿ ಪರೀಕ್ಷೆಗಳು ನಡೆಯುತ್ತಿದ್ದು ಈ ಪರೀಕ್ಷೆಗಳು ಮುಗಿದ ಕೂಡಲೇ ಕಾನೂನು ಪದವಿ ಪ್ರವೇಶಾತಿಗೆ ಕಾನೂನು ವಿಶ್ವವಿದ್ಯಾಲಯ ಅಧಿಕೃತ ಅಧಿಸೂಚನೆ ಹೊರಡಿಸಲಿದೆ. ಬಳಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಕಾನೂನು ಕಾಲೇಜಿಗೆ ಪ್ರವೇಶ ಪಡೆಯಬಹುದಾಗಿದೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