ಕೆಲಸದ ಒತ್ತಡದಿಂದ ಬಳಲಿದ್ದವರು ಕುಟುಂಬಸ್ಥರು, ಸ್ನೇಹಿತರೊಂದಿಗೆ ರಿಲ್ಯಾಕ್ಸ್ ಆಗಲು ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ.
ವಸಂತಕುಮಾರ ಕತಗಾಲ
ಕಾರವಾರ(ಅ.25): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳು ಇರುವುದರಿಂದಾಗಿ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿವೆ. ಕಡಲ ತೀರಗಳಲ್ಲಿ, ಜಲಪಾತಗಳಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಿದ್ದಾರೆ. ನಾಲ್ಕನೇಯ ಶನಿವಾರ, ಭಾನುವಾರದ ರಜೆಯ ಜತೆಗೆ ದೀಪಾವಳಿ ಹಬ್ಬದ ಅಂಗವಾಗಿ ಸೋಮವಾರ ಕೂಡ ರಜೆ ಇರುವುದರಿಂದ ಸತತ ರಜೆ ಸಿಕ್ಕಂತಾಗಿದೆ. ಹೀಗಾಗಿ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಶನಿವಾರದಿಂದಲೇ ಪ್ರವಾಸಿಗರ ಆಗಮನ ಪ್ರಾರಂಭವಾಗಿದೆ. ಭಾನುವಾರ, ಸೋಮವಾರವಂತೂ ಇಲ್ಲಿನ ಕಡಲತೀರಗಳು, ಪ್ರವಾಸಿ ತಾಣಗಳು ಅಕ್ಷರಶಃ ಜನರಿಂದ ತುಂಬಿ ತುಳುಕುತ್ತಿದ್ದವು.
ಕೆಲಸದ ಒತ್ತಡದಿಂದ ಬಳಲಿದ್ದವರು ಕುಟುಂಬಸ್ಥರು, ಸ್ನೇಹಿತರೊಂದಿಗೆ ರಿಲ್ಯಾಕ್ಸ್ ಆಗಲು ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ವಿಶ್ವಪ್ರಸಿದ್ಧ ಮುರ್ಡೇಶ್ವರ, ಜೋಗ ಜಲಪಾತ, ಕರಾವಳಿಯ ಕಡಲ ತೀರಗಳು, ಜಲಪಾತಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು, ವಿವಿಧ ಜಲಸಾಹಸ ಕ್ರೀಡೆಗಳನ್ನು ಆಡುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.
PUNEETH RAJKUMAR ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವ್ ಮಾಡಿ ಗಂಧದ ಗುಡಿ ಪ್ರಚಾರ ಮಾಡಿದ ಅಭಿಮಾನಿ!
ಮುರುಡೇಶ್ವರದ ಕಡಲತೀರದಲ್ಲಿ ಸ್ಪೀಡ್ ಬೋಟ್, ಜೆಟ್ ಸ್ಕೀ, ಬೋಟಿಂಗ್ ಸೇರಿದಂತೆ ರಾಜ್ಯದ ಏಕೈಕ ಸ್ಕೂಬಾ ಡೈವಿಂಗ್ ಜಲಸಾಹಸ ಕ್ರೀಡೆ ಸಹ ಇದೆ. ಹೀಗಾಗಿ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ. ಹೊನ್ನಾವರದ ಬ್ಲೂಫ್ಲ್ಯಾಗ್ ಮಾನ್ಯತೆ ಪಡೆದ ಇಕೋ ಬೀಚ್, ಮ್ಯಾಂಗ್ರೋವ್ ಬೋರ್ಡ್ ವಾಕ್, ಗೋಕರ್ಣ ಕಡಲತೀರ, ಯಲ್ಲಾಪುರದ ಸಾತೊಡ್ಡಿ, ಮಾಗೋಡ ಜಲಪಾತ ಸೇರಿದಂತೆ ಹತ್ತು ಹಲವು ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಕಾಣಸಿಗುತ್ತಿದೆ.
ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೊಟೇಲ್, ಲಾಡ್ಜ್‌ಗಳು ಭರ್ತಿಯಾಗಿದೆ. ಕೆಲವು ಕಡೆ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದೇ ಸಮಸ್ಯೆ ಉಂಟಾಗುತ್ತಿದೆ. ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ಸಾಲು ಸಾಲು ರಜೆ ಇರುವುದರಿಂದ ಜಿಲ್ಲೆಗೆ ಪ್ರವಾಸಿಗರ ಆಗಮನ ಹೆಚ್ಚಾಗಿದೆ. ಒಟ್ಟಾರೆ ಕೋವಿಡ್ ಸೊಂಕಿನಿಂದ ಕಳೆಗುಂದಿದ್ದ ಪ್ರವಾಸಿ ಚಟುವಟಿಕೆಗಳು ಪುನಃ ಗರಿಗೆದರಿವೆ. ಪ್ರವಾಸೋದ್ಯಮದಲ್ಲಿ ಚೇತರಿಕೆ ಕಾಣುತ್ತಿದೆ.
ಸತತ ರಜೆ ಇರುವುದರಿಂದ ಉತ್ತರ ಕನ್ನಡದ ಪ್ರವಾಸಿ ತಾಣಗಳಿಗೆ ಕುಟುಂಬದೊಂದಿಗೆ ಆಗಮಿಸಿದ್ದು, ಧಾರ್ಮಿಕ ಕ್ಷೇತ್ರಗಳ ದರ್ಶನದ ಜತೆಗೆ ಪ್ರವಾಸಿ ತಾಣಗಳ ಭೇಟಿಯನ್ನೂ ಮಾಡಿದ್ದೇವೆ. ಕಡಲ ತೀರಗಳಲ್ಲಿ ಸಾಕಷ್ಟುಎಂಜಾಯ್ ಮಾಡಿದ್ದೇವೆ. ವಿಶಾಲವಾದ ಕಡಲ ತೀರ ಮನಸೂರೆಗೊಳಿಸುತ್ತಿದೆ ಅಂತ ಪ್ರವಾಸಿಗರಾದ ಹೇಮಾ ಮೋಹನ್ ತಿಳಿಸಿದ್ದಾರೆ.