ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಕುರಿತು ಕೇಂದ್ರ ಸಚಿವರು ಸೋಮವಾರ ಸ್ಪಷ್ಟಪಡಿಸಿರುವ ಹಿನ್ನೆಲೆ ಕಾರ್ಮಿಕ ವಲಯದಲ್ಲಿ ಕಾರ್ಮೋಡ ಆವರಿಸಿಕೊಂಡಿದೆ. ಈ ನಡುವೆ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಮಂಗಳವಾರ 27ನೇ ದಿನ ಪೂರೈಸಿದೆ.
ಅನಂತಕುಮಾರ್
ಭದ್ರಾವತಿ (ಫೆ.15) : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಕುರಿತು ಕೇಂದ್ರ ಸಚಿವರು ಸೋಮವಾರ ಸ್ಪಷ್ಟಪಡಿಸಿರುವ ಹಿನ್ನೆಲೆ ಕಾರ್ಮಿಕ ವಲಯದಲ್ಲಿ ಕಾರ್ಮೋಡ ಆವರಿಸಿಕೊಂಡಿದೆ. ಈ ನಡುವೆ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಮಂಗಳವಾರ 27ನೇ ದಿನ ಪೂರೈಸಿದೆ.
ಕಾರ್ಖಾನೆ ಮುಚ್ಚುವ ಆದೇಶದ ವಿಚಾರ ತಿಳಿಸಿದ ತಕ್ಷಣ ಜ.16ರಿಂದ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದ್ದಾರೆ. ಹೋರಾಟಕ್ಕೆ ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ ಗುರೂಜಿ(Vinaya guruji), ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ(HD Kumaraswamy), ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(KPCC President DK Shivakumar), ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್(Mahima K Patil), ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು, ಗಣ್ಯರು ಬೆಂಬಲ ಸೂಚಿಸಿದ್ದಾರೆ.
ವಿಎಸ್‌ಐಎಲ್ ಉಳಿವಿಗೆ ಸಿಎಂ ಬಳಿ ನಿಯೋಗ: ಸಂಸದ ಬಿ.ವೈ.ರಾಘವೇಂದ್ರ
ಅಲ್ಲದೇ, ಪ್ರತಿಭಟನಾ ಮೆರವಣಿಗೆ, ಪಂಜಿನ ಮೆರವಣಿಗೆ, ಪಾದಯಾತ್ರೆ, ಸಹಿ ಅಭಿಯಾನ, ಪತ್ರ ಚಳುವಳಿ ಸೇರಿದಂತೆ ವಿವಿಧ ರೀತಿಯ ಹೋರಾಟಗಳನ್ನೂ ನಡೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸಂಬಂಧಪಟ್ಟಕೇಂದ್ರ ಸಚಿವರಿಗೆ, ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ಸೇರಿದಂತೆ ಇನ್ನಿತರರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ, ಹೋರಾಟಕ್ಕೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಈ ನಡುವೆ ಇದೀಗ ಕೇಂದ್ರ ಸಚಿವರು ಕಾರ್ಖಾನೆ ಮುಚ್ಚುವ ಕುರಿತು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ವಲಯದಲ್ಲಿ ಕಾರ್ಮೋಡ ಆವರಿಸಿಕೊಂಡಿದೆ.
