ಮತ್ತೆ ಲಾಕ್‌ಡೌನ್‌ ಭಯ: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

By Kannadaprabha NewsFirst Published Jun 29, 2020, 8:59 AM IST
Highlights

ಮಾರುಕಟ್ಟೆಯಲ್ಲಿ ಹೆಚ್ಚಿದ ಗ್ರಾಹಕರ ಸಂಖ್ಯೆ| ತರಕಾರಿ, ಒಣಮೀನುಗಳ ಮಾರಾಟ ಜೋರು| ಪ್ರವಾಸಿ ತಾಣಗಳು ಆರಂಭ| ಪ್ರವಾಸಿಗರು ಮಾತ್ರ ಸುಳಿಯುತ್ತಿಲ್ಲ, ಮಳೆಗಾಲವಾದ್ದರಿಂದ ಜಲಪಾತಗಳು ಮೈದುಂಬಿಕೊಂಡಿವೆ. ಹಾಗಂತ ಜಲಪಾತಗಳ ಸೊಬಗು ಸವಿಯಲು ಜನತೆ ಬರುತ್ತಿಲ್ಲ|

ಕಾರವಾರ(ಜೂ.29): ಮತ್ತೆ ಲಾಕ್‌ಡೌನ್‌ ಆಗಲಿದೆ ಎಂಬ ಆತಂಕದಿಂದ ಜನತೆ ಭಾನುವಾರ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಲಗ್ಗೆ ಇಟ್ಟಿದ್ದರಿಂದ ವ್ಯಾಪಾರ ವಹಿವಾಟು ಹೆಚ್ಚಿತ್ತು. ನಗರದ ಎಂಜಿ ರಸ್ತೆಯಲ್ಲಿ ಲಾಕ್‌ಡೌನ್‌ ನಂತರ ಇದೆ ಮೊದಲ ಬಾರಿಗೆ ಭಾನುವಾರದ ಸಂತೆಯ ಲುಕ್‌ ಕಾಣಿಸಿತು. ತರಕಾರಿ, ಒಣಮೀನುಗಳ ಮಾರಾಟವೂ ಜೋರಾಗಿ ಕಂಡುಬಂದಿತು.

ಲಾಕ್‌ಡೌನ್‌ ಕುರಿತು ಸ್ಪಷ್ಟವಾದ ಮಾಹಿತಿ ಜನತೆಗೆ ಸಿಗದೆ ಇದ್ದುದರಿಂದ ಮತ್ತೆ ಮಾರುಕಟ್ಟೆ ಬಂದ್‌ ಆದರೆ ಅಗತ್ಯ ವಸ್ತುಗಳಿಗಾಗಿ ಪರದಾಡಬೇಕಾಗಲಿದೆ ಎಂಬ ಆತಂಕದಿಂದ ಜನತೆ ಮಾರುಕಟ್ಟೆಗೆ ದೌಡಾಯಿಸಿದ್ದರು. ಇದರಿಂದ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಜನ ಸಂಚಾರ ಹೆಚ್ಚಿತ್ತು. ವ್ಯಾಪಾರ ವಹಿವಾಟಿನಲ್ಲೂ ಹೆಚ್ಚಳ ಉಂಟಾಯಿತು.

ಭಾನುವಾರದ ಸಂತೆಗೆ ಉತ್ತರ ಕರ್ನಾಟಕದ ಬೆಳಗಾವಿ, ಹಾವೇರಿ, ಗದಗ, ಧಾರವಾಡ ಮತ್ತಿತರ ಕಡೆಗಳಿಂದ ಕಾಯಿಪಲ್ಲೆಗಳನ್ನು ತಂದು ಮಾರಾಟ ಮಾಡುತ್ತಾರೆ. ಆದರೆ, ಲಾಕ್‌ಡೌನ್‌ ಆರಂಭವಾದಾಗಿನಿಂದ ಉತ್ತರ ಕರ್ನಾಟಕದ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ. ಇದೆ ಮೊದಲ ಬಾರಿಗೆ ಭಾನುವಾರ ಹಿಂದಿನಂತೆ ಅಲ್ಲದಿದ್ದರೂ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರಸ್ಥರು ಆಗಮಿಸಿ, ಕಾಯಿಪಲ್ಲೆ ಅಂಗಡಿಗಳನ್ನು ತೆರೆದಿದ್ದರು. ಇದರಿಂದ ಎಂಜಿ ರಸ್ತೆಗೆ ಸಂತೆಯ ಲುಕ್‌ ಬಂದಿತ್ತು. ಜನರು ಕೂಡ ಸಾಕಷ್ಟುಸಂಖ್ಯೆಯಲ್ಲಿ ಆಗಮಿಸಿ, ತರಕಾರಿಗಳನ್ನು ಕೊಂಡುಕೊಳ್ಳುವಲ್ಲಿ ನಿರತರಾಗಿದ್ದರು.

