ಸಿದ್ದಾಪುರ ವಡ್ಡರಹಟ್ಟಿಯಲ್ಲಿ 15 ಟೆಂಪೋಗಳಲ್ಲಿ ಬದಕು ಅರಸಿ ಹೊರಟ ಕುಟುಂಬಗಳು|ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಇತರೆ ಯೋಜನೆಗಳ ಮೂಲಕ ತಾಲೂಕಿನ ಜನತೆಗೆ ಉದ್ಯೋಗ ನೀಡಬೇಕಾಗಿದೆ|
ಕೂಡ್ಲಿಗಿ(ಫೆ.01): ತಾಲೂಕಿನ ಹೊಸಹಳ್ಳಿ ಸಮೀಪದ ಸಿದ್ದಾಪುರ ವಡ್ಡರಹಟ್ಟಿ ಗ್ರಾಮದ 60ಕ್ಕೂ ಹೆಚ್ಚು ಕುಟುಂಬಗಳು 15ಕ್ಕೂ ಹೆಚ್ಚು ಟೆಂಪೋ ಹಾಗೂ ಟಾಟಾ ಏಸ್ ವಾಹನಗಳಲ್ಲಿ ಶಿವಮೊಗ್ಗ ತೀರ್ಥಹಳ್ಳಿ ಕಡೆಗೆ ಕೂಲಿ ಅರಸಿ ಪಯಣ ಬೆಳೆಸಿದ್ದಾರೆ. ಗುರುವಾರ ರಾತ್ರೋ ರಾತ್ರಿ ದುಡಿಯುವ ಜನತೆ ಖಾಲಿಯಾಗಿದ್ದು, ಗ್ರಾಮಗಳಲ್ಲಿ ಕೇವಲ ವೃದ್ಧರು, ಮಕ್ಕಳು ಮಾತ್ರ ಇದ್ದಾರೆ.
ಕೂಡ್ಲಿಗಿ ತಾಲೂಕಿನಲ್ಲಿ ಬೇಸಿಗೆ ಬಂತೆಂದರೆ ಸಾಕು, ಗುಳೆ ಹೋಗುವುದು ಸಾಮಾನ್ಯ. ಮೊದ ಮೊದಲು ಲಂಬಾಣಿ ತಾಂಡಗಳಿಗಷ್ಟೇ ಮೀಸಲಾಗಿದ್ದ ಗುಳೇ, ಈಗ ಇತರೆ ಜನತೆಯೂ ಗುಳೆ ಹೋಗಲು ಶುರು ಮಾಡಿದ್ದಾರೆ. ನಿರಂತರ ಬರದಿಂದ ಜನತೆ ಕಂಗಾಲಾಗಿದ್ದು ಜೀವನ ನಡೆಸಲು ಕಷ್ಟವಾಗುತ್ತಿದೆ. ಹೀಗಾಗಿ ದುಡಿಯಲು ಮಲೆನಾಡಿಗೆ ಹೋಗುತ್ತಿದ್ದು ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಇತರೆ ಯೋಜನೆಗಳ ಮೂಲಕ ತಾಲೂಕಿನ ಜನತೆಗೆ ಉದ್ಯೋಗ ನೀಡಬೇಕಾಗಿದೆ. ಇಲ್ಲದಿದ್ದರೆ ಸಿದ್ದಾಪುರ ವಡ್ಡರಹಟ್ಟಿಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿಗಳ ಜನತೆ ದುಡಿಯಲು ಗುಳೇ ಹೋಗುವುದರಲ್ಲಿ ಆಶ್ಚರ್ಯವಿಲ್ಲ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಾಲೂಕಿನಲ್ಲಿ ಈಗಾಗಲೇ ಸಹಸ್ರಾರು ಕುಟುಂಬಗಳು ಮಲೆನಾಡಿಗೆ ದುಡಿಯಲು ಹೋಗುತ್ತಿದ್ದು, ಕೂಡ್ಲಿಗಿಯಿಂದ ಹೊರಡುವ ಹೊಸಪೇಟೆ ಮೈಸೂರು ಹಾಗೂ ಹೊಸಪೇಟೆ ಧರ್ಮಸ್ಥಳ ರಾತ್ರಿ ಬಸ್‌ಗಳಿಗೆ ಪ್ರತಿ ದಿನ ಗುಳೇ ಹೋಗುವವರು ಬರುವವರು ಮಾಮೂಲಿ ಆಗಿದೆ. ತಾಲೂಕು ಆಡಳಿತ, ಸ್ಥಳೀಯ ಆಡಳಿತ ತಾಲೂಕಿನ ಗ್ರಾಮೀಣ ಭಾಗದ ಜನತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಿ ಗುಳೇ ಹೋಗದೇ ಹಾಗೇ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ.
ನಮ್ಮೂರಲ್ಲಿ ನಮಗೆ ಮಾಡೋಕೆ ಕೆಲ್ಸ ಇಲ್ಲ. ಮನೆ ತುಂಬಾ ಮಕ್ಕಳು ಜೀವನ ಮಾಡೋದು ಕಷ್ಟಆಗೈತಿ ಈಗ ಮೂರ್ನಾಲ್ಕು ವರ್ಷ ಸರಿಯಾಗಿ ಮಳೆಯಾಗಿಲ್ಲ ಬೆಳೆಯಿಲ್ಲ. ಹಿಂಗಾದ್ರೆ ನಾವು ಹೇಗೇ ಜೀವನ ಮಾಡೋದು? ನಮ್ಮ ಗೋಳು ಕೇಳೋರಿಲ್ಲ. ಹೀಗಾಗಿ ಮಲೆನಾಡು ಕಡೆಗೆ ದುಡಿಯೋಕೆ ಹೋಗ್ತಾ ಇದೀವಿ ಎಂದು ರೈತ ವೆಂಕಟೇಶ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಕೂಡ್ಲಿಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣ ಅವರು, ಕೂಡ್ಲಿಗಿ ತಾಲೂಕಿನಲ್ಲಿ ರೈತರಿಗೆ ಬರ ಇರುವ ಸಂದರ್ಭದಲ್ಲಿ ಉದ್ಯೋಗ ಖಾತ್ರಿಯಡಿ ಕೆಲಸ ಕೇಳಿದರೆ ನಾವು ಕೊಡುತ್ತೇವೆ. ಲಂಬಾಣಿ ತಾಂಡಾಗಳಲ್ಲಿ ನಿರಂತರವಾಗಿ ಗುಳೇ ಹೋಗುವ ಸಂಪ್ರದಾಯ ಇದೆ. ಆದರೆ ಉಳಿದ ಹಳ್ಳಿಗಳಲ್ಲಿ ಗುಳೇ ಹೋಗುವುದು ಅಪರೂಪ. ಸಿದ್ದಾಪುರ ವಡ್ಡರಹಟ್ಟಿಯಲ್ಲಿ ಗುಳೇ ಹೋಗಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪಿಡಿಒಯಿಂದ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.