ರೈತರ ಬೀದಿಪಾಲು ಬಳಿಕ ಕಾರ್ಮಿಕರ ಸರದಿ
ಒಂದು ಕಾಲದಲ್ಲಿ ಭದ್ರಾವತಿ ತಾಲೂಕಿನಾದ್ಯಂತ ರೈತರು, ಕಾರ್ಮಿಕರು ಹೆಚ್ಚಾಗಿದ್ದರು. ತೆಂಗು, ಅಡಕೆ, ಕಬ್ಬು, ತಾಳೆ ಬೆಳೆಗಾರರು ತಮ್ಮ ಬದುಕು ಕಟ್ಟಿಕೊಂಡಿದ್ದರು. ಮೈಸೂರು ಕಾಗದ ಮತ್ತು ಸಕ್ಕರೆ ಕಾರ್ಖಾನೆ ಆರಂಭದಿಂದಾಗಿ ರೈತರು ಹೆಚ್ಚಾಗಿ ಕಬ್ಬು ಬೆಳೆ ಅವಲಂಬಿಸಿದ್ದರು. ಅಲ್ಲದೇ, ಕಾರೇಹಳ್ಳಿ ಸಮೀಪ ತಾಳೆಎಣ್ಣೆ ಕಾರ್ಖಾನೆ ಆರಂಭದಿಂದಾಗಿ ತಾಳೆ ಬೆಳೆ ಬೆಳೆಯಲು ಆರಂಭಿಸಿದ್ದರು. ಈ ವ್ಯಾಪ್ತಿಯಲ್ಲಿ ವರ್ಷದಿಂದ ವರ್ಷಕ್ಕೆ ಕಬ್ಬುಬೆಳೆ ಹೆಚ್ಚಾಗುವ ಜೊತೆಗೆ ಆಲೆಮನೆಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾರಂಭಗೊಂಡವು. ಇಲ್ಲಿ ಉತ್ಪಾದನೆಗೊಳ್ಳುತ್ತಿದ್ದ ಬೆಲ್ಲ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದುಕೊಂಡಿತ್ತು. ಒಂದಾದ ನಂತರ ಒಂದು ಕಾರ್ಖಾನೆ ಸ್ಥಗಿತಗೊಂಡ ನಂತರ ಇದೀಗ ಇವೆಲ್ಲವೂ ಇತಿಹಾಸ ಪುಟ ಸೇರಿವೆ. ಬಹುತೇಕ ರೈತರು ಕೃಷಿಯಿಂದ ವಿಮುಖಗೊಂಡಿದ್ದಾರೆ. ಜಮೀನುಗಳು ವಾಣಿಜ್ಯ ಬಳಕೆಗೆ ಮಾರ್ಪಾಡಾಗಿವೆ. ಕೆಲವು ರೈತ ಕುಟುಂಬಗಳು ನಗರ ಪ್ರದೇಶಗಳಿಗೆ ವಲಸೆ ಹೋಗಿವೆ. ಕೆಲವು ರೈತ ಕುಟುಂಬಗಳು ಸಾಲದ ಸುಳಿಗೆ ಸಿಲುಕಿ ಬೀದಿಪಾಲಾಗಿವೆ.
ಒಂದು ಕಾಲದಲ್ಲಿ 4000ಕ್ಕೂ ಹೆಚ್ಚು ಕಾಯಂ, 5000ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರನ್ನು ಹೊಂದಿದ್ದ ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡು ಸುಮಾರು 8 ವರ್ಷಗಳು ಕಳೆದಿವೆ. ಸಾವಿರಾರು ಮಂದಿ ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರು, ಕುಟುಂಬದವರು ಬೀದಿಪಾಲಾಗಿದ್ದಾರೆ. 10,000ಕ್ಕೂ ಹೆಚ್ಚು ಕಾಯಂ, 15000ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರನ್ನು ಹೊಂದಿದ್ದ ವಿಐಎಸ್‌ಎಲ್‌ನಲ್ಲಿ ಇದೀಗ ಬೆರಳೆಣಿಕೆಯಷ್ಟುಕಾರ್ಮಿಕರು ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರಿದ್ದಾರೆ. ಕೇಂದ್ರದ ಘೋಷಣೆಯಿಂದಾಗಿ ಪ್ರಸ್ತುತ ಇವರೂ ಬೀದಿಪಾಲಾಗುವ ಆತಂಕ ಎದುರಾಗಿದೆ.