ಬೈಕ್ ಕಳ್ಳತನದ ಆರೋಪಿಗೆ ಕೊರೋನಾ'; ಬೆಚ್ಚಿಬಿದ್ದ ಶಿರಸಿ

ಮಳೆಗಾಲದಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಇದರಿಂದ ಮೀನುಗಾರಿಕೆ ನಡೆಯದೆ ಮಾರುಕಟ್ಟೆಯಲ್ಲಿ ಮೀನಿನ ಅಭಾವ ತಲೆದೋರುತ್ತದೆ. ಮತ್ಸ್ಯಾಹಾರಿಗಳು ಒಣಮೀನು ಸಂಗ್ರಹ ಮಾಡಿಟ್ಟುಕೊಂಡು ಮಳೆಗಾಲದಲ್ಲಿ ಮೀನು ಸಿಗದೆ ಇದ್ದಾಗ ಬಳಸುತ್ತಾರೆ. ಲಾಕ್‌ಡೌನ್‌ ಅವಧಿಯಲ್ಲಿ ಒಣಮೀನು ಮಾರಾಟವೂ ಕಳೆಗುಂದಿತ್ತು. ಭಾನುವಾರ ಒಣಮೀನು ಮಾರಾಟ ಭರ್ಜರಿಯಾಗಿ ನಡೆಯಿತು.

ಉತ್ತರ ಕನ್ನಡ ಜಿಲ್ಲೆಯಲ್ಲೂ ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನತೆ ಸಹಜವಾಗಿ ಕಳವಳಗೊಂಡಿದ್ದಾರೆ. ಜನರು ಅಗತ್ಯ ವಸ್ತುಗಳಿಗಾಗಿ ಮಾತ್ರ ಮಾರುಕಟ್ಟೆಗೆ ಬರುತ್ತಿದ್ದಾರೆ. ತುರ್ತಾಗಿದ್ದರೆ ಮಾತ್ರ ಹೊಟೇಲ್‌ಗೆ ಹೋಗಿ ತಿಂಡಿ ತಿನ್ನುತ್ತಾರೆ. ಇದೆ ಕಾರಣಕ್ಕೆ ಹೊಟೇಲ್‌ಗಳು ಆರಂಭವಾಗಿ ಸಾಕಷ್ಟುದಿನಗಳಾದರೂ ಗ್ರಾಹಕರ ಸಂಖ್ಯೆ ಹೆಚ್ಚಾಗಲಿಲ್ಲ. ಮೊದಲಿನಂತೆ ಕುಟುಂಬ ಸಹಿತರಾಗಿ ಹೊಟೇಲ್‌ಗೆ ಹೋಗಿ ತಿಂಡಿ ತಿನ್ನಲು ಯಾರೂ ಧೈರ್ಯ ಮಾಡುತ್ತಿಲ್ಲ. ಬಸ್‌ಗಳ ಸಂಚಾರ ಆರಂಭವಾದರೂ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿಲ್ಲ.

ಪ್ರವಾಸಿ ತಾಣಗಳು ಆರಂಭಗೊಂಡಿವೆ. ಆದರೆ, ಪ್ರವಾಸಿಗರು ಮಾತ್ರ ಸುಳಿಯುತ್ತಿಲ್ಲ. ಮಳೆಗಾಲವಾದ್ದರಿಂದ ಜಲಪಾತಗಳು ಮೈದುಂಬಿಕೊಂಡಿವೆ. ಹಾಗಂತ ಜಲಪಾತಗಳ ಸೊಬಗು ಸವಿಯಲು ಜನತೆ ಬರುತ್ತಿಲ್ಲ. ಗೋಕರ್ಣ, ಮುರ್ಡೇಶ್ವರ, ಮಾರಿಕಾಂಬಾ, ಇಡಗುಂಜಿ ವಿನಾಯಕ ಹೀಗೆ ಪ್ರಮುಖ ದೇವಾಲಯಗಳೂ ಕೂಡ ಭಕ್ತರ ಬರವನ್ನು ಎದುರಿಸುತ್ತಿದೆ.

ಜನರು ದಿನಸಿ, ತರಕಾರಿ, ಮೀನು, ಮಾಂಸಗಳನ್ನು ಕೊಳ್ಳಲು ಮಾತ್ರ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಭಾನುವಾರ ನಗರದಲ್ಲಿ ಜನಸಂದಣಿ ಹೆಚ್ಚಿತ್ತು. ಆದರೆ, ಜನತೆ ಕಡ್ಡಾಯವಾಗಿ ಮಾಸ್ಕ್‌ ಧರಿಸುತ್ತಿರುವುದು ಕಂಡುಬಂತು.
ಮತ್ತೆ ಲಾಕ್‌ಡೌನ್‌ ಆಗುವ ಬಗ್ಗೆ ಮಾಹಿತಿ ಬಂದಿದೆ. ಹಾಗಾದರೆ ಅಗತ್ಯ ವಸ್ತುಗಳಿಗೆ ತೊಂದರೆ ಆದರೆ ಎಂದು ಖರೀದಿಗೆ ಮಾರುಕಟ್ಟೆಗೆ ಬಂದಿದ್ದೇನೆ ಎಂದು ಗ್ರಾಹಕ ನಾರಾಯಣ ಗೌಡ ಅವರು ಹೇಳಿದ್ದಾರೆ. 
 

click me!