ವಿಠ್ಠಲ ಬಜಾರ್‌ನಲ್ಲಿ ಕುಡಿವ ನೀರಿನ ಪೈಪ್‌ಲೈನ್ ಕಾಮಗಾರಿ| ಪರ್ಯಾಯ ಮಾರ್ಗಕ್ಕೆ ಚರಿತ್ರೆ ಪ್ರಿಯರ ಆಗ್ರಹ| ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥಬೀದಿ, ಜನತಾ ಪ್ಲಾಟ್‌ನಲ್ಲಿರುವ ವಾಣಿಜ್ಯ ಚಟುವಟಿಕೆ ಬಂದ್| ಸ್ಮಾರಕಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಪೈಪ್‌ಲೈನ್ ಕಾಮಗಾರಿ ಮಾಡುತ್ತಿರುವುದು ಸರಿಯಲ್ಲ|
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಫೆ.21): ವಿಶ್ವ ಪರಂಪರೆ ತಾಣ ಹಂಪಿಯ ವಿಜಯ ವಿಠ್ಠಲ ದೇಗುಲದ ಬಳಿ ಭಾರತೀಯ ಪುರಾತತ್ವ ಇಲಾಖೆಯೇ ನಿಯಮ ಮೀರಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳುತ್ತಿದ್ದೆ ಎಂಬ ಆರೋಪ ಕೇಳಿ ಬಂದಿದೆ.
ಹಂಪಿಯ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ 1986ರಲ್ಲೇ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಿಸಿದೆ. ಹೀಗಿದ್ದರೂ ಹಂಪಿಯ ಸ್ಮಾರಕಗಳ ಬಳಿ ಮೇಲಿಂದ ಮೇಲೆ ನಿಯಮ ಗಾಳಿಗೆ ತೂರಲಾಗುತ್ತಿದೆ. ಅಭಿವೃದ್ಧಿ ನೆಪದಲ್ಲಿ ಸ್ಮಾರಕಗಳಿಗೆ ಧಕ್ಕೆ ತರಲಾಗುತ್ತಿದೆ.
ಸ್ಮಾರಕಗಳಿಗೆ ಧಕ್ಕೆ ಆರೋಪ:
ಪ್ರವಾಸಿ ಶೌಚಾಲಯಗಳಿಗೆ ನೀರು ಪೂರೈಸಲು ಹಂಪಿಯ ವಿಜಯ ವಿಠ್ಠಲ ಬಜಾರ್‌ನಿಂದ ಪೈಪ್‌ಲೈನ್ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸ್ಮಾರಕಪ್ರಿಯರು ಆರೋಪಿಸಿದ್ದಾರೆ. ಈ ಪೈಪ್‌ಲೈನ್ ಮೇಲೆ ಈಗ ಮಣ್ಣು ಹಾಕಲಾಗುತ್ತದೆ. ಇದರಿಂದ ಬಜಾರ್‌ನ ನೈಜತೆಗೆ ಧಕ್ಕೆ ಉಂಟಾಗಲಿದೆ. ಪರ್ಯಾಯ ಮಾರ್ಗದಿಂದ ನೀರು ಪೂರೈಕೆ ಮಾಡಬೇಕಿತ್ತು. ಆದರೆ, ಬಜಾರ್ ಮಾರ್ಗದಿಂದಲೇ ಪೈಪ್‌ಲೈನ್ ಕಾಮಗಾರಿ ನಡೆಸಲಾಗುತ್ತಿದೆ ಎಂಬುದು ಇತಿಹಾಸಪ್ರಿಯರ ಅಂಬೋಣವಾಗಿದೆ.
ಹಂಪಿಯ ಸ್ಮಾರಕಗಳ ಸಹಜತೆಗೆ ಧಕ್ಕೆಯಾಗುತ್ತದೆ ಎಂದು ವಾಣಿಜ್ಯ ಚಟುವಟಿಕೆಗಳನ್ನೇ ಬಂದ್ ಮಾಡಿಸಲಾಗಿದೆ. ಜತೆಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮನೆಗಳ ನಿರ್ಮಾಣಕ್ಕೂ ಪರವಾನಗಿ ಪಡೆಯಬೇಕು. ಆದರೆ, ಹಂಪಿಯ ಸ್ಮಾರಕಗಳ ಬಳಿಯೇ ಬೋರ್‌ವೆಲ್ ಹಾಕಿ, ಸ್ಮಾರಕಗಳಿಗೆ ಧಕ್ಕೆಯಾಗುವಂತೇ ಪೈಪ್‌ಲೈನ್ ಕಾಮಗಾರಿ ನಡೆಸಲಾಗುತ್ತಿದೆ ಎಂಬುದು ಇತಿಹಾಸಪ್ರಿಯರ ಆರೋಪವಾಗಿದೆ.
ಹಂಪಿ ವಾಣಿಜ್ಯ ಚಟುವಟಿಕೆ ಸಂಪೂರ್ಣ ಬಂದ್: ಊಟ, ತಿಂಡಿ ಸಿಗದೇ ಪ್ರವಾಸಿಗರ ಪರದಾಟ
ಪ್ರವಾಸಿಗರಿಗೆ ಕುಡಿಯುವ ನೀರು:
ಹಂಪಿಯ ವಿಜಯ ವಿಠ್ಠಲ ದೇಗುಲ, ಪುರಂದರ ದಾಸರ ಮಂಟಪಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಈ ಕೆಲಸ ಮಾಡಲಾಗುತ್ತಿದೆ ಎಂಬುದು ಅಧಿಕಾರಿಗಳ ಅಂಬೋಣ. ಆದರೆ, ವಿಠ್ಠಲ ಬಜಾರ್ ಹಾಗೂ ಸುತ್ತಮುತ್ತಲ ಸ್ಮಾರಕ ಹಾಗೂ ಉತ್ಖನನ ನಡೆಯಬೇಕಾದ ಸ್ಥಳದಲ್ಲೇ ಪೈಪ್‌ಲೈನ್ ಅಳವಡಿಸುತ್ತಿರುವುದು ಸರಿಯಲ್ಲ. ಇದಕ್ಕೆ ಪರ್ಯಾಯ ಮಾರ್ಗ ಬಳಸಬೇಕಿತ್ತು.
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥಬೀದಿ, ಜನತಾ ಪ್ಲಾಟ್‌ನಲ್ಲಿರುವ ವಾಣಿಜ್ಯ ಚಟುವಟಿಕೆ ಬಂದ್ ಮಾಡಲಾಗಿದೆ. ಸ್ಮಾರಕಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಪೈಪ್‌ಲೈನ್ ಕಾಮಗಾರಿ ಮಾಡುತ್ತಿರುವುದು ಸರಿಯಲ್ಲ. ಒಂದು ಕಡೆಯಲ್ಲಿ ಸ್ಮಾರಕಗಳ ರಕ್ಷಣೆಗೆ ಒತ್ತು ನೀಡುವ ಇಲಾಖೆಗಳೇ ಸ್ಮಾರಕಗಳ ಹಿತ ಕಾಯದೇ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡುತ್ತಿರುವುದು ಸರಿಯಲ್ಲ ಎಂಬುದು ಸ್ಮಾರಕಗಳ ಪ್ರಿಯರ ದೂರಾಗಿದೆ.
ಹಂಪಿಯ ವಿಠ್ಠಲ ಬಜಾರ್‌ನಲ್ಲಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗಿದ್ದು, ಸ್ಮಾರಕಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಕಾಮಗಾರಿ ನಡೆಸಲಾಗಿದೆ. ಈ ಕಾಮಗಾರಿಯನ್ನು ಸ್ಮಾರಕಗಳ ಸಹಜತೆಗೆ ಧಕ್ಕೆಯಾಗದಂತೆ ಪರ್ಯಾಯ ಮಾರ್ಗ ಬಳಸಿ ಕೈಗೊಳ್ಳಬಹುದಿತ್ತು. ಜತೆಗೆ ಪರ್ಯಾಯ ಕ್ರಮಗಳನ್ನು ಅನುಸರಿಸಬಹುದಿತ್ತು ಎಂದು ಕಮಲಾಪುರದ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣೆ ಸೇನೆ ಅಧ್ಯಕ್ಷ ಡಾ. ವಿಶ್ವನಾಥ ಮಾಳಗಿ ಹೇಳಿದ್ದಾರೆ.
ವಿಜಯ ವಿಠ್ಠಲ ಬಜಾರ್ ಬಳಿ ಹಾಕಲಾಗಿರುವ ಬೋರ್‌ವೆಲ್‌ನಿಂದ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಯಾವುದೇ ರೀತಿಯ ಸ್ಮಾರಕ ದಕ್ಕೆಮಾಡುವ ಉದ್ದೇಶ ಹೊಂದಿಲ್ಲ. ಸ್ಮಾರಕಗಳಿಗೆ ದಕ್ಕೆಯಾಗದಂತೆ ಪೈಪ್‌ಲೈನ್ ಅಳವಡಿಸಲಾಗುವುದು ಎಂದು ಪುರಾತತ್ವ ಇಲಾಖೆಯ ಅಧಿಕಾರಿ ಕಾಳಿಮುತ್ತು ತಿಳಿಸಿದ್ದಾರೆ.