ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನಿರ್ಮಾಣವಾಗುವ ಇಂತಹ ಸ್ಥಿತಿಯಿಂದ ಜನರನ್ನು ಹೊರ ತರಬೇಕೆಂಬ ದೃಷ್ಟಿಯಿಂದಲೇ ಇಲ್ಲಿ 29 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು 2019 ರ ಜನವರಿ ತಿಂಗಳಲ್ಲಿಯೇ ಚಾಲನೆ ನೀಡಲಾಗಿತ್ತು.
ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಮೇ.20): ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಯಿತ್ತೆಂದರೆ ಸಮಸ್ಯೆಗಳ ಸರಮಾಲೆ ಸುರುಳಿಯಂತೆ ಬಿಚ್ಚಿಕೊಳ್ಳುತ್ತವೆ. ಒಂದೆರಡು ದಿನ ನಿರಂತರವಾಗಿ ಮಳೆ ಸುರಿಯಿತ್ತೆಂದರೆ ಕೊಡಗಿನ ಪುಣ್ಯಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮ ಮೊದಲು ಮುಳುಗಡೆ ಆಗಿಬಿಡುವುದು ಗೊತ್ತೇ ಇದೆ.
undefined
ಇದು ಕಳೆದ ನಾಲ್ಕು ವರ್ಷಗಳಿಂದ ತೀರಾ ಸಾಮಾನ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಯಿತ್ತೆಂದರೆ ತಲಕಾವೇರಿ ಭಾಗದಲ್ಲಿ ಇರುವ ಚೇರಂಗಾಲ, ಕೋಳಿಕಾಡು, ತಲಕಾವೇರಿ ಹಾಗೆಯೇ ಭಾಗಮಂಡಲದಿಂದ ನಾಪೋಕ್ಲಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಇರುವ ಕೋರಂಗಾಲ, ಅಯ್ಯಂಗೇರಿ, ದೊಡ್ಡಪುಲಿಕೋಟು ಸೇರಿದಂತೆ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಳ್ಳುತ್ತವೆ. ಈ ಗ್ರಾಮಗಳ ಸಾವಿರಾರು ಕುಟುಂಬಗಳು ಓಡಾಡಲು ಸಾಧ್ಯವೇ ಇಲ್ಲದೆ ಪರದಾಡುತ್ತಾರೆ.
ಕೊಡಗು: ವನ್ಯಜೀವಿ - ಮಾನವ ಸಂಘರ್ಷಕ್ಕೆ ಸಿಕ್ಕೀತೆ ಶಾಶ್ವತ ಪರಿಹಾರ?
ಮೇಲ್ಸೇತುವೆ ನಿರ್ಮಾಣಕ್ಕೆ 2019 ರಲ್ಲೇ ಚಾಲನೆ
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನಿರ್ಮಾಣವಾಗುವ ಇಂತಹ ಸ್ಥಿತಿಯಿಂದ ಜನರನ್ನು ಹೊರ ತರಬೇಕೆಂಬ ದೃಷ್ಟಿಯಿಂದಲೇ ಇಲ್ಲಿ 29 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು 2019 ರ ಜನವರಿ ತಿಂಗಳಲ್ಲಿಯೇ ಚಾಲನೆ ನೀಡಲಾಗಿತ್ತು. 2022 ರ ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜನರ ಬಳಕೆಗೆ ಮುಕ್ತಗೊಳಿಸುವುದಾಗಿ ಹೇಳಲಾಗಿತ್ತು. ಆದರೆ ಇದೀಗ ಕಾಮಗಾರಿಯ ಅವಧಿ ಮುಗಿದು ಆರು ತಿಂಗಳಾದರೂ ಮೇಲ್ಸೇತುವೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಮಡಿಕೇರಿ ರಸ್ತೆಯಿಂದ ತಲಕಾವೇರಿ, ನಾಪೋಕ್ಲು ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮೇಲ್ಸೇತುವೆ ನಿರ್ಮಿಸಿದ್ದರೂ ಮುಖ್ಯವಾಗಿ ಅವುಗಳ ಆರಂಭಿಕ ಜಾಗದಲ್ಲಿ ನಿರ್ಮಿಸಬೇಕಾಗಿದ್ದ ರ್ಯಾಂಪ್‌ಗಳ ಕಾಮಗಾರಿಯನ್ನು ಮಾಡಿಯೇ ಇಲ್ಲ. ರ್ಯಾಂಪ್ ನಿರ್ಮಾಣ ಕಾಮಗಾರಿಗೆ ಟೆಂಡರ್ ಮಾಡಿ ಐದು ತಿಂಗಳಾದರೂ ಇಂದಿಗೂ ಕೆಲಸ ಆರಂಭಿಸಿಲ್ಲ. ರ್ಯಾಂಪ್ಗಳನ್ನು ನಿರ್ಮಿಸದೇ ಇರುವುದರಿಂದ ಮೇಲ್ಸೇತುವೆಯ ಮೇಲ್ಭಾಗಕ್ಕೆ ಯಾವುದೇ ವಾಹನಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಮೇಲ್ಸೇತುವೆಯ ಮೇಲ್ಭಾಗದಲ್ಲಿ ಟಾರಿಂಗ್ ಕೂಡ ಮಾಡಲಾಗಿಲ್ಲ. ಜೊತೆಗೆ ಮೇಲ್ಸೇತುವೆ ಮೇಲ್ಭಾಗದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಬೇಕಾಗಿದ್ದು ಅದೂ ಕೂಡ ಬಾಕಿ ಉಳಿದಿದೆ.
