ಕೊಪ್ಪಳ: ಕೊರೋನಾ ಪೀಡಿತರ ಚಿಕಿತ್ಸೆಗೆ 9 ಖಾಸಗಿ ಆಸ್ಪತ್ರೆ
ಆಸ್ಪತ್ರೆ ಮುಖ್ಯಸ್ಥರಿಗೆ ಮಾಹಿತಿಯೇ ಇಲ್ಲ| ನರ್ಸಿಂಗ್ ಹೋಂ ಮಾದರಿ ಆಸ್ಪತ್ರೆಗಳೂ ಆಯ್ಕೆ| ಕೊರೋನಾ ಚಿಕಿತ್ಸೆಗೆ ಆಸ್ಪತ್ರೆ ನೀಡಲು ಮಾಲೀಕರ ಹಿಂದೇಟು| ಆಯ್ಕೆಯಾದ 9 ಆಸ್ಪತ್ರೆಗಳಲ್ಲಿ ಬಹುತೇಕ ಆಸ್ಪತ್ರೆಗಳ ಮುಖ್ಯಸ್ಥರಿಗೆ ತಮ್ಮ ಕ್ಲಿನಿಕ್, ನರ್ಸಿಂಗ್ ಹೋಂಗಳನ್ನು ಆಯ್ಕೆ ಮಾಡಿರುವ ವಿಷಯವೆ ತಿಳಿದಿರಲಿಲ್ಲ|
ಮಯೂರ ಹೆಗಡೆ
ಕೊಪ್ಪಳ(ಜೂ.22): ಕೋವಿಡ್-19 ಪೀಡಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಜಿಲ್ಲೆಯಲ್ಲಿ ಒಂಬತ್ತು ಖಾಸಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಆಯ್ಕೆಯಾದ ಬಹುತೇಕ ಆಸ್ಪತ್ರೆಗಳ ಮುಖ್ಯಸ್ಥರಿಗೆ ಈ ಕುರಿತು ಮಾಹಿತಿಯೇ ಇಲ್ಲ. ಅದರಲ್ಲೂ ಸುಸಜ್ಜಿತವಲ್ಲದ, ಚಿಕ್ಕ ಆಸ್ಪತ್ರೆಗಳನ್ನೂ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಯ್ಕೆ ಮಾಡಿದ್ದು ಏಕೆಂಬ ಪ್ರಶ್ನೆ ಮೂಡಿದೆ.
ಒಂದು ವೇಳೆ ಕೋವಿಡ್-19 ವ್ಯಾಪಕವಾಗಿ ಪಸರಿಸಿ ತುರ್ತು ಪರಿಸ್ಥಿತಿ ಎದುರಾದರೆ ನಿಭಾಯಿಸಲು ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಕೊರೋನಾ ಸೋಂಕಿತ ಬಯಸಿದಲ್ಲಿ ಅನುವಾಗಲಿ ಎಂಬ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಯನ್ನು ಹೊರತುಪಡಿಸಿ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ಆಯ್ಕೆ ಮಾಡಿ ಪಟ್ಟಿಬಿಡುಗಡೆ ಮಾಡಿದೆ. ಆದರೆ, ಈ ಪಟ್ಟಿಗೆ ಕೊಪ್ಪಳ ಜಿಲ್ಲೆಯಲ್ಲಿ ಯಾವ ಮಾನದಂಡದಲ್ಲಿ ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ ಎಂಬುದೆ ತಿಳಿಯದಾಗಿದೆ.
ಕಾರಣಗಳು ಹಲವು. ಆಯ್ಕೆಯಾದ 9 ಆಸ್ಪತ್ರೆಗಳಲ್ಲಿ ಬಹುತೇಕ ಆಸ್ಪತ್ರೆಗಳ ಮುಖ್ಯಸ್ಥರಿಗೆ ತಮ್ಮ ಕ್ಲಿನಿಕ್, ನರ್ಸಿಂಗ್ ಹೋಂಗಳನ್ನು ಆಯ್ಕೆ ಮಾಡಿರುವ ವಿಷಯವೆ ತಿಳಿದಿರಲಿಲ್ಲ. ಇತರ ಜಿಲ್ಲೆಗಳಲ್ಲಿ ಆಸ್ಪತ್ರೆಗಳನ್ನು ಆಯ್ಕೆ ಮಾಡುವ ಮುನ್ನ ಮುಖ್ಯಸ್ಥರ ಜತೆ ಒಂದು ಸುತ್ತಿನ ಮಾತುಕತೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಕೊರೋನಾ ಪೀಡಿತರ ಚಿಕಿತ್ಸೆಗೆ ಸಾಧ್ಯವಾಗದಂತ ಆಸ್ಪತ್ರೆಗಳನ್ನು ಕೂಡ ಜಿಲ್ಲೆಯಲ್ಲಿ ಆಯ್ಕೆ ಮಾಡಲಾಗಿದೆ. ಇದರಿಂದ ಆಸ್ಪತ್ರೆ ಮುಖ್ಯಸ್ಥರು ಕೂಡ ಕೊರೋನಾ ಚಿಕಿತ್ಸೆಗೆ ತಮ್ಮ ಆಸ್ಪತ್ರೆಗಳನ್ನು ನೀಡಲು ಹಿಂದೇಟು ಹಾಕುವ ಸಾಧ್ಯತೆ ಇದೆ.
