ತಿರುಗಿಯೂ ನೋಡದ ಪುರಸಭೆಯ ಅಧಿಕಾರಿಗಳು|ಮೈಮರೆತ ಸಾರ್ವಜನಿಕರು|ಸರ್ಕಾರ ಕೊರೋನಾ ಜಾಗೃತಿಗಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಎಂದು ಸಾಕಷ್ಟು ಪ್ರಚಾರ ಮತ್ತು ಜಾಗೃತಿ ಮೂಡಿಸುತ್ತಿದ್ದರೂ ಸಾರ್ವಜನಿಕರು ಮಾತ್ರ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ|
ಅನಿಲ ಎಸ್. ಆಲಮೇಲ
ಕುಷ್ಟಗಿ(ಜೂ.22): ಜಗತ್ತಿನಾದ್ಯಂತ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಒಂದು ಕಡೆಯಾದರೆ ಪಟ್ಟಣದಲ್ಲಿ ಭಾನುವಾರದ ಸಂತೆ ಮೈದಾನದಲ್ಲಿ ಸಂತೆ ಮಾರಾಟ ಮತ್ತು ಕೊಳ್ಳುವವರ ಮುಖದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಮಾಯವಾಗಿದೆ.
ಭಾನುವಾರ ಇಲ್ಲಿನ ತರಕಾರಿ ಮಾರುಕಟ್ಟೆ ಆವರಣದಲ್ಲಿ ವಹಿವಾಟು ನಡೆಯಿತು. ಈ ಸಂದರ್ಭದಲ್ಲಿ ತರಕಾರಿ ವ್ಯಾಪಾರಿಗಳು ಮತ್ತು ಕೊಳ್ಳವವರು ಸೇರಿದಂತೆ ಇತರೆ ವ್ಯಾಪಾರಿಗಳು ಮಾಸ್ಕ್ ಹಾಕಿಕೊಂಡಿರಲಿಲ್ಲ. ಅಲ್ಲದೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ.
ಸರ್ಕಾರ ಕೊರೋನಾ ಜಾಗೃತಿಗಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಎಂದು ಸಾಕಷ್ಟುಪ್ರಚಾರ ಮತ್ತು ಜಾಗೃತಿ ಮೂಡಿಸುತ್ತಿದ್ದರೂ ಸಾರ್ವಜನಿಕರು ಮಾತ್ರ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಇದಕ್ಕೆ ಪಟ್ಟಣದಲ್ಲಿ ಭಾನುವಾರ ನಡೆದ ವಹಿವಾಟು ಸಾಕ್ಷಿ ಯಾಗಿತ್ತು.
ಕೊಪ್ಪಳ: ಕೊರೋನಾ ಪೀಡಿತರ ಚಿಕಿತ್ಸೆಗೆ 9 ಖಾಸಗಿ ಆಸ್ಪತ್ರೆ
ಇಲ್ಲಿನ ಪುರಸಭೆಯ ಅಧಿಕಾರಿಗಳು ಇತ್ತೀಚಿಗೆ ಕೊರೋನಾ ವೈರಸ್ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದರು. ಅಲ್ಲದೇ, ಮಾಸ್ಕ್ ದಿನವನ್ನೂ ಆಚರಿಸಿದ್ದರು. ಆದರೆ, ಇದು ದಿನಾಚರಣೆಗೆ ಮಾತ್ರ ಸಿಮೀತವಾಗಿತ್ತು.
ಪಟ್ಟಣ ಸೇರಿದಂತೆ ಕೆಲ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಸಂತೆಗೆ ಆಗಮಿಸಿದ್ದರು. ಆದರೆ, ಅಲ್ಲಲ್ಲಿ ಒಬ್ಬಿಬ್ಬರ ಮುಖದಲ್ಲಿ ಮಾಸ್ಕ್ ಕಂಡಿದ್ದು ಬಿಟ್ಟರೆ ಬಹುತೇಕ ಸಾರ್ವಜನಿಕರ ಮಾಸ್ಕ್ ಧರಿಸಿರಲಿಲ್ಲ. ಇಲ್ಲಿನ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸದ್ಯ ಬೇವಿನ ಬೀಜ ಖರೀದಿ ಮತ್ತು ಮಾರಾಟ ಜೋರಾಗಿದ್ದು, ಭಾನುವಾರ ಅಲ್ಲೂ ಸಾಮಾಜಿಕ ಅಂತರ ಮತ್ತು ಮಾಸ್ಕ್ ಮಾಯವಾಗಿತ್ತು. ಪಕ್ಕದ ಮಹಾರಾಷ್ಟ್ರದಿಂದ ಬೇವಿನ ಬೀಜಗಳನ್ನು ಖರೀದಿಸುವವರು ಮತ್ತು ಲಾರಿಗಳ ಚಾಲಕರು, ಮಾಲೀಕರು ಸೇರಿದಂತೆ ನೂರಾರು ಜನ ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಸಾರ್ವಜನಿಕರು ಮುಂಜಾಗ್ರತೆ ವಹಿಸದಿರುವುದು ಆತಂಕಕ್ಕೆ ಕಾರಣವಾಗಿದೆ.