ನರಗುಂದದಲ್ಲಿ ಹೆಚ್ಚುತ್ತಿರುವ ಅಂತರ್ಜಲ: ನಿಲ್ಲದ ಭೂಕುಸಿತ

By Kannadaprabha News  |  First Published Jun 27, 2020, 8:58 AM IST

ಪದೇ ಪದೇ ಕುಸಿತಗೊಳ್ಳುತ್ತಿರುವ ಮನೆಗಳು| ತಜ್ಞರ ವರದಿಗಾಗಿ ಕಾಯುತ್ತಿರುವ ಪುರಸಭೆ ಅಧಿಕಾರಿಗಳು| 2019ನೇ ಸಾಲಿನಲ್ಲಿ ಹೆಚ್ಚು ಮಳೆ ಸುರಿದಿದ್ದರಿಂದ ಪಟ್ಟಣದಲ್ಲಿ ಈ ವರೆಗೆ 43 ಮನೆಗಳಲ್ಲಿ ಭೂ ಕುಸಿತವಾಗಿದೆ ಮತ್ತು ದಂಡಾಪುರ, ಲೋದಿ ಗಲ್ಲಿ, ದೇಸಾಯಿಬಾವಿ ಓಣಿ, ಅಂಬೇಡ್ಕರ್‌ ನಗರ ಸೇರಿದಂತೆ ಮುಂತಾದ ಕಡೆಯ ಮನೆ, ರಸ್ತೆ, ಪಾಳುಬಿದ್ದ ಹಗೆಗಳಲ್ಲಿ ಅಂತರ್ಜಲ ಹೆಚ್ಚಾಗಿ ಭೂ ಕುಸಿತಗೊಂಡಿವೆ|


ಎಸ್‌.ಜಿ. ತೆಗ್ಗಿನಮನಿ

ನರಗುಂದ(ಜೂ. 27): ಪಟ್ಟಣದಲ್ಲಿ ದಿನೇ ದಿನೇ ಅಂತರ್ಜಲ ಹೆಚ್ಚಾಗಿ ಮನೆಗಳು ಮತ್ತು ಹಗೆಗಳು ಕುಸಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನತೆ ಜೀವಭಯದಲ್ಲಿಯೇ ಕಾಲ ಕಳೆಯುವಂತಹ ಪರಿಸ್ಥಿತಿ ಎದುರಾಗಿದ್ದು, ಇದಕ್ಕೆ ಕೊನೆಯೇ ಇಲ್ಲವೇ? ಇರುವ ಸಂಕಷ್ಟಕ್ಕೆ ಪರಿಹಾರ ಯಾವಾಗ? ಎಂದು ಕನವರಿಸುತ್ತಿದ್ದಾರೆ.

Latest Videos

undefined

2019ರ ಆಗಸ್ಟ್‌ನಲ್ಲಿ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಾಗಿನಿಂದ ಪಟ್ಟಣದ ದಂಡಾಪುರ ಓಣಿಯ ರಾಜು ರೋಖಡೆ ಅವರ ಕೆಳಮನೆಯಲ್ಲಿ ನೀರು ತುಂಬಿತ್ತು. ಈ ಮನೆ ಮಾಲೀಕರು ಪ್ರತಿ 2 ದಿನಗಳಿಗೊಂದು ಬಾರಿ ಪಂಪ್‌ಸೆಟ್‌ನ ಮೂಲಕ ನೀರನ್ನು ಹೊರಹಾಕಿದರೂ ನಿಲ್ಲದ ಅಂತರ್ಜಲಕ್ಕೆ ನಲುಗಿ ಹೋಗಿದ್ದು, ಪದೇ ಪದೇ ಈ ರೀತಿಯ ಘಟನೆಯಿಂದಾಗಿ ಮನೆಯ ಮಾಲೀಕರು ಮನೆಯೊಳಗೆ ಬರುವ ಅಂತರ್ಜಲದ ನೀರನ್ನು ಹೊರಹಾಕುವುದೇ ಒಂದು ಪ್ರಮುಖ ಕಾಯಕವಾಗಿದೆ.

ನರಗುಂದದಲ್ಲಿ ನಿಲ್ಲದ ಭೂಕುಸಿತ: ಗುಂಡಿಯಲ್ಲಿ ಸಿಲುಕಿದ್ದ ಎತ್ತು

ನಿಲ್ಲದ ಕುಸಿತ:

2007, 2009, 2019ನೇ ಸಾಲಿನಲ್ಲಿ ಈ ಪಟ್ಟಣದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆದಾಗಿನಿಂದ ಈ ರೀತಿ ಮನೆ, ರಸ್ತೆಯಲ್ಲಿರುವ ಹಗೆಗಳು ಕುಸಿತವಾಗುತ್ತಿರುವುದರಿಂದಾಗಿ ಪಟ್ಟಣದಲ್ಲಿ ವಾಸಿಸುವ ಜನರು ಯಾವಾಗ ನಮ್ಮ ಮನೆಯು ಈ ಅಂತರ್ಜಲಕ್ಕೆ ತುತ್ತಾಗುತ್ತದೆ ಎಂಬ ಭಯದಲ್ಲಿಯೇ ಜೀವನ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಈಗಾಗಲೇ ಹಲವಾರು ರೀತಿಯ ಸಮೀಕ್ಷೆ, ತನಿಖೆಗಳನ್ನು ನಡೆಸಿದರೂ ಯಾವ ಕಾರಣಕ್ಕಾಗಿ ಭೂ ಕುಸಿತವಾಗುತ್ತಿದೆ ಎನ್ನುವುದು ಮಾತ್ರ ಇಂದಿಗೂ ಸ್ಪಷ್ಟ ಉತ್ತರ ದೊರಕಿಲ್ಲ.

2019ನೇ ಸಾಲಿನಲ್ಲಿ ಹೆಚ್ಚು ಮಳೆ ಸುರಿದಿದ್ದರಿಂದ ಪಟ್ಟಣದಲ್ಲಿ ಈ ವರೆಗೆ 43 ಮನೆಗಳಲ್ಲಿ ಭೂ ಕುಸಿತವಾಗಿದೆ ಮತ್ತು ದಂಡಾಪುರ, ಲೋದಿ ಗಲ್ಲಿ, ದೇಸಾಯಿಬಾವಿ ಓಣಿ, ಅಂಬೇಡ್ಕರ್‌ ನಗರ ಸೇರಿದಂತೆ ಮುಂತಾದ ಕಡೆಯ ಮನೆ, ರಸ್ತೆ, ಪಾಳುಬಿದ್ದ ಹಗೆಗಳಲ್ಲಿ ಅಂತರ್ಜಲ ಹೆಚ್ಚಾಗಿ ಭೂ ಕುಸಿತಗೊಂಡಿವೆ.

ನರಗುಂದದಲ್ಲಿ ಮತ್ತೆ ಭೂಕುಸಿತ, ಗುಂಡಿಯಲ್ಲಿ ಸಿಲುಕಿದ ಮಹಿಳೆ

ಕೆರೆಯ ನೀರನ್ನೇ ಹೊರಕ್ಕೆ:

ಪಟ್ಟಣದಲ್ಲಿ ಪದೇ ಪದೇ ಸಮಸ್ಯೆ ತಂದೊಡ್ಡುತ್ತಿರುವ ಅಂತರ್ಜಲ ಕುಸಿತಕ್ಕೆ ಕೆಂಪಕೆರೆಯಲ್ಲಿರುವ ನೀರೇ ಕಾರಣವಾಗಿದ್ದು, ಇದನ್ನು ಸಂಪೂರ್ಣವಾಗಿ ಖಾಲಿಗೊಳಿಸುವಂತೆ ಭೂ ತಜ್ಞರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಈ ಕೆರೆಯ ನೀರನ್ನು ಸಂಪೂರ್ಣವಾಗಿ ಹೊರಹಾಕಿದರೂ ಈ ಅಂತರ್ಜಲ ಸಮಸ್ಯೆ ಕಡಿಮೆಯಾಗದೇ ಇರುವುದು ಪಟ್ಟಣದಲ್ಲಿನ ಜನತೆಯಲ್ಲಿ ಭಯಕ್ಕೆ ಕಾರಣವಾಗಿದೆ.

ಕಳೆದ 10 ತಿಂಗಳಿಂದ ನಮ್ಮ ನೆಲ ಮನೆಯಲ್ಲಿ ಪ್ರತಿ 2 ದಿನಗಳಿಗೊಮ್ಮೆ ಅಂತರ್ಜಲ ಸಂಗ್ರಹವಾಗುತ್ತಿದೆ. ಇದನ್ನು ಪಂಪ್‌ಸೆಟ್‌ ಮೂಲಕ ಹೊರ ಹಾಕಿ ನಮಗೆ ಸಾಕಾಗಿ ಹೋಗಿದೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಆದಷ್ಟು ಬೇಗನೇ ಅಂತರ್ಜಲಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಂಡು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ದಂಡಾಪುರ ಓಣಿಯ ನಿವಾಸಿ ರಾಜು ರೋಖಡೆ ಅವರು ಹೇಳಿದ್ದಾರೆ. 

ಇದೇ ವರ್ಷ ಮೂರು ಬಾರಿ ಭೂ ವಿಜ್ಞಾನಿಗಳು ಭೇಟಿ ನೀಡಿ ಅಂತರ್ಜಲ ಪ್ರದೇಶಗಳ ಅಧ್ಯಯನ ಮಾಡಿ ಹೋಗಿದ್ದಾರೆ. ಅವರ ವರದಿ ಬಂದ ತಕ್ಷಣವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಅವರು ಹೇಳಿದ್ದಾರೆ. 
 

click me!