ಅಪ್ಪಂದಿರ ದಿನದಂದು ತಂದೆಯೊಬ್ಬನ ಹೇಯ ಕೃತ್ಯ: ಮಗಳಿಗೇ ಮಗು ನೀಡಿದ ಪಾಪಿ
ನರ್ಸಿಂಗ್ ಹೋಂ
ಗಂಗಾವತಿಯ ಯಶೋಧಾ ಹಾಸ್ಪಿಟಲ್, ತೇಜಸ್ವಿನಿ ಚಿಲ್ಡ್ರನ್ ಹಾಸ್ಪಿಟಲ್‌ಗಳು ನರ್ಸಿಂಗ್ ಹೋಂ ಮಾದರಿಯಲ್ಲಿವೆ. ಇಲ್ಲಿ ಸಾಮಾನ್ಯ ಜ್ವರ, ಬಿಪಿ, ಶುಗರ್ ಕಾಯಿಲೆ ಸೇರಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನಾ ಪೀಡಿತರಿಗಾಗಿ ಪ್ರತ್ಯೇಕ ವಾರ್ಡ್ ನಿಗದಿಸುವುದು, ಸಾಮಾನ್ಯ ರೋಗಿಗಳಿಂದ ಅವರನ್ನು ಪ್ರತ್ಯೇಕವಾಗಿ ದೂರ ಇಡುವುದು ಇಲ್ಲಿ ಕಷ್ಟಸಾಧ್ಯ. ಹೀಗಾಗಿ, ಈ ಆಸ್ಪತ್ರೆಗಳ ಮುಖ್ಯಸ್ಥರು ಡಿಎಚ್‌ಒ ಜತೆಗೆ ಈ ಕುರಿತು ಚರ್ಚೆ ನಡೆಸಲು ಮುಂದಾಗಿದ್ದಾರೆ.
ವಾಟ್ಸ್‌ಆಪ್ ಸಂದೇಶದ ಮೂಲಕವೆ ನಮ್ಮ ಆಸ್ಪತ್ರೆ ಆಯ್ಕೆ ಆಗಿರುವ ಸಂಗತಿ ತಿಳಿದಿದೆ. ಈ ಕುರಿತು ಡಿಎಚ್‌ಒ ಅವರಿಂದ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದು ಕೊಪ್ಪಳದ ಕೆಎಸ್ ಹೆಲ್ತ್‌ಕೇರ್‌ನ ಮುಖ್ಯಸ್ಥರಾದ ಡಾ. ಬಸವರಾಜ ಹೇಳಿದರು.
ಈ ಕುರಿತು ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಲಿಂಗರಾಜು, ಪ್ರಸ್ತುತ ಜಿಲ್ಲೆಯಲ್ಲಿ 9 ಆಸ್ಪತ್ರೆಗಳನ್ನು ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಬಹುದೆಂದು ಆಯ್ಕೆ ಮಾಡಲಾಗಿದೆ. ಆದರೆ ಸಧ್ಯಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಪೀಡಿತರಿಗೆ ಚಿಕಿತ್ಸೆ ಕೊಡಿಸಬೇಕಾದಂತ ಪರಿಸ್ಥಿತಿ ಜಿಲ್ಲೆಯಲ್ಲಿ ಇಲ್ಲ. ಅಲ್ಲದೆ, ದರ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ನಿರ್ಧಾರ ಆಗಬೇಕಾಗಿದೆ ಎಂದರು.
ಯಾವ್ಯಾವ ಆಸ್ಪತ್ರೆ
1) ಲಯನ್ಸ್ ಕ್ಲಬ್ ಚ್ಯಾರಿಟೇಬಲ್ ಟ್ರಸ್ಟ್ ಆಸ್ಪತ್ರೆ ಕೊಪ್ಪಳ
2) ವಿವೀಕಾ ಶ್ರೀನಿವಾಸ ಆಯ್ ಹಾಸ್ಪಿಟಲ್ ಹನುಮಸಾಗರ
3) ಡಾ. ಸುಭಾಸ್ ಕಾಕಡಕಿ ಆಯ್ ಹಾಸ್ಪಿಟಲ್ ಕುಷ್ಟಗಿ
4) ಮಾರುತಿ ಐ ಆ್ಯಂಡ್ ಡೆಂಟಲ್ ಹಾಸ್ಪಿಟಲ್ ಗಂಗಾವತಿ
5) ಕೆಎಸ್ ಹೆಲ್ತ್ ಕೇರ್
6) ಶ್ರೀ ಮಲ್ಲಿಕಾರ್ಜುನ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್
7) ತೇಜಸ್ವಿನಿ ಚಿಕ್ಕಮಕ್ಕಳ ಹಾಸ್ಪಿಟಲ್
8) ಯಶೋಧಾ ಹಾಸ್ಪಿಟಲ್
9) ಅಮರ್ ಹಾಸ್ಪಿಟಲ್ ಚಿಲ್ಡ್ರನ್ ಕೇರ್ ಕ್ಲಿನಿಕ್
ಈಗ ಸದ್ಯಕ್ಕೆ ಜಿಲ್ಲಾಸ್ಪತ್ರೆ ಕೋವಿಡ್-19 ಪ್ರಕರಣಗಳನ್ನು ನಿಭಾಯಿಸಲು ಸಶಕ್ತವಾಗಿದೆ. ತುರ್ತು ಪರಿಸ್ಥಿತಿ ಎದುರಾದರೆ ನಿಭಾಯಿಸಲು ಅನುಕೂಲವಾಗಲಿ ಎಂದು ಖಾಸಗಿ ಆಸ್ಪತ್ರೆ ಗುರುತಿಸಲಾಗಿದೆ. ಜಿಲ್ಲಾಧಿಕಾರಿಗಳ ಜತೆ ಈ ಬಗ್ಗೆ ಸಭೆ ನಡೆಸಿ ಕೆಲ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಡಿಎಚ್‌ಒ ಡಾ ಲಿಂಗರಾಜು ಅವರು ಹೇಳಿದ್ದಾರೆ.
ನಮ್ಮ ಆಸ್ಪತ್ರೆಯನ್ನು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಯ್ಕೆ ಮಾಡಿರುವ ಕುರಿತು ನಮಗೆ ಯಾವುದೆ ಮಾಹಿತಿ ಬಂದಿಲ್ಲ. ಆಸ್ಪತ್ರೆ ಸುಸಜ್ಜಿತವಾಗಿದೆ. ಎಷ್ಟುಬೆಡ್‌ಗಳನ್ನು ಪೀಡಿತರಿಗೆ ನಿಗದಿಸಬೇಕು ಎಂಬ ಕುರಿತಂತೆಲ್ಲ ನಿರ್ಧಾರವಾಗಿಲ್ಲ ಎಂದು ಅಮರ ಹಾಸ್ಪಿಟಲ್ ಚೈಲ್ಡ್‌ಕೇರ್ ಕ್ಲಿನಿಕ್ ಡಾ. ಅಮರ ಪಾಟೀಲ್ ತಿಳಿಸಿದ್ದಾರೆ.
ನಮ್ಮದು ಚಿಕ್ಕ ಆಸ್ಪತ್ರೆ. ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಐಸೋಲೇಶನ್ ವಾರ್ಡ್ ರೂಪಿಸುವ ಅಗತ್ಯವಿರುತ್ತದೆ. ನಮ್ಮ ಆಸ್ಪತ್ರೆ ಆಯ್ಕೆಯಾದ ಬಗ್ಗೆ ಮಾಹಿತಿಯೂ ಇರಲಿಲ್ಲ ಎಂದು ಗಂಗಾವತಿಯ ಯಶೋಧಾ ಹಾಸ್ಪಿಟಲ್ ಡಾ. ಸತೀಶ್ ರಾಯ್ಕರ್ ಅವರು ಹೇಳಿದ್ದಾರೆ.