ಬೆಂಗಳೂರಿಗೆ ಯುವಕ ಪಾದಯಾತ್ರೆ
ವಿಐಎಸ್‌ಎಲ್ ಕಾರ್ಖಾನೆ(VISL Factory) ಮುಚ್ಚುವ ನಿರ್ಧಾರ ಕೈಬಿಟ್ಟು, ಪುನಶ್ಚೇತನಗೊಳಿಸಬೇಕೆಂದು ಒತ್ತಾಯಿಸಿ ನಗರದ ಯುವಕನೊಬ್ಬ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮಂಗಳವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯೊಂದಿಗೆ ಪಾದಯಾತ್ರೆ ಮುಕ್ತಾಯಗೊಂಡಿದೆ. ಮೂಲತಃ ಶ್ರವಣಬೆಳಗೊಳದ ಬಿ.ಎಸ್. ದಯಾನಂದ್, ನಗರದ ರೈಲ್ವೆ ನಿಲ್ದಾಣದ ಬಳಿ ಅಂಗಡಿ ಹೊಂದಿದ್ದಾರೆ. ಭದ್ರಾವತಿಗೆ ಬಂದು ನೆಲೆಸಿ ಕೇವಲ 5-6 ವರ್ಷಗಳಾಗಿವೆ. ಆದರೆ, ಉಕ್ಕಿನ ನಗರಿ ತನಗೆ ನೆಲೆಸಲು ಜಾಗ, ಅನ್ನ, ನೀರು ನೀಡಿ ಸಲುಹಿದೆ. ಇಂತಹ ನಗರ ಉಳಿಯಬೇಕು ಎಂದರೆ ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆ ಉಳಿಯಬೇಕು ಎಂಬ ಆಗ್ರಹ ಅವರದು.
ದಯಾನಂದ್ ಫೆ.1ರಂದು ಪಾದಯಾತ್ರೆ ಆರಂಭಿಸಿ ಮೊದಲು ಜಿಲ್ಲಾಧಿಕಾರಿ ಕಚೇರಿವರೆಗೂ ತೆರೆಳಿ ಮನವಿ ಸಲ್ಲಿಸಿದ್ದರು. ಅನಂತರ ಫೆ.7ರಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿ 14ರ ಮಂಗಳವಾರ ತಲುಪಿದ್ದು, ಅವರಿಗೆ ಫ್ರೀಡಂ ಪಾರ್ಕ್ನಲ್ಲಿ ಗುತ್ತಿಗೆ ಕಾರ್ಮಿಕರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
VISL ಕಾರ್ಖಾನೆಯನ್ನು ಮುಚ್ಚುವ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದ ಕೇಂದ್ರ ಸರ್ಕಾರ!
ಕಾರ್ಖಾನೆಗೆ ಡಿಸಿ, ಎಸ್‌ಪಿ ಭೇಟಿ
ಕೇಂದ್ರ ಸಚಿವರು ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಕುರಿತು ಸ್ಪಷ್ಟಪಡಿಸಿರುವ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಮಂಗಳವಾರ ಮಧ್ಯಾಹ್ನ ಏಕಾಏಕಿ ಕಾರ್ಖಾನೆಗೆ ಭೇಟಿ ನೀಡಿದ್ದು, ಹಲವು ಕುತೂಹಲಗಳಿಗೆ ಕಾರಣವಾಗಿವೆ. ಕಾರ್ಖಾನೆಯ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರ್ ಜೊತೆ ಮಾತುಕತೆ ನಡೆಸಿದರು. ಕಾರ್ಖಾನೆ ಹೊಂದಿರುವ ಖಾಲಿ ಜಾಗ ಮತ್ತು ವಸತಿ ಗೃಹಗಳಿರುವ ಜಾಗದ ನಕಾಶೆ ಪರಿಶೀಲನೆ ನಡೆಸಲಾಯಿತು. ಅಲ್ಲದೇ ಕಾರ್ಖಾನೆ ಅಡಳಿತ ಮಂಡಳಿ ಜೊತೆ ಸಹ ಚರ್ಚೆ ನಡೆಸಲಾಗಿದೆ. ಗುತ್ತಿಗೆ ಕಾರ್ಮಿಕರು ಬೆಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆ ಕಾರ್ಖಾನೆ ಬಳಿ ಭಣಗುಟ್ಟುವ ವಾತಾವರಣ ಕಂಡುಬಂದಿತು.