ಬದಲಾಗುತ್ತಾ ಜಿಲ್ಲೆ ಹೆಸರು.. ? ಬದಲಾವಣೆಗೆ ಭಾರೀ ವಿರೋಧ

By Kannadaprabha News  |  First Published Sep 3, 2020, 3:25 PM IST

ಜಿಲ್ಲೆಯ ಹೆಸರು ಬದಲಾವಣೆಯ ಪ್ರಸ್ತಾಪವಾಗುತ್ತಿದ್ದು,ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಹೆಸರು ಬದಲಾಯಿಸಲು ಅಸಮ್ಮತಿ ಸೂಚಿಸಲಾಗುತ್ತಿದೆ.


 ದೊಡ್ಡಬಳ್ಳಾಪುರ (ಸೆ.03):  ಬೆಂಗಳೂರು ನಗರದ ಸುತ್ತಲಿನ ತಾಲೂಕುಗಳು ಬೆಂಗಳೂರಿನ ಒಂದು ಭಾಗವಾಗಿ ಬೆರೆತು ಹೋಗಿವೆ. ಹೀಗಾಗಿಯೇ ಹೊರವಲಯದ ನಾಲ್ಕು ತಾಲೂಕುಗಳನ್ನು ಒಳಗೊಂಡ ಜಿಲ್ಲೆಗೆ ಬೆಂಗಳೂರು ಗ್ರಾಮಾಂತರ ಎನ್ನುವ ಹೆಸರನ್ನು ನಮ್ಮ ಹಿರಿಯರು ನಾಮಕರಣ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಜಿಲ್ಲೆಯ ಹೆಸರನ್ನು ಒಂದು ತಾಲೂಕಿನ ಹೆಸರಿನಿಂದ ಗುರುತಿಸಿ ಕರೆಯುವುದಕ್ಕೆ ನಮ್ಮ ತೀವ್ರ ವಿರೋಧ ಇದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಅಪ್ಪಯ್ಯಣ್ಣ ಹೇಳಿದ್ದಾರೆ.

ಸಾಮರಸ್ಯ ಕದಡಬೇಡಿ: ಅವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ, ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಕೆಲವರ ಒತ್ತಾಯಗಳಿಗೆ ಮಣಿದು ಜಿಲ್ಲೆಯ ಹೆಸರು ಬದಲಾವಣೆ ಪ್ರಸ್ತಾಪ ಮಾಡಿರಬಹುದು. ಆದರೆ ಅವರು ದೊಡ್ಡಬಳ್ಳಾಪುರ ತಾಲೂಕಿನ ಒಂದು ಇಡೀ ಹೋಬಳಿಯನ್ನು ಪ್ರತಿನಿಧಿಸುತ್ತಾರೆ. ಈ ಹಂತದಲ್ಲಿ ಯಾವುದೇ ರಾಜಿ ಇಲ್ಲ. ನಮಗೆ ದೊಡ್ಡಬಳ್ಳಾಪುರ ತಾಲೂಕಿನ ಹಿತ ಮುಖ್ಯ. ಈ ಬಗ್ಗೆ ಶಾಸಕರೊಂದಿಗೂ ಚರ್ಚಿಸಲಾಗುವುದು. ಈ ಬಗೆಯ ಆತುರದ ಹೇಳಿಕೆ, ನಿರ್ಧಾರಗಳಿಂದ ಸಾಮರಸ್ಯ ಕದಡುವ ಪ್ರಯತ್ನ ಸಲ್ಲದು ಎಂದರು.

Latest Videos

undefined

ಡಿಕೆ ಸಹೋದರರ ನಾಡಲ್ಲೇ ಶೀಘ್ರ ಚುನಾವಣೆ : ಡೇಟ್ ಫಿಕ್ಸ್ ...

ಸಾರಿಗೆ ವ್ಯವಸ್ಥೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಜನರಿಗೆ ಮಧ್ಯಭಾಗದಲ್ಲಿ ಇರಲಿ ಎನ್ನುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯನ್ನು ದೊಡ್ಡಬಳ್ಳಾಪುರ-ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ ಸಮೀಪದ ಚಪ್ಪರದಕಲ್ಲೆ ಗ್ರಾಮದಲ್ಲಿ ನಿರ್ಮಿಸಲು ಒಪ್ಪಿಗೆ ನೀಡಲಾಯಿತು. ಇದನ್ನು ದುರುಪಯೋಗ ಮಾಡಿಕೊಂಡು ಈಗ ಜಿಲ್ಲೆಯ ಹೆಸರನ್ನೇ ಬದಲಾವಣೆ ಮಾಡುವುದು ಸರಿಯಾದ ಕ್ರಮ ಅಲ್ಲ. ದಶಕಗಳಿಂದಲೂ ಉಳಿದು ಬಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎನ್ನುವ ಹೆಸರೇ ಮುಂದುವರೆಯಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

click me!