ಶೇ. 40 ಕಮಿಷನ್‌ ನೀಡದ್ದಕ್ಕೆ ಡಿಸಿ, ಎಸ್ಪಿ ಎತ್ತಂಗಡಿ: ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆರೋಪ

By Kannadaprabha NewsFirst Published Feb 8, 2023, 8:11 AM IST
Highlights

ಸಚಿವ ಆನಂದ ಸಿಂಗ್‌ ಅವರಿಗೆ ಶೇ. 40ರಷ್ಟುಕಮಿಷನ್‌ ಕೊಡಲಿಲ್ಲ ಎಂದು ಜಿಲ್ಲಾಧಿಕಾರಿ, ಎಸ್ಪಿಯವರನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆರೋಪಿಸಿದ್ದಾರೆ.

ಹೊಸಪೇಟೆ (ಫೆ.8) : ಸಚಿವ ಆನಂದ ಸಿಂಗ್‌ ಅವರಿಗೆ ಶೇ. 40ರಷ್ಟುಕಮಿಷನ್‌ ಕೊಡಲಿಲ್ಲ ಎಂದು ಜಿಲ್ಲಾಧಿಕಾರಿ, ಎಸ್ಪಿಯವರನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆರೋಪಿಸಿದ್ದಾರೆ.

ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‌ ರಾರ‍ಯಲಿ ನಡೆಸಿದ ಬಳಿಕ ಆಮ್‌ ಆದ್ಮಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ವಿಜಯನಗರ ಕ್ಷೇತ್ರದಲ್ಲಿ ಜನರ ಅಭಿವೃದ್ಧಿಗಿಂತ ಸಚಿವ ಆನಂದ ಸಿಂಗ್‌ ಸಂಪತ್ತು ಹೆಚ್ಚಾಗುತ್ತಿದೆ. ಆಸ್ತಿ ವಿಚಾರದಲ್ಲಿ ದೇಶದಲ್ಲಿ ಟಾಪ್‌ 10 ಸ್ಥಾನದಲ್ಲಿದ್ದಾರೆ. ಇವೆಲ್ಲ ಬಂದಿದ್ದು ಹೇಗೆ? ಶೇ. 40ರಷ್ಟುಕಮಿಷನ್‌ ನಿಮಗೆ ಕೊಡಲಿಲ್ಲ ಎಂದು ನಿಷ್ಠಾವಂತ ಡಿಸಿ, ಎಸ್ಪಿಯನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.

 

Aam Aadmi Party: ಕೂಡ್ಲಿಗಿ ಕ್ಷೇತ್ರದಲ್ಲಿ ಆಮ್‌ ಆದ್ಮಿಯ ಸೈನ್ಯದ ಹೆಜ್ಜೆ

ಪ್ರವಾಸೋದ್ಯಮ ಸಚಿವರಾದರೂ ಪ್ರವಾಸಿತಾಣ ಹಂಪಿಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ಪ್ರವಾಸಿಗರು ಪರದಾಡುತ್ತಿದ್ದಾರೆ. ನೀವು ಉದ್ಯಮಿ ಕೂಡ ಆಗಿದ್ದೀರಿ. ಸ್ಥಳೀಯರಿಗೆ ನೀವು ಉದ್ಯೋಗ ಕೊಡುವಲ್ಲಿ ವಿಫಲರಾಗಿದ್ದೀರಿ. ಹರಪನಹಳ್ಳಿಯಲ್ಲಿ ಅತಿ ಹೆಚ್ಚು ಬೆಳೆ ಹಾನಿಯಾಗಿದೆ. ಡಬಲ್‌ ಎಂಜಿನ್‌ ಸರ್ಕಾರ ಅಂತ ಹೇಳುವ ನೀವು ರೈತರಿಗೆ ಕನಿಷ್ಠ ಪರಿಹಾರ ಕೊಡಿಸುತ್ತಿಲ್ಲ ಯಾಕೆ? ರಾಜ್ಯ ಸರ್ಕಾರ ಕೊಡುತ್ತಿರುವ ಪಡಿತರ ಅಕ್ಕಿಯನ್ನು ನಾಯಿ ಕೂಡ ತಿನ್ನುವುದಿಲ್ಲ, ಅಕ್ಕಿಯಲ್ಲಿ ಹುಳ ಇರುತ್ತದೆ. ಗುಣಮಟ್ಟದ ಪಡಿತರ ಕೊಡಬೇಕು ಎಂದು ಒತ್ತಾಯಿಸಿದರು.

ಪ್ರಬಲ ಅಭ್ಯರ್ಥಿ ಹಾಕಿ ಗೆಲ್ಲುತ್ತೇವೆ:

ಸಚಿವ ಆನಂದ ಸಿಂಗ್‌ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿ ಎಂದು .2 ಲಕ್ಷ ಕೊಟ್ಟು ಅರ್ಜಿ ಹಾಕಿದ್ದಾರೆ. ನೀವು ಚುನಾವಣೆಯಲ್ಲಿ ಪ್ರತಿಪಕ್ಷಗಳಿಂದ ನಿಮ್ಮ ವಿರುದ್ಧ ಡಮ್ಮಿ ಕ್ಯಾಂಡಿಡೇಟ್‌ ಹಾಕ್ತಿರಿ. ನೀವು ಏನೇ ಮಾಡಿದರೂ ನಾವು ಮಾತ್ರ ಪ್ರಬಲ ಅಭ್ಯರ್ಥಿಯನ್ನು ಹಾಕಿ ಗೆಲುವು ಪಡೆಯುತ್ತೇವೆ. ನಮ್ಮ ನಗರಸಭೆ ಸದಸ್ಯರನ್ನು ಆಪರೇಷನ್‌ ಕಮಲ ಮಾಡಿದ್ದೀರಾ? ಇದರ ಫಲ ಉಣ್ಣುತ್ತೀರಾ? ಎಂದು ಸವಾಲು ಹಾಕಿದರು.

ಶಾಸಕರಿಂದ ರಿಯಲ್‌ ಎಸ್ಟೇಟ್‌:

ಉತ್ತರ ಕರ್ನಾಟಕದಿಂದ ಬಂದ ಶಾಸಕರು ಬೆಂಗಳೂರಲ್ಲಿ ರಿಯಲ್‌ ಎಸ್ಟೇಟ್‌ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಬೆಂಗಳೂರು ದಾಟಿ ಬೇರೆ ಕಡೆ ಹೋಗಿಲ್ಲ. ತಮಿಳುನಾಡಿನಲ್ಲಿ ಕೈಗಾರಿಕೆ ಹೊಂದಿರುವ ಹತ್ತು ನಗರಗಳು ಸಿಗುತ್ತವೆ. ಆದರೆ, ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಆಮ್‌ ಆದ್ಮಿ ಪಾರ್ಟಿ ಬಗ್ಗೆ ಪಂಜಾಬ್‌ ಚುನಾವಣೆ ಆನಂತರ ಜನರಲ್ಲಿ ಆಶಯ ಬದಲಾಗಿದೆ. ಗ್ರಾಮ ಸಂರ್ಪಕ ಅಭಿಯಾನ ಮಾಡುತ್ತಿದ್ದೇವೆ. ಸದ್ಯ ನಾವು ಕೈಯಲ್ಲಿ ಪೊರಕೆ ಹಿಡಿದಿದ್ದೇವೆ. ಎಲ್ಲ ಕ್ಷೇತ್ರದಲ್ಲಿ ಬಳಿಯುತ್ತೇವೆ ಎಂದರು.

ಕಾನೂನು ಸಂಘಟನಾ ಕಾರ್ಯದರ್ಶಿ ರವಿಚಂದ್ರ ಮಾತನಾಡಿ, ಆಮ್‌ ಆದ್ಮಿ ಪಕ್ಷದ ಜನರ ಅಭಿವೃದ್ಧಿ ನೋಡಿ ಬಿಜೆಪಿಗೆ ಭಯವಾಗಿದೆ. 224 ಕ್ಷೇತ್ರಗಳಿಗೆ ಪ್ರಾಮಾಣಿಕ ಅಭ್ಯರ್ಥಿಗಳನ್ನು ಹಾಕುತ್ತಿದ್ದೇವೆ. ಕಾಂಗ್ರೆಸ್‌, ಬಿಜೆಪಿ ಹೊಂದಾಣಿಕೆ ರಾಜಕೀಯ ಮಾಡುತ್ತಿವೆ. ಗುಜರಾತ ಚುನಾವಣೆ ಆನಂತರ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದಾರೆ ಎಂದರು.

ಬಿಜೆಪಿ ವಂಚಕ ಸುಖೇಶ್‌ನನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದೆ. ದಿಲ್ಲಿ ಸಿಎಂ ಕೇಜ್ರಿವಾಲ್‌ ಮತ್ತು ಸಚಿವ ಸತ್ಯೇಂದ್ರ ಜೈನ್‌ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಸುಖೇಶ್‌ ಬರೆದಿರುವ ಪತ್ರದಲ್ಲಿ ಯಾವುದೂ ಸತ್ಯಾಂಶವಿಲ್ಲ. ಇದೆಲ್ಲ ಅಂತೆ ಕಂತೆ ಎಂದರು.

ಆಮ್ ಆದ್ಮಿ ಪಾರ್ಟಿಯಿಂದ ಮಹತ್ವದ ಹೆಜ್ಜೆ, ಏಕಾಏಕಿ ಹರ್ಯಾಣ ಘಟಕ ವಿಸರ್ಜಿಸಿದ ಕೇಜ್ರಿವಾಲ್!

ಆಮ್‌ ಆದ್ಮಿ ಪಾರ್ಟಿ ಬಿಜೆಪಿಯ ಬಿ ಟೀಂ ಎಂದು ಬಿಂಬಿಸಲಾಗುತ್ತಿದೆ. ಆದರೆ, ಆಳದಲ್ಲಿ ಕಾಂಗ್ರೆಸ್‌ ಬಿಜೆಪಿಯ ಎ ಟೀಂ ಆಗಿದೆ. ಎಲ್ಲ ರಾಜ್ಯದಲ್ಲೂ ಬಿಜೆಪಿಗೆ ಕಾಂಗ್ರೆಸ್‌ ಶಾಸಕರೇ ಸೇರ್ಪಡೆಯಾಗುತ್ತಿದ್ದಾರೆ. ಇಡೀ ದೇಶದಲ್ಲಿ ಆಪ್‌ನ ಒಬ್ಬೇ ಒಬ್ಬ ಶಾಸಕ ಬಿಜೆಪಿ ಸೇರಿಲ್ಲ. ಗೋವಾದಲ್ಲಿ ಕಾಂಗ್ರೆಸ್‌ನ ಶಾಸಕರೇ ಸೇರಿದ್ದಾರೆ ಎಂದರು. ಮುಖಂಡರಾದ ಕಾಳಿದಾಸ, ರುದ್ರಯ್ಯ ನವಲಿ ಹಿರೇಮಠ, ಡಿ. ಶಂಕರದಾಸ ಮತ್ತಿತರರಿದ್ದರು.

click me!