ಒಟ್ಟಿನಲ್ಲಿ ಪ್ರತೀ ಮಳೆಗಾಲದ ಸಂದರ್ಭದಲ್ಲಿ ಹತ್ತಾರು ಹಳ್ಳಿಗಳ ಸಾವಿರಾರು ಕುಟುಂಬಗಳಿಗೆ ಎದುರಾಗುತ್ತಿದ್ದ ಸಂಕಷ್ಟ ತಪ್ಪಿಸಲು ಮೇಲ್ಸೇತುವೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕಾಮಗಾರಿ ಆರಂಭವಾಗಿ ನಾಲ್ಕುವರೆ ವರ್ಷ ಕಳೆದರು ಈ ಬಾರಿಯ ಮಳೆಗಾಲದಲ್ಲೂ ಜನರು ಮತ್ತೆ ಅದೇ ಸಮಸ್ಯೆಯನ್ನು ಎದುರಿಸಬೇಕಾಗಿರುವುದರಿಂದ ಜನರು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೊಡಗು ಕಾರ್ಮಿಕನ ಮೇಲೆ ಕಾಡಾನೆ ದಾಳಿ, ಮಂಗಳೂರಿನಲ್ಲಿ ರೈಲು ಡಿಕ್ಕಿಯಾಗಿ 17 ಜಾನುವಾರು ಬಲಿ!
ಈ ಕುರಿತು ಮಾತನಾಡಿರುವ ಸ್ಥಳೀಯರಾದ ಭರತ್ ಅವರು, ಕಳೆದ ನಾಲ್ಕೈದು ವರ್ಷಗಳಿಂದಲೂ ಮಳೆ ಬಂದಾಗಲೆಲ್ಲಾ ಭಾಗಮಂಡಲ ಪ್ರವಾಹದಿಂದ ಮುಳುಗಿ ಹೋಗುತ್ತಿದೆ. ಪರಿಣಾಮ ಅಂಗಡಿ ಮುಂಗಟ್ಟುಗಳು, ಸ್ಥಳೀಯ ಮನೆಗಳು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತವೆ. ಒಮ್ಮೆ ಪ್ರವಾಹದಲ್ಲಿ ಮುಳುಗಿತ್ತೆಂದರೆ 20 ದಿನಗಳವರೆಗೆ ಆ ತೊಂದರೆ ತಪ್ಪಿದ್ದಲ್ಲ. ಇನ್ನು ಇಲ್ಲಿ ಮುಳುಗಡೆ ಆಗುವುದರಿಂದ ಸುತ್ತಮುತ್ತಲಿನ ಹಲವು ಗ್ರಾಮಗಳ ಕುಟುಂಬಗಳು ತೀವ್ರ ಸಮಸ್ಯೆಗೆ ಸಿಲುಕುತ್ತವೆ. ಇದನ್ನು ಈ ವರ್ಷವಾದರೂ ತಪ್ಪಿಸುತ್ತಾರೆ ಎಂದುಕೊಂಡಿದ್ದೆವು. ಆದರೆ ಈ ವರ್ಷವೂ ಆ ಸಮಸ್ಯೆಯಿಂದ ಮುಕ್ತಿ ಇಲ್ಲ ಎಂದಿದ್ದಾರೆ.
ಕಾಮಗಾರಿ ಮುಗಿಯದಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮೇಲ್ಸೇತುವೆ ಕಾಮಗಾರಿ ಪ್ರಾಜೆಕ್ಟ್ ಮ್ಯಾನೇಜರ್ ಹರಿ ಅವರು ಮೇಲ್ಸೇತುವೆ ಕಾಮಗಾರಿಯನ್ನು ನಾವು ಮುಗಿಸುವ ಹಂತದಲ್ಲಿ ಇದ್ದೇವೆ. ಆದರೆ ಮೇಲ್ಸೇತುವೆಗೆ ಬೇಕಾಗಿರುವ ರ್ಯಾಂಪ್ ಅನ್ನು ಬೇರೊಬ್ಬರು ಗುತ್ತಿಗೆ ಪಡೆದಿದ್ದು, ಅವರು ಕಾಮಗಾರಿ ಮಾಡದಿರುವುದರಿಂದ ತಡವಾಗಿದೆ. ಅವರು ಎಷ್ಟು ಬೇಗ ಕಾಮಗಾರಿ ಮಾಡುತ್ತಾರೆಯೋ ನಾವು ಅಷ್ಟು ಬೇಗ ಕಾಮಗಾರಿ ಮುಗಿಸುತ್ತೇವೆ ಎಂದಿದ್ದಾರೆ.