'ಮೋದಿ ಸರ್ಕಾರದ ವಿರುದ್ಧ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ'

Kannadaprabha News   | Asianet News
Published : Feb 21, 2021, 03:19 PM IST
'ಮೋದಿ ಸರ್ಕಾರದ ವಿರುದ್ಧ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ'

ಸಾರಾಂಶ

ದೇಶ ಹಾಗೂ ರಾಜ್ಯದಲ್ಲಿ ರೈತ, ಕಾರ್ಮಿಕ, ಜನತೆಯ ಹಿತ ಕಾಯುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರಗಳಿಗೆ ಜನತೆ ತಕ್ಕಪಾಠ ಕಲಿಸಲು ಚುನಾವಣೆಗೆ ಕಾಯುತ್ತಿದ್ದಾರೆ: ವಿ.ಎಸ್‌. ಉಗ್ರಪ್ಪ

ಗಜೇಂದ್ರಗಡ(ಫೆ.21):  ಬಹುರಾಷ್ಟ್ರೀಯ ಕಂಪನಿಗಳ ಹಿತಕಾಯುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರೈತರ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯಲು ಮುಂದಾಗಿದ್ದಾರೆ. ಹೀಗಾಗಿ ರೈತರ ಉಳಿವಿಗಾಗಿ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ನಡೆಯಲಿದೆ ಎಂದು ವಿಪ ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ ಹೇಳಿದ್ದಾರೆ. 

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ನರೇಗಲ್‌ ಬ್ಲಾಕ್‌ ಕಾಂಗ್ರೆಸ್‌ ಹಾಗೂ ಗಜೇಂದ್ರಗಡ ಬ್ಲಾಕ್‌ ಕಾಂಗ್ರೆಸ್‌ನಿಂದ ಪಟ್ಟಣದಲ್ಲಿ ಶನಿವಾರ ನಡೆದ ರೈತರಿಂದ ಬೃಹತ್‌ ಟ್ರ್ಯಾಕ್ಟರ್‌ ರಾರ‍ಯಲಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮದು ಕೃಷಿ ಪ್ರಧಾನ ದೇಶ. ಆದರೆ ಪ್ರಧಾನಿ ಮೋದಿ ಅಂಬಾನಿ ಹಾಗೂ ಅದಾನಿಗಳಿಗೆ ಈ ದೇಶವನ್ನು ಮಾರಲು ಹೊರಟಿರುವುದನ್ನು ಮನಗಂಡು ಈಗಾಗಲೇ ದೆಹಲಿಯಲ್ಲಿ ಅಪಾರಸಂಖ್ಯೆಯ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದ ಕೇಂದ್ರ ಸರ್ಕಾರದ ಜಂಗಾಬಲ ಕುಸಿಯುತ್ತಿದೆ. ಈ ಹಿಂದೆ ದೇಶದಲ್ಲಿ ಬ್ರಿಟಿಷರ ಆಡಳಿತ ಅವಧಿಯಲ್ಲಿ ಜನತೆಗೆ ಹೋರಾಟ ಮಾಡಲು ಅವಕಾಶವಿತ್ತು. ಆದರೆ ಇಂದು ದೇಶಕ್ಕೆ ಅನ್ನ ನೀಡುವ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಾರದು ಎಂದು ಮೋದಿ ಸರ್ಕಾರ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಗೂ ಮೊಳೆಗಳನ್ನು ಬಡೆಯುತ್ತಿದೆ. ಇಂತಹ ಕೆಟ್ಟಬಿಜೆಪಿ ಸರ್ಕಾರ ಕಿತ್ತೊಗೆಯಲು ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಆರಂಭಕ್ಕೆ ಜನತೆ ಮುಂದಾಗಬೇಕಿದೆ ಎಂದರು.

ಗಜೇಂದ್ರಗಡ: ಹೆತ್ತ ಮಗುವನ್ನೇ ಕೊಂದ ಪಾಪಿ ತಂದೆಗೆ ಮರಣದಂಡನೆ ಶಿಕ್ಷೆ

ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಮಾತನಾಡಿ, ದೇಶದ ಜನತೆಗೆ ಉದ್ಯೋಗ ಸೃಷ್ಟಿ, ರೈತರ ಸಾಲಮನ್ನಾ, ಕಪ್ಪು ಹಣ ವಾಪಸ್‌ ತರುತ್ತೇನೆ ಎಂದು ಭರವಸೆ ನೀಡಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದಿದೆ. ಆದರೆ ಇಂದು ಆರ್ಥಿಕತೆ, ಕೃಷಿ, ಉದ್ಯೋಗ ಸೇರಿ ಇತರ ಕ್ಷೇತ್ರಗಳು ಭಸ್ಮ ಮಾಡುತ್ತಿರುವ ಮೋದಿ ಆಧುನಿಕ ಭಸ್ಮಾಸುರ ಎಂದು ಕಿಡಿಕಾರಿದರು.

ನಾನು ತಿನ್ನುವದಿಲ್ಲ, ತಿನ್ನಲು ಬಿಡುವದಿಲ್ಲ ಎನ್ನುವ ಜತೆಗೆ ಭ್ರಷ್ಟಾಚಾರ ಮುಕ್ತಗೊಳಿಸುವ ಮಾತನ್ನು ಆಡುವ ಮೋದಿ ಮುಖ್ಯಮಂತ್ರಿ ಯಡಿ​ಯೂ​ರಪ್ಪ ಚೆಕ್‌ ಮೂಲಕ ಲಂಚ ಪಡೆದ ಪ್ರಕರಣ ಕುರಿತು ಸಿಟ್ಟಿಂಗ್‌ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಿಂದ ತನಿಖೆಗೆ ಮುಂದಾಗಲಿ. ತಪ್ಪು ಸಾಬೀತಾಗದಿದ್ದರೆ ಯಡಿಯೂರಪ್ಪ ಅವರ ಮನೆ ಆಳಾಗಿ ಕೆಲಸ ಮಾಡುವುದಾಗಿ ಸವಾಲು ಹಾಕಿದ ಅವರು, ದೇಶ ಹಾಗೂ ರಾಜ್ಯದಲ್ಲಿ ರೈತ, ಕಾರ್ಮಿಕ, ಜನತೆಯ ಹಿತ ಕಾಯುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರಗಳಿಗೆ ಜನತೆ ತಕ್ಕಪಾಠ ಕಲಿಸಲು ಚುನಾವಣೆಗೆ ಕಾಯುತ್ತಿದ್ದಾರೆ ಎಂದರು.

ಮಾಜಿ ಶಾಸಕ ಡಿ.ಆರ್‌. ಪಾಟೀಲ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌. ಪಾಟೀಲ ಮಾತನಾಡಿದರು. ಈ ವೇಳೆ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಜಿಪಂ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ತಾಪಂ ಉಪಾಧ್ಯಕ್ಷ ಶಶಿಧರ ಹೂಗಾರ, ವೀರಣ್ಣ ಶೆಟ್ಟರ, ಅಶೋಕ ಮುಂದಾಲಿ, ಬಸವರಾಜ ಶೀಲವಂತರ, ಎಚ್‌.ಎಸ್‌. ಸೋಂಪುರ, ಅರ್ಜುನ ರಾಠೋಡ, ಬಸವರಾಜ ಬಂಕದ, ಶರಣಪ್ಪ ಚಳಗೇರಿ, ಅಂದಪ್ಪ ಬಿಚ್ಚೂರ, ವಿ.ಬಿ. ಸೋಮನಕಟ್ಟಿ ಇದ್ದರು.
